ಹಾಸನ: ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವಂತೆ ಶಾಲಾ ಹಂತದಿಂದಲೂ ಓದಿನಲ್ಲಿ ಆಸಕ್ತಿ ಇಟ್ಟುಕೊಂಡು ಡಿಗ್ರಿಯಲ್ಲಿ ಪತ್ರಿಕೋದ್ಯಮ ವಿಷಯ ಆಯ್ಕೆ ಮಾಡಿ, ನೆಚ್ಚಿನ ವಿಷಯದಲ್ಲಿ ಗರಿಷ್ಠ ಅಂಕ ಗಳಿಸಿ ಬಹುಮಾನವನ್ನು ಪಡೆಯುತ್ತಿದ್ದ ಕುವರಿಯೊಬ್ಬಳು ಸ್ನಾತಕೋತ್ತರ ಪದವಿಯಲ್ಲೂ ಸಹ ಅತ್ಯುನ್ನತ ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ‘ಫಸ್ಟ್ ರ‍್ಯಾಂಕ್’ ಗಳಿಸುವ ಮೂಲಕ “ಗೋಲ್ಡ್ ಮೆಡಲ್” ಅನ್ನು ತನ್ನ ಮುಡಿಗೆರಿಸಿಕೊಂಡಿದ್ದಾಳೆ.
ಹೌದು,, ಹಾಸನ ನಗರದ ಬಡ ಕುಟುಂಬದ ಕೃಷ್ಣಾ ಹಾಗೂ ಪುಷ್ಪಲತಾ ದಂಪತಿಯ ಪುತ್ರಿ ರಂಜಿತಾ ಹೆಚ್.ಕೆ ತುಮಕೂರು ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮದ (ಎಂ.ಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ) ಪದವಿ ವ್ಯಾಸಂಗ ಮಾಡಿ ತುಮಕೂರು ವಿಶ್ವವಿದ್ಯಾಲಯಕ್ಕೆ ‘ಪ್ರಥಮ ಸ್ಥಾನ’ ಪಡೆದು ‘ಚಿನ್ನದ ಪದಕ’ಕ್ಕೆ ಭಾಜನರಾಗಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ 18ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸಾಧಕಿ ರಂಜಿತಾ ಎಚ್.ಕೆ ಅವರು ‘ಗೋಲ್ಡ್ ಮೆಡಲ್’ ಅನ್ನು ಪಡೆದು ಹಾಸನ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ.
ಸೋಲು ಶಾಶ್ವತವಲ್ಲ, ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ರೆ ಗೆಲುವು ಖಚಿತ ಅನ್ನೋ ಮಾತನ್ನು ನಿಜವೆಂದು ರಂಜಿತಾ ತೋರಿಸಿಕೊಟ್ಟಿದ್ದಾರೆ. ಎಲೆಕ್ಟ್ರಾನಿಕ್ ಮೀಡಿಯಾ ಪದವಿಯ ಮೂರು ಸೆಮಿಸ್ಟರ್ ಗಳಲ್ಲಿ ‘ತೃತೀಯ ರ‍್ಯಾಂಕ್’ ಪಡೆಯುತ್ತಿದ್ದರು, ಕೊನೆಯ ಸೆಮಿಸ್ಟರ್‌ನಲ್ಲಿ ನಿರಂತರ ಅಧ್ಯಯನಶೀಲರಾಗಿ ‘ವಿವಿ ಮಟ್ಟದಲ್ಲಿ ಪ್ರಥಮ ರ‍್ಯಾಂಕ್’ ಗಳಿಸುವ ಮೂಲಕ ‘ಚಿನ್ನದ ಪದಕ’ದೊಂದಿಗೆ ಸಾಧನೆಗೈದು ಪತ್ರಿಕೋದ್ಯಮ ಓದುವ ಜೂನಿಯರ್ಸ್ ಗಳಿಗೆ ಮಾದರಿಯಾಗಿದ್ದಾರೆ.
“ಓದುವ ತವಕ ಹಾಗೂ ಪ್ರಾಯೋಗಿಕ ಅಧ್ಯಯನದಲ್ಲಿ ಕ್ರೀಯಾಶೀಲವಾಗಿ ರಂಜೀತಾ ತೊಡಗುತ್ತಿದ್ದರು.ಆ ಶ್ರಮಕ್ಕೆ ವಿವಿಯ ‘ಗೋಲ್ಡ್ ಮೆಡಲ್’ ಸಂದಿದೆ. ಇವರ ಸಾಧನೆಯಿಂದ ಕಾಲೇಜಿನ ಕೀರ್ತಿ ಹೆಚ್ಚಿಸುವ ಜತೆಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬಿದೆ ಎಂದು ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ ಮುದ್ದೇಶ್ ಹೇಳಿದ್ದಾರೆ.
“ನನ್ನ ಆತ್ಮವಿಶ್ವಾಸ ಹಾಗೂ ನಿರಂತರ ಅಧ್ಯಯನದ ಜತೆಗೆ ಗುರುಗಳ ಮಾರ್ಗದರ್ಶನ ಪಾಲನೆಯಿಂದ ಉತ್ತಮ ಅಂಕ ಗಳಿಸುವ ಜತೆಗೆ ‘ಪ್ರಥಮ ರ‍್ಯಾಂಕ್’ ಪಡೆಯಲು ಸಾಧ್ಯವಾಯಿತು. ನನ್ನ ಓದಿಗೆ ತಂದೆ-ತಾಯಿ ಹಾಗೂ ಸ್ನೇಹಿತರ ಸಹಕಾರ ಬಹಳಷ್ಟು ಇತ್ತು ಎಂದು ಚಿನ್ನದ ಪದಕ ವಿಜೇತೆ ರಂಜೀತಾ ಎಚ್.ಕೆ ತಿಳಿಸಿದರು.