ಎಲ್ಲಾ ಸಮುದಾಯದ ಏಳಿಗೆಗೆ ಶ್ರಮಿಸಿದವರು ನಾಡಪ್ರಭು ಕೆಂಪೇಗೌಡರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ

 

ಕೆರೆ, ಕುಂಟೆ, ಕೋಟೆ, ಪೇಟೆಗಳನ್ನು ನಿರ್ಮಿಸಿದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಏಳಿಗೆಗೆ ಶ್ರಮಿಸಿದವರು. ಬೆಂಗಳೂರು ನಗರವು ವಿಶ್ವದಲ್ಲಿ ಹೆಸರು ಮಾಡಲು ಕಾರಣ ಎಂದರೆ ಅದು ಕೆಂಪೇಗೌಡರ ಕೊಡುಗೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿ ಇಂದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ(ಪುತ್ಥಳಿ) ಅನಾವರಣಗೊಳಿಸಿ ಹಾಗೂ ಜಯಂತ್ಯೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ವಂಶಸ್ಥರ ಮೂಲ ಸ್ಥಾನ ದೇವನಹಳ್ಳಿಯ ಆವತಿ ಗ್ರಾಮ ಎಂದು ಇತಿಹಾಸ ಹೇಳುತ್ತದೆ. ದೇವನಹಳ್ಳಿ ವ್ಯಾಪ್ತಿಯಲ್ಲಿ 20 ಎಕರೆ ಜಾಗ ಗುರ್ತಿಸಿ ಕೆಂಪೇಗೌಡರ ಜೀವನ ಚರಿತ್ರೆ, ತ್ಯಾಗ, ಹೋರಾಟ, ಸಮಾಜ ಸೇವೆಗಳ ಸಮಗ್ರ ಇತಿಹಾಸವನ್ನು ತಿಳಿಸುವ ಸಲುವಾಗಿ ಅವರ ನೆನಪಿನಲ್ಲಿ ಸ್ಮಾರಕ, ಸಂಸ್ಥೆ ನಿರ್ಮಾಣ ಮಾಡಲಾಗುವುದು ಎಂದರು.

ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಾತನಾಡಿ ಜಿಲ್ಲಾಡಳಿತ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಿರುವುದು ಬಹಳ ಹೆಮ್ಮೆಯ ವಿಷಯ. ಕೆಂಪೇಗೌಡರ ತತ್ವ ಸಿದ್ಧಾಂತಗಳನ್ನು, ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಎಲ್ಲಾ ಸಮುದಾಯದವರನ್ನು ಗೌರವದಿಂದ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಹಲವು ಕುಲ ಕಸುಬುಗಳನ್ನು ಪರಿಚಯಿಸಿ, ಹಲವರಿಗೆ ಉದ್ಯೋಗ ಸೃಷ್ಟಿಸಿದರು. ಬೆಂಗಳೂರು ಇಂದು ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಎಂದು ಹಿತವಚನ ನುಡಿದರು.

ಕಾರ್ಯಕ್ರಮದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ.ಕೆ.ಎನ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಉಪ ವಿಭಾಗಾಧಿಕಾರಿ ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್ ಸೇರಿದಂತೆ ಸಮುದಾಯದ ಮುಖಂಡರಾದ ಕೆ.ಸಿ ವೆಂಕಟೇಗೌಡ, ಬಿ.ಮುನೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *