ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಚುಂಚೇಗೌಡನ ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಕುರಿ ಮಂದೆಗೆ ನೀರು ಕುಡಿಸಲು ಹೋಗಿ ಕುರಿಗಾಹಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಶಿರಾ ಮೂಲದ ಚಂದ್ರು (22) ಸಾವನ್ನಪ್ಪಿದ ಕುರಿಗಾಹಿ.
ಎಸ್ ಎನ್ ಸಿ ಕಂಪನಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕೆರೆಯಲ್ಲಿ ಕುರಿಗಾಹಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮಾಹಿತಿ ಹಕ್ಕು ವೇದಿಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ಹಿಂದೆ ಎಸ್ ಎನ್ ಸಿ ಕಂಪನಿ ವಿರುದ್ಧವಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು, ಈ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ಇಲ್ಲಿನ ಅಧಿಕಾರಿಗಳು ಸುಳ್ಳು ವರದಿ ನೀಡಿದ್ದು, ಅವರ ವಿರುದ್ಧ ಹಾಗೂ ಗಲಾಟೆ ಮಾಡಿದ್ದ ಗ್ರಾಮದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಅಧ್ಯಕ್ಷ ವಿ.ಹನುಮಂತರಾಯಪ್ಪ ಹಾಗೂ ಉಪಾಧ್ಯಕ್ಷ ತ್ಯಾಗರಾಜು ಒತ್ತಾಯಿಸಿದ್ದಾರೆ.
ಏನಿದು ಕೆರೆ ವಿವಾದ..?
ಚುಂಚೇಗೌಡನ ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಎನ್ಎನ್ಸಿ ಸುಮಾರು 40 ಅಡಿ ಮಣ್ಣಿನ್ನು ತೆಗೆದು ಕೆರೆಯ ಮೂಲ ಸ್ವರೂಪವನ್ನೇ ಹಾಳು ಮಾಡಲಾಗಿದ್ದು, ಇದು ಕರ್ನಾಟಕ ಕೆರೆ ಸಂರಕ್ಷಣಾ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಅಂದಿನ ಡಿಸಿ ಕೆ.ಶ್ರೀನಿವಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ರೇಣುಕಾ ಸೇರಿದಂತೆ 11 ಮಂದಿ ಅದಿಕಾರಿಗಳಿಗೆ ದೂರು ನೀಡಲಾಗಿದ್ದು, ಆದರೆ, ಯಾವ ಅಧಿಕಾರಿಯೂ ಕ್ರಮ ಜರುಗಿಸಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಕುರಿಗಾಹಿಯ ಸಾವು ಸಂಭವಿಸಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದೆ.