
ಎಸಿ ಕೋರ್ಟ್ ಗಳಲ್ಲಿ 6 ತಿಂಗಳಿಗಿಂತ ಹೆಚ್ಚಿನ ಅವಧಿಯ ಎಲ್ಲಾ ತಕರಾರು ಪ್ರಕರಣಗಳನ್ನು ಅಂತ್ಯಗೊಳಿಸಬೇಕು, ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆಯ ಉದ್ದೇಶ. ಆದರೆ, ಒಂದೂವರೆ ವರ್ಷ ಕಳೆದರೂ ಇದು ಸಾಧ್ಯವಾಗದಿರುವುದು ದುರಾದೃಷ್ಟಕರ. ಹೀಗಾಗಿ ಮುಂದಿನ 6 ತಿಂಗಳೊಳಗಾಗಿ ಅವಧಿ ಮೀರಿದ ಎಲ್ಲಾ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು ಎಂದು ಇಂದಿನ ಉಪ ವಿಭಾಗಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಲ್ಲಾ ಅಧಿಕಾರಿಗಳಿಗೂ ಸಮಯದ ಗಡುವನ್ನು ನಿಗದಿ ಮಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ.
ಉಪ ವಿಭಾಗಾಧಿಕಾರಿಗಳ(ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಆರು ತಿಂಗಳೊಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಗಡುವನ್ನು ನಿಗದಿಗೊಳಿಸಿದ್ದಾರೆ.
ವಿಕಾಸಸೌಧದಲ್ಲಿ ವೀಡಿಯೊ ಕಾನ್ಸರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆಗೆ ಏಕ ಕಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳ ಅವಧಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನಿದೆ ಎಂದು ಹೇಳಿದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರಿದ ವೇಳೆ ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 60 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳನ್ನೂ ಮುಂದಿನ ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಿ, ಸರ್ಕಾರಿ ಕಚೇರಿಗಳಿಗೆ ಜನರ ಅನಗತ್ಯ ಅಲೆದಾಟಕ್ಕೆ ತಡೆ ಹಾಕಬೇಕು ಎಂಬುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ದೇಶವಾಗಿತ್ತು. ಆದರೆ, ಒಂದೂವರೆ ವರ್ಷ ಕಳೆದರೂ ನಮ್ಮ ಈ ಉದ್ದೇಶ ಈಡೇರಿಲ್ಲ, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಶೇ.55ರಷ್ಟು ಪ್ರಕರಣಗಳನ್ನು ಮಾತ್ರ ವಿಲೇ ಮಾಡಲಾಗಿದೆ. ಎಸಿ ನ್ಯಾಯಾಲಯಗಳಲ್ಲಿ ಇನ್ನೂ29 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರು ತಿಂಗಳ ನಂತರವೂ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಪ್ರತೀ ತಿಂಗಳೂ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಲಾಗುವುದು. ನ್ಯಾಯಾಲಯಗಳ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ಥಿ, ನಮೂನೆ 3-9 ಮಿಸ್ ಮ್ಯಾಚ್ ಹಾಗೂ ಪೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು ಎಂದರು.
ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತ ಸುನೀಲ್ ಕುಮಾರ್, ಸರ್ವೆ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.