ಎರಡು ಚಿರತೆಗಳು ಏಕಾಏಕಿ ಹಸು ಮೇಲೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ತಾಲೂಕಿನ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ನಡೆದಿದೆ.
ಹಿರೇಮುದ್ದೇನಹಳ್ಳಿ ಗ್ರಾಮದ ರೈತ ಗಂಗಾರೆಡ್ಡಿ ಎಂಬುವವರ ಹಸುವನ್ನು ಬಲಿ ಪಡೆದಿರುವ ಚಿರತೆಗಳು. ಗ್ರಾಮದ ಹೊರವಲಯದ ಕಾಡಿನಲ್ಲಿ ಹಸುಗಳನ್ನು ಮೇಯಿಸಲು ಬಿಟ್ಟಿದ್ದ ವೇಳೆ ಎರಡು ಚಿರತೆಗಳು ಹಸುವಿನ ಮೇಲೆ ದಾಳಿ ನಡೆಸಿವೆ. ಸ್ಥಳದಲ್ಲಿದ್ದ ರೈತ ಘಟನೆಯನ್ನು ನೋಡಿ ಕೂಗಿಕೊಳ್ಳುತ್ತಿದ್ದಂತೆ ಚಿರತೆಗಳು ಹಸುವನ್ನು ಬಿಟ್ಟು ಕಾಲ್ಕಿತ್ತಿವೆ.
ವಿಷಯ ತಿಳಿದ ಅರಣ್ಯ ಇಲಾಖಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ತೂಬಗೆರೆ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದ್ದು, ರೈತರು ಹಾಗೂ ಜಾನುವಾರು ಸಾಕಣೆದಾರರು ಭಯದ ವಾತವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಚಿರತೆ ಸೆರೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಕಳೆದ ವಾರದ ಹಿಂದೆ ಹಸುವಿನ ಮೇಲೆ ಚಿರತೆ ದಾಳಿ ನಡೆಸಲಾಗಿತ್ತು. ಅದೃಷ್ಟವಶಾತ್ ಚಿರತೆ ದಾಳಿಯಿಂದ ಪಾರಾಗಿ ಬದುಕುಳಿದ ಹಸುವಿಗೆ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ.