
ಕೋಲಾರ: ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್ಎಸ್) ತಡೆ ಹಾಗೂ ಐಸಿಡಿಎಸ್ ಯೋಜನೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಗುರುವಾರ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಮನವಿ ಸಲ್ಲಿಸಿದರು
ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ತಾಲೂಕು ಅಧ್ಯಕ್ಷೆ ಕಲ್ಪನಾ ಮಾತನಾಡಿ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಇರುವ ಐಸಿಡಿಎಸ್ ಯೋಜನೆ ಜಾರಿ ಆಗಿ 50 ವರ್ಷಗಳಾಗಿದೆ. ಆದರೆ, ಈ ಯೋಜನೆಯನ್ನು ಸರಳೀಕರಿಸಿ, ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರ ಕ್ರಮ ರೂಪಿಸಬೇಕಿತ್ತು. ಅದರ ಬದಲಿಗೆ ಸಂಕೀರ್ಣಗೊಳಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯ ನೀಡದೆ, ಮುಖಚರ್ಯೆ ಗುರುತಿಸುವ ಕ್ರಮ (ಎಫ್ಆರ್ಎಸ್) ಅಳವಡಿಸಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು
ದೇಶದಲ್ಲಿ 2013ರ ಆಹಾರ ಭದ್ರತೆ ಕಾಯ್ದೆ ಪ್ರಕಾರ ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು ಎಂಬ ಆಶಯಕ್ಕೆ ಹಿನ್ನಡೆಯಾಗಿದೆ. ಅಲ್ಲದೆ, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಸಬ್ಸಿಡಿ ಮತ್ತು ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳು ವಂಚಿತರಾಗಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವೂ ಪಾಲನೆಯಾಗುತ್ತಿಲ್ಲ. ಎಫ್ಆರ್ಎಸ್ ಜಾರಿ ಮೂಲಕ ಫಲಾನುಭವಿಗಳ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ದೂರಿದರು.
ತಾಲೂಕು ಕಾರ್ಯದರ್ಶಿ ಗಾಂಧಿನಗರ ಮಂಜುಳ ಮಾತನಾಡಿ, ಎಫ್ಆರ್ಎಸ್ ಮೂಲಕ ಸಂಗ್ರಹಿಸುವ ಫಲಾನುಭವಿಗಳ ವೈಯುಕ್ತಿಕ ಮಾಹಿತಿ ಸೋರಿಕೆ ಆಗುತ್ತಿದೆ. ಇದರಿಂದ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ಶೇ 60ರಷ್ಟು ತನ್ನ ಪಾಲಿನ ವಂತಿಗೆಯನ್ನು ನೀಡಬೇಕಾದ ಕೇಂದ್ರ ಸರ್ಕಾರ ಎಫ್ಆರ್ಎಸ್ ನಿಬಂಧನೆ ಹಾಕುವ ಮೂಲಕ ತನ್ನ ಪಾಲಿನ ಹಣ ಕಡಿಮೆ ಮಾಡಿಕೊಳ್ಳಲು ಮುಂದಾಗಿದೆʼ ಎಂದು ದೂರಿದರು.
ಕಾರ್ಯಕರ್ತರಿಗೆ 2018ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಬೇಕು. ಫಲಾನುಭವಿಗಳ ಘಟಕದ ವೆಚ್ಚ ಹೆಚ್ಚಿಸುವುದು, ಎಫ್ಆರ್ಎಸ್ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಕಪ್ಪು ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಖಜಾಂಚಿ ಲಕ್ಷ್ಮೀದೇವಿ, ರಾಜಮ್ಮ, ಲೋಕೇಶ್ವರಿ, ಗೌರಮ್ಮ, ತಿಮ್ಮಕ್ಕ, ಅಂಜನಮ್ಮ, ಲಾಲು, ರಾಜಮ್ಮ, ಅನುಸೂಯ, ಮುನಿರತ್ನ, ಮುಂತಾದವರು ಭಾಗವಹಿಸಿದ್ದರು