ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸರ್ಕಾರಿ ಬಸ್ಸುಗಳು: ಪ್ರಯಾಣಿಕರಿಗೆ ತಪ್ಪದ ಪರದಾಟ: ಕ್ಯಾರೆ ಎನ್ನದ ಸಾರಿಗೆ ಡಿಪಾರ್ಟ್ ಮೆಂಟ್

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಸರ್ಕಾರಿ ಬಸ್ಸುಗಳಿಂದ ಪ್ರತಿನಿತ್ಯ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಾರಿಗೆ ಇಲಾಖೆ ಯಾವ ಕ್ರಮಕೈಗೊಳ್ಳದೆ ಕಣ್ಣುತೆರೆದು ಹಗಲು ನಿದ್ದೆ ಮಾಡುತ್ತಿದೆ.

ಉಜ್ಜನಿ ಹೊಸಹಳ್ಳಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ವಾರಕ್ಕೊಮ್ಮೆ ತಾಂತ್ರಿಕ ಸಮಸ್ಯೆಗಳಿಂದ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಅದೇರೀತಿ ಇಂದು ಸಂಜೆ ದೊಡ್ಡಬಳ್ಳಾಪುರದಿಂದ ಉಜ್ಜನಿ- ಹೊಸಹಳ್ಳಿಗೆ ತೆರಳುತ್ತಿದ್ದ ಬಸ್ ದೊಡ್ಡಹಳ್ಳ ಸಮೀಪ ಕೆಟ್ಟುನಿಂತಿದೆ. ಇದರಿಂದ ಪ್ರಯಾಣಿಕರು ಇತ್ತ‌ ಮನೆಗೂ ಹೋಗದೇ, ಅತ್ತ ವಾಪಸ್ ದೊಡ್ಡಬಳ್ಳಾಪುರಕ್ಕೂ ಬರದೇ ದಟ್ಟ ಅರಣ್ಯ ಪ್ರದೇಶದಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ ನಗರದಿಂದ ಸುಮಾರು 20-30ಕಿಲೋ ಮೀಟರ್ ದೂರದ ಗ್ರಾಮಗಳಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ರೋಗಿಗಳು ಬೆಂಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ಇತರೆ ಕಡೆಗಳಿಗೆ ಸಂಚಾರ ಮಾಡುತ್ತಾರೆ. ಈ ಕುಗ್ರಾಮಗಳಿಗೆ ಬೆಳಗ್ಗೆ, ಸಂಜೆ ಮಾತ್ರ ಬಸ್ ವ್ಯವಸ್ಥೆ ಇರುತ್ತವೆ. ಈ ಬಸ್ ಗಳು ಅರ್ಧ ದಾರಿಯಲ್ಲೇ ತಾಂತ್ರಿಕ ದೋಷಗಳಿಂದ ಮುಂದಕ್ಕು ಹೋಗಲ್ಲ,‌ ಹಿಂದಕ್ಕೂ ಬರಲ್ಲ. ಒಂದು ದಿನ ಸ್ಟೇರಿಂಗ್ ಕಟ್ಟಾಗುತ್ತದೆ. ಪಂಚರ್ ಆಗುತ್ತದೆ. ಡೀಸೆಲ್ ಪಂಪ್ ಆಗಲ್ಲ, ಇಂಜಿನ್ ಹೀಟ್ ಸೇರಿದಂತೆ ಇತರೆ ಸಮಸ್ಯೆಗಳಿಂದ ಬಸ್ ಸಂಚಾರ ಮಾಡದೇ ನಿಲ್ಲುತ್ತವೆ ಎಂದು ದೂರಿದ್ದಾರೆ.

ರಿಮೋಟ್ ಊರುಗಳಿಗೆ ಹಾಳಾದ ಬಸ್, ಹಳೇ ಬಸ್, ಟೆಸ್ಟಿಂಗ್ ಬಸ್ಸುಗಳನ್ನು ಹಾಕುತ್ತಾರೆ.‌ ಈ ಕುರಿತು ಡಿಪೋ ಮ್ಯಾನೇಜರ್ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ಸಾರಿಗೆ ಇಲಾಖಾಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!