ಕೋಲಾರ: ನಗರದ ಎಸ್.ಎನ್ ಆರ್ ಜಿಲ್ಲಾಸ್ಪತ್ರೆಗೆ ಖಾಯಂ ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನು ನೇಮಕ ಮಾಡಿ ಗ್ರಾಮೀಣ ಪ್ರದೇಶದ ಬಡ ರೈತ ಕೂಲಿಕಾರ್ಮಿಕರಿಗೆ ಆರೋಗ್ಯ ನೀಡುವಂತೆ ಆರೋಗ್ಯ ಸಚಿವರನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದರು.
ಕಳೆದ ಒಂದು ವರ್ಷದಿಂದ ಜಿಲ್ಲಾಸ್ಪತ್ರೆಗೆ ಖಾಯಂ ಶಸ್ತ್ರ ಚಿಕಿತ್ಸಕರನ್ನು ನೇಮಕ ಮಾಡುವಲ್ಲಿ ಉಸ್ತುವಾರಿ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳು ವಿಫಲವಾಗಿ ಬಡವರ ಆರೋಗ್ಯವನ್ನು ಖಾಸಗಿ ಆಸ್ಪತ್ರೆ, ನಕಲಿ ಕ್ಲಿನಿಕ್ ವೈದ್ಯರಿಗೆ ಮಾರಾಟ ಮಾಡುತ್ತಿದ್ದಾರೆಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆ ನೋಡಲು ತಾಜ್ ಮಹಲ್ ನಂತೆ ಕಂಗೊಳಿಸುತ್ತಿರುತ್ತದೆ. ಲಕ್ಷ ಲಕ್ಷ ಸಂಬಳ ಪಡೆಯುವ ವೈದ್ಯರು ಅಲ್ಲಿನ ಸಿಬ್ಬಂದಿ ಮೊಬೈಲ್ ಗಳಲ್ಲಿ ತಲ್ಲೀನರಾಗಿ ರೋಗಿಗಳ ಕಡೆ ಗಮನಹರಿಸದೆ ಮೂಲಭೂತ ಸೌಕರ್ಯಗಳು ವಂಚಿತ ಆಸ್ಪತ್ರೆಯಾಗಿ ಮಾರ್ಪಾಡಾಗಿರುವ ಜೊತೆಗೆ ನೆಪ ಮಾತ್ರಕ್ಕೆ ಕೆಲಸಕ್ಕೆ ಹಾಜರಾಗಲು ಬಯೋಮೆಟ್ರಿಕ್ ತಂಬ್ ನೀಡಿ ನಾಪತ್ತೆಯಾದರೆ ಮತ್ತೆ ಸಾಯಂಕಾಲ ಬಯೋಮೆಟ್ರಿಕ್ ಕಡೆ ಮುಖ ಮಾಡಿ ಸರ್ಕಾರದ ಕೆಲಸಕ್ಕೆ ದ್ರೋಹ ಬಗೆಯುತ್ತಿದ್ದಾರೆಂದು ಆರೋಪಿಸಿದರು.
ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯ ಸ್ವಚ್ಛತೆಯಿಲ್ಲ, ರಕ್ತ ಪರೀಕ್ಷೆ ಕೇಂದ್ರಗಳಲ್ಲಿ ಸೌಲಭ್ಯಗಳಿಲ್ಲ ಪ್ರತಿಯೊಂದು ಆಸ್ಪತ್ರೆಯಲ್ಲಿ ಅವ್ಯವಸ್ಥೆಯಾಗಿದ್ದರೂ ಸರಿಪಡಿಸಬೇಕಾದ ಜನಪ್ರತಿನಿಧಿಗಳು ನಾಪತ್ತೆಯಾಗಿ ಆರೋಗ್ಯ ಸಚಿವರು ಬಂದಾಗ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡದೆ ಎಲ್ಲಾ ಸೌಲಭ್ಯಗಳು ರೋಗಿಗಳಿಗೆ ದೊರೆಯುತ್ತವೆ ಎಂದು ದಿಕ್ಕುತಪ್ಪಿಸುವ ಜನಪ್ರತಿನಿಧಿಗಳಿಗೆ ಬಡವರ ಶಾಪ ತಟ್ಟುವ ಕಾಲ ದೂರವಿಲ್ಲ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಿಲ್ಲದೆ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತಾಗಿರುವ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಕ ಮಾಡಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಆರೋಗ್ಯ ನೀಡುವಂತೆ ಆರೋಗ್ಯ ಸಚಿವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುತ್ತೇರಿ ರಾಜು ಇದ್ದರು.