ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಆರು ತಿಂಗಳವರೆಗೆ ನೀರು ಪೂರೈಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಸೂಚಿಸಿದರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯ ಅಂತರ್ಜಲ ಶುದ್ಧಿ ಆಗಬೇಕಾದರೆ ಆರು ತಿಂಗಳು ಬೇಕಾಗುತ್ತದೆ, ಅಷ್ಟರಲ್ಲಿ ಎಸ್‌ಟಿಪಿ ಪ್ಲಾಂಟ್, ಪೈಪ್‌ಲೈನ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದರು.
ಶನಿವಾರ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದು ಅಷ್ಟರಲ್ಲಿ ತಾಲ್ಲೂಕಿನಲ್ಲಿ ಜಿಲ್ಲಾ ಪರಿಷತ್ ರಸ್ತೆಗಳೂ ಸೇರಿದಂತೆ ಹದಗೆಟ್ಟ ರಸ್ತೆಗಳು ಮತ್ತು ತುರ್ತಾಗಿ ಮಾಡಲೇಬೇಕಾದ ರಸ್ತೆಗಳು, ತಾಲ್ಲೂಕಿನಲ್ಲಿ ಹದಗೆಟ್ಟಿರುವ ಆರ್‌ಒ ಪ್ಲಾಂಟ್‌ಗಳು ಹೊಸದಾಗಿ ಆರಂಬಿಸಬೇಕಾದ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ಸಭೆಯಲ್ಲಿ ತಹಶಿಲ್ದಾರ್ ಮೋಹನಕುಮಾರಿ, ಇಒ ಶ್ರೀನಾಥ್‌ಗೌಡ, ಪಿಡಬ್ಲೂ ಇಂಜಿನಿಯರ್ ಜಯಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಎಸ್‌ಆರ್.ಮುನಿರಾಜು, ರಂಗಪ್ಪ, ಕೆಪಿ.ಜಗನ್ನಾಥ್, ಅಖಿಲೇಶ್, ಆರ್‌ವಿ.ಮಹೇಶ್, ರಾಮಕೃಷ್ಣ ಸೇರಿದಂತೆ ತಾಲ್ಲೂಕು ಮಟ್ಟದ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.