ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಸರ್ಕಾರಿ ಪ್ರೌಢ ಶಾಲೆಯನ್ನು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಿ ಸಕಲ ಸಿದ್ಧತೆ ನಡೆಸಲಾಗಿತ್ತು. ಇಂದು ನಿಗದಿಯಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ತಯಾರಿ ಮಾಡಲಾಗಿತ್ತು.
ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಗೇಟ್, ಕೊಠಡಿಗಳ ಬಾಗಿಲು ಮುರಿದು, ಕೊಠಡಿಗಳಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತು, ಮತ್ತೆ ಜೋಡಿಸು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
10 ಕೊಠಡಿಗಳಲ್ಲಿ 14 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ 6 ಕ್ಯಾಮೆರಾಗಳನ್ನು ಕಿತ್ತೆಸೆದಿದ್ದಾರೆ. ವಿಚಾರ ತಿಳಿದ ಪೊಲೀಸರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ನಾಶಪಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತೆ ಜೋಡಿಸಿ, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ.