ಎಸ್ಎಸ್ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶೇಕಡ 73.40 ಫಲಿತಾಂಶ ದಾಖಲು: ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ: ಯಾದಗಿರಿಗೆ ಕೊನೆ ಸ್ಥಾನ

2024ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಗೊಳಿಸಿದೆ.

ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ  ಫಲಿತಾಂಶ ವೀಕ್ಷಿಸಬಹುದು.

ಪರೀಕ್ಷೆ ಬರೆದ ಒಟ್ಟು 8,59,967 ವಿದ್ಯಾರ್ಥಿಗ ಪೈಕಿ 6,31,204 ವಿದ್ಯಾರ್ಥಿಗಳು ಪಾಸಾಗಿದ್ದು, ಈ ಸಾಲಿನಲ್ಲಿ ಶೇಕಡ 73.40 ಫಲಿತಾಂಶ ದಾಖಲಾಗಿದೆ.

ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದ ವಿಶೇಷವೆಂದರೆ ಒಬ್ಬ ವಿದ್ಯಾರ್ಥಿನಿ ಮಾತ್ರ 625ಕ್ಕೆ 625 ಅಂಕ ಗಳಿಸಿದ್ದಾರೆ.

ಬಾಗಲಕೋಟದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 625ಕ್ಕೆ 625 ಅಂಕ ಗಳಿಸಿರುವ ಏಕೈಕ ವಿದ್ಯಾರ್ಥಿನಿ.

7 ವಿದ್ಯಾರ್ಥಿಗಳು 625ಕ್ಕೆ 624 ಅಂಕ ಗಳಿಸಿದ್ದಾರೆ.ದಕ್ಷಿಣ ಕನ್ನಡದ ಚಿನ್ಮಯ್, ಚಿಕ್ಕೋಡಿಯ ಸಿದ್ದಾಂತ್, ಮಧುಗಿರಿಯ ಹರ್ಷಿತಾ ಡಿ. ಎಂ, ಬೆಂಗಳೂರಿನ ವೇದಾ ಪಿ ಶೆಟ್ಟಿ, ಉಡುಪಿಯ ಸಹನಾ, ಶಿರ್ಸಿಯ ದರ್ಶನ್, ಚಿನ್ಮಯ್, ಸಿದ್ದಾಂತ್ ಕೂಡ ದ್ವಿತೀಯ ಸ್ಥಾನದಲ್ಲಿದ್ದಾರೆ.

ಮಾರ್ಚ್ 25, 2024 ರಿಂದ ಏಪ್ರಿಲ್ 6, 2024 ರವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ 441910 ವಿದ್ಯಾರ್ಥಿಗಳು ಮತ್ತು 428058 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ 6,31,204 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಬಾರಿ ರಾಜ್ಯಾದ್ಯಂತ 76.91% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

 2,87,416 (65.90%) ಬಾಲಕರು ಪಾಸ್ ಆಗಿದ್ದು, 3,43,788 (81.11%) ಬಾಲಕಿಯರು ತೇರ್ಗಡೆಯಾಗಿದ್ದಾರೆ.  ಇದರೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕಿಯರು ಅಗ್ರಸ್ಥಾನ ಪಡೆದಿದ್ದಾರೆ. ಉಡುಪಿ ಪ್ರಥಮ ಸ್ಥಾನ (ಶೇ.94) ಪಡೆದಿದೆ. ದಕ್ಷಿಣ ಕನ್ನಡ (ಶೇ.92.12) ಜಿಲ್ಲೆ ದ್ವಿತೀಯ ಹಾಗೂ ಶಿವಮೊಗ್ಗ (ಶೇ.88.67) ತೃತೀಯ ಸ್ಥಾನ ಪಡೆದಿವೆ. ಯಾದಗಿರಿ ಜಿಲ್ಲೆ ರಾಜ್ಯದಲ್ಲಿ ಶೇಕಡಾವಾರು (50.59%) ಕೊನೆಯ ಸ್ಥಾನದಲ್ಲಿದೆ.

ಬೆಂ.ಗ್ರಾ. ಜಿಲ್ಲೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 83.67 ರಷ್ಟು ಫಲಿತಾಂಶ

2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 83.67 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಒಂಬತ್ತನೆಯ ಸ್ಥಾನ ಪಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 14223 ವಿದ್ಯಾರ್ಥಿಗಳಲ್ಲಿ 11900 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ, ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿ ಸ್ನೇಹ.‌ಎಲ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಶಾಂತಿನಿಕೇತನ ಆಂಗ್ಲ ಶಾಲೆಯ ಮಹೇಶ್ವರಿ 625 ಕ್ಕೆ 620 ಅಂಕ ಪಡೆದು ದ್ವಿತೀಯ ಸ್ಥಾನ, ದೊಡ್ಡಬಳ್ಳಾಪುರ ಟೌನ್ ನ ನಳಂದ ಪ್ರೌಢಶಾಲೆಯ ಪೂರ್ಣ ಶ್ರೀ 625 ಕ್ಕೆ 619 ಅಂಕಿಗಳು ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.

6988 ಬಾಲಕಿಯರ ಪೈಕಿ 6171 ಬಾಲಕಿಯರು ಉತ್ತೀರ್ಣರಾಗಿ ಶೇ. 88.31 ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಬಾಲಕರು 7235 ಕ್ಕೆ 5729 ಉತ್ತೀರ್ಣತೆ ಪಡೆದು ಶೇ. 79.18 ರಷ್ಟು ಫಲಿತಾಂಶ ಪಡೆದಿದ್ದಾರೆ.

ದೇವನಹಳ್ಳಿ ಶೇ. 88.2 ರಷ್ಟು, ದೊಡ್ಡಬಳ್ಳಾಪುರ ಶೇ. 83.13 ರಷ್ಟು, ಹೊಸಕೋಟೆ ತಾಲ್ಲೂಕು ಶೇ. 82.22 ರಷ್ಟು ಹಾಗೂ ನೆಲಮಂಗಲ ತಾಲ್ಲೂಕು ಶೇ. 79.51 ರಷ್ಟು ಫಲಿತಾಂಶ ಪಡೆದಿವೆ.

Leave a Reply

Your email address will not be published. Required fields are marked *