ಎಸ್.ಎಲ್.ಆರ್.ಎಸ್ ಶಾಲೆಯಲ್ಲಿ ಓದಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸನ್ಮಾನ

ದೊಡ್ಡಬಳ್ಳಾಪುರ: ಶಾಲೆ ಎಂದರೆ ಒಂದು ದೇವರ ಮನೆ ಇದ್ದ ಹಾಗೆ, ಅದೇ ರೀತಿಯಾಗಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇದು ನಮ್ಮ ಶಾಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಎಸ್. ಎಲ್. ಆರ್. ಎಸ್. ಶಾಲೆಯ ಕಾರ್ಯದರ್ಶಿ ರಮೇಶ್  ಹೇಳಿದರು.

ತೂಬಗೆರೆ ಎಸ್.ಎಲ್.ಆರ್.ಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ಮಾಡುತ್ತಿರುವ ಎಸ್ .ಎಲ್.ಆರ್.ಎಸ್ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ನಮ್ಮ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಇಂದು ವಿವಿಧ ಕೋರ್ಸ್‌ಗಳನ್ನು ಮಾಡುತ್ತಿದ್ದು, ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ನೀಡುವುರಿಂದ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ನಮ್ಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಪ್ರೇರೇಪಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪಶುವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹಳೆಯ ವಿದ್ಯಾರ್ಥಿ ಸ್ವರೂಪ್ ಮಾತನಾಡಿ, ಈಗಿನ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವದನ್ನು ನಿಲ್ಲಿಸಬೇಕು. ಮೊಬೈಲ್ ಕೊಡುವುದರ ಬದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಆದಷ್ಟು ಸಾಮಾಜಿಕ ಮಾಧ್ಯಮಗಳಿಂದ ದೂರವಿರಬೇಕು ಎಂದು ಮಕ್ಕಳಿಗೆ ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಅನೀಸ್, ಶಾಲೆಯ ಕಾರ್ಯದರ್ಶಿ ರಮೇಶ್, ಗ್ರಾಮದ ಹಿರಿಯ ಮುಖಂಡ ಮುನಿರಾಜು, ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರು, ಹಳೆಯ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *