ಎಲ್ಲರೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ- ಸಿಎಂ ಸಿದ್ದರಾಮಯ್ಯ

ಎಲ್ಲರೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ, ಅದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ. ಅಂಬೇಡ್ಕರ್ ಅವರು ಇನ್ನೂ ಬದುಕಿರಬೇಕಿತ್ತು. ಅವರು ಇದ್ದಿದ್ದರೆ ಸಮಾನತೆಯ ಪರವಾಗಿ ಇನ್ನಷ್ಟು ಹೋರಾಟಗಳಾಗುತ್ತಿತ್ತು. ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಡಾ. ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನವನ್ನು ಬಹಳ ಶ್ರಮ ವಹಿಸಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತದ ವ್ಯವಸ್ಥೆಗೆ ಎಂಥ ಸಂವಿಧಾನ ಬೇಕು ಎಂದು ಚಿಂತಿಸಿ ರಚಿಸಿದರು. ಸಾಮಾಜಿಕ ನ್ಯಾಯದ ಹಕ್ಕು, ಅಸಮಾನತೆಯನ್ನು ತೊಡೆದುಹಾಕುವ ಅಂಶ ಜಗತ್ತಿನ ಯಾವ ಸಂವಿಧಾನದಲ್ಲಿಯೂ ನೋಡಲು ಸಾಧ್ಯವಿಲ್ಲ. ಎಲ್ಲಾ ಜಾತಿ, ವರ್ಗ ಮತ್ತು ಬಡವರಿಗೆ ನ್ಯಾಯ ದೊರೆತಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರಿಸಿದ  ಅಂಶಗಳೇ ಕಾರಣ. ಕಟ್ಟ ಕಡೆಯ ಮನುಷ್ಯನಿಗೂ ಶ್ರೀಮಂತರಿಗೂ ಒಂದೇ ಕಾನೂನು. ಅದಕ್ಕೆ 14ನೇ ಪರಿಚ್ಛೇದದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು, ಎಲ್ಲರಿಗೂ ಕಾನೂನಿನ ರಕ್ಷಣೆಯಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಒಂದು ದೇಶದ ಆಸ್ತಿ ಸಮಾನವಾಗಿ ಹಂಚಿಕೆಯಾಗಬೇಕು. ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಪ್ರಜಾಪ್ರಭುತ್ವ ಉಳಿಯುವುದು ಕಷ್ಟ ಎಂದು ಅಧಿಕಾರ ಮತ್ತು ಆಸ್ತಿ ಹಂಚಿಕೆಯಾಗಬೇಕು ಎಂದು ಹೇಳಿದ್ದರು. ದೇಶಕ್ಕೆ ದೊರೆತ ಸ್ವಾತಂತ್ರ್ಯ ಯಶಸ್ವಿಯಾಗಲು ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿರಬೇಕು. ಇಲ್ಲವಾದರೆ ಅಸಮಾನತೆಯಿಂದ ನೊಂದ ಜನ ರಾಜಕೀಯ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದೂ ಹೇಳಿದ್ದರು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಎಷ್ಟು ನೆನೆದರೂ, ಎಷ್ಟು ಗೌರವ ಸಲ್ಲಿಸಿದರೂ ಕಡಿಮೆಯೇ ಎಂದು  ತಿಳಿಸಿದರು.

ಲಿಡ್ಕರ್ ಉತ್ಪನ್ನಗಳಿಗೆ ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಪ್ರದರ್ಶನ ರಾಯಭಾರಿಯಾಗಿ ನೇಮಕ ಮಾಡಿದ್ದು, ಉಚಿತವಾಗಿ ಈ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಉದಯೋನ್ಮುಖ ನಟ ಹಾಗೂ ಸಾಮಾಜಿಕ ಕಳಕಳಿ ಉಳ್ಳವರು. ಅವರನ್ನು ರಾಯಭಾರಿಯಾಗಿ ಮಾಡಿರುವುದು ಅರ್ಥಪೂರ್ಣವಾಗಿದೆ. ಇದರಿಂದ ಲಿಡ್ಕರ್ ಉತ್ಪನ್ನಗಳು ಹೆಚ್ಚಾಗಿ  ಮಾರಾಟವಾಗುವುದಲ್ಲದೆ ಚರ್ಮ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದರು.

8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಾವೀಗೀಡಾಗಿರುವುದು  ದುರದೃಷ್ಟಕರ. ಘಟನೆ ಬಗ್ಗೆ ಸಂಪೂರ್ಣ ತನಿಖೆ ಮಾಡುವಂತೆ ಸೂಚಿಸಲಾಗಿದೆ. ಅರ್ಜುನ ಪ್ರಾಣ ಬಿಟ್ಟ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲಾಗುವುದು ಹಾಗೂ  ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕವಾಗಬೇಕೆಂದು ಸೂಚಿಸಿದ್ದೇನೆ ಎಂದರು.

ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *