ಎತ್ತ ಸಾಗುತ್ತಿದ್ದೇವೆ ನಾವು ಮತ್ತು ನಮ್ಮ ನಾಯಕರು…….

ಎತ್ತ ಸಾಗುತ್ತಿದ್ದೇವೆ ನಾವು ಮತ್ತು ನಮ್ಮ ನಾಯಕರು……….

ಭಯವಾಗುತ್ತಿದೆ ನಿಜವಾಗಿಯೂ……

” ವರ್ಡ್ ಪವರ್ ಈಸ್ ವರ್ಲ್ಡ್ ಪವರ್ ” ಮಾತಿನ ಶಕ್ತಿಯೇ ವಿಶ್ವ ಶಕ್ತಿ. ಅಂದರೆ ಜಗತ್ತಿನ ಅತಿ ದೊಡ್ಡ ಶಕ್ತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ನಂಬಿಕೆಗೆ ದ್ರೋಹ ಮಾಡದಿರುವುದು. ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಾಮಾಜಿಕ ಜಾಲತಾಣದ ಮಾತುಗಳು. ( ನಂತರದಲ್ಲಿ ಅವರು ಅದು ನನ್ನದಲ್ಲ ಎಂದು ನಿರಾಕರಿಸಿದರು ಎಂಬ ಸುದ್ದಿ ಇದೆ )

” ಬದುಕು ಸುಧಾರಿಸದ ಮಾತಿಗೆ ಬಲವಿಲ್ಲ…” ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ……

ಅಬ್ಬಬ್ಬಾ ಎಂತಹ ಅದ್ಭುತ ಮಾತುಗಳು, ಎಂತಹ ದಾರ್ಶನಿಕ ಚಿಂತನೆ, ಎಂತಹ ಬದುಕಿನ ಮಾರ್ಗಸೂತ್ರಗಳು……

ಈ ಮಾತುಗಳು ಜಗತ್ತಿನ ಮಹಾನ್ ತತ್ವಜ್ಞಾನಿಗಳ ಮಾತುಗಳನ್ನೇ ಮೀರಿಸುವಂತಿವೆ. ನಿಜವಾದ ಮಹಾನ್ ತತ್ವಜ್ಞಾನಿಗಳು ಹೇಳುವುದು ಬದುಕಿನ ಅನುಭವದಿಂದ ಕಂಡುಕೊಂಡ ನಿಸ್ವಾರ್ಥ ಸತ್ಯಗಳಾಗಿದ್ದರೆ, ಈ ರಾಜಕಾರಣಿಗಳ ಮಾತುಗಳು ಜಾತಿ ವಾದಿಗಳ ಅತ್ಯಂತ ಕೃತಕ, ಅಧಿಕಾರ ದಾಹ ಮತ್ತು ಸ್ವಾರ್ಥದ ಮಾತುಗಳು.

ಎತ್ತ ಸಾಗುತ್ತಿದೆ ಈ ದೇಶ, ಈ ರಾಜ್ಯ. ಅಲ್ಲೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇವಸ್ಥಾನಗಳ ಮೇಲೆ ಧರ್ಮ ಧ್ವಜವನ್ನು ಹಾರಿಸುತ್ತಾ, ಕರ್ನಾಟಕದ ಉಡುಪಿಯಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಾ, ಲಕ್ಷ ಗೀತಾಪಠಣ ಮಾಡುತ್ತಾ ಪ್ರಧಾನಮಂತ್ರಿಯಾಗಿ ಇಡೀ ದೇಶವನ್ನೇ ಸಮತೋಲನದಿಂದ ಆಡಳಿತ ಮಾಡುವ ಬದಲು, ಧಾರ್ಮಿಕ ರಾಷ್ಟ್ರೀಯತೆಯನ್ನು ಜನರಲ್ಲಿ ಉದ್ರೇಕಿಸುತ್ತಾ, ಚುನಾವಣೆ ಮೇಲೆ ಚುನಾವಣೆ ಗೆಲ್ಲುತ್ತಾ, ಸಾಮಾನ್ಯ ಜನರುಗಳನ್ನೇ ಭ್ರಮಾಲೋಕದಲ್ಲಿ ತಳ್ಳಿ, ಇಲ್ಲಿಯ ಮಣ್ಣಿನ ನೈಜ ಮೌಲ್ಯಗಳನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಪಂಚಭೂತಗಳೆಂಬ ಪ್ರಾಕೃತಿಕ ಸಂಪತ್ತನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡುತ್ತಿದ್ದಾರೆ.

ಇಲ್ಲಿ ನೋಡಿದರೆ ಜಾತಿ ಮುಕ್ತ ಸಮಾಜದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಅಹಿಂದ ಹೆಸರಿನಲ್ಲಿ ಅಧಿಕಾರದಾಹಕ್ಕೆ ಬಲಿಯಾಗಿ ಇನ್ನಷ್ಟು ದಿನ ಅಧಿಕಾರದಲ್ಲಿ ಮುಂದುವರೆಯುವ ಹೊಂಚು ಹಾಕುತ್ತಿದ್ದರೆ, ಇನ್ನೊಬ್ಬ ಒಕ್ಕಲಿಗ ನಾಯಕರು ಮಹಾನ್ ತತ್ವಜ್ಞಾನಿಯಂತೆ ಅಧಿಕಾರಕ್ಕಾಗಿ ಒಕ್ಕಲಿಗ ಎಂಬ ಜಾತಿಯ ಕಾರ್ಡುಗಳನ್ನು ಬಳಸುತ್ತಿದ್ದಾರೆ. ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಅವರ ಸಮುದಾಯದ ಮಠಾಧೀಶರು ಮರೆತಿದ್ದಾರೆ. ಇಷ್ಟರಲ್ಲೇ ಬಸವ ಅನುಯಾಯಿಗಳು ಲಿಂಗಾಯಿತ, ವೀರಶೈವ ಎಂಬ ಕಾರ್ಡನ್ನು ಉಪಯೋಗಿಸಲೂ ಬಹುದು.

ಒಟ್ಟಿನಲ್ಲಿ, ಭಾಷಣ ಮಾಡುವುದು ಮಾತ್ರ ಜಾತಿ, ಧರ್ಮ ಮೀರಿದ ಮಾನವೀಯತೆ ಎಂದು. ಆದರೆ ರಾಜಕೀಯ ಮಾಡುವುದು ಮಾತ್ರ ಧರ್ಮದ ಹೆಸರಿನಲ್ಲಿ,, ಜಾತಿಯ ಹೆಸರಿನಲ್ಲಿ. ಭಾರತೀಯತೆಯ ಈ ಮಣ್ಣಿನ ನಿಜ ಮೌಲ್ಯದ ಹೆಸರಿನಲ್ಲಿ ಯಾರೂ ಅಧಿಕಾರವನ್ನು ಗಳಿಸುತ್ತಿಲ್ಲ, ಅಧಿಕಾರವನ್ನು ಉಳಿಸುತ್ತಿಲ್ಲ. ಅಂದಮೇಲೆ ಶಾಸ್ತ್ರ ಹೇಳೋಕೆ ಬದನೆಕಾಯಿ ತಿನ್ನೋಕೆ ಎನ್ನಬಹುದಲ್ಲವೇ.

ಪ್ರಧಾನಿಗಳು ರಾಷ್ಟ್ರಧ್ವಜಕ್ಕಿಂತ ಧರ್ಮಧ್ವಜವನ್ನೇ ವಿಜೃಂಭಿಸುತ್ತಿರುವಾಗ, ಇಲ್ಲಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಜಾತಿಯ ಬಾವುಟ ಹಾರಿಸುತ್ತಿರುವಾಗ, ನಾವುಗಳು ಮಾಡುವುದಾದರೂ ಏನು…..

ಪ್ರಧಾನಮಂತ್ರಿಗಳ ಪ್ರತಿ ಮಾತಿನಲ್ಲಿ ರಾಮ, ಕೃಷ್ಣ, ಶಂಕರ, ಮದ್ವ, ರಾಮಾನುಜಾ, ಕೃಷ್ಣ, ರಾಮ ಇವರುಗಳೇ ನಲಿದಾಡುತ್ತಿದ್ದಾರೆ. ಹಾಗಾದರೆ ಎಲ್ಲಿ ಹೋದರು ಆ ಜೀವ ಪ್ರೀತಿಯ, ಮಾನವೀಯ ಮೌಲ್ಯಗಳ ಬುದ್ಧ, ಮಹಾವೀರ, ಕಬೀರ, ಮೀರಾಬಾಯಿ, ರಮಣ ಮಹರ್ಷಿ, ನಾರಾಯಣ ಗುರು, ಬಸವಣ್ಣ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಮುಂತಾದವರು.

ಇಂದಿನ ಸಾಮಾಜಿಕ ಜಾಲತಾಣಗಳ ಬಹುದೊಡ್ಡ ಯುವಶಕ್ತಿ ಬಹುತೇಕ ಯೋಚನಾ ಶಕ್ತಿಯನ್ನೇ ಕಳೆದುಕೊಂಡಿದೆ. ಕೇವಲ ಮೇಲ್ಪದರದಲ್ಲಿ ಮಾತ್ರ ಈ ಕ್ಷಣದ ಲಾಭ ನಷ್ಟಗಳನ್ನು ವಿಶ್ಲೇಷಿಸುತ್ತಾ, ಈ ಕ್ಷಣದ ಹಣ ಕೇಂದ್ರೀಕೃತ ಸಮಾಜವನ್ನೇ ನೈಜವಾದದ್ದು ಎಂದು ಭ್ರಮಿಸುತ್ತಾ, ಇಂದಿನ ಕಾರು, ಬಂಗಲೆ, ವಿಧವಿಧದ ಊಟ, ಬಟ್ಟೆ, ಸುತ್ತಾಟ, ರಿಲ್ಸ್ ಗಳನ್ನೇ ಸಮಾಜದ ನೈಜ ಅಭಿವೃದ್ಧಿ ಎಂದು ಭಾವಿಸುತ್ತಾ, ಸೀಡ್ಲೆಸ್ಗಳಾಗಿ ಬದುಕುತ್ತಿರುವಾಗ ಭವಿಷ್ಯದ ಭಾರತ ಸ್ವಲ್ಪ ಭಯ ಹುಟ್ಟಿಸುವುದು ನಿಜ.

ಬಹಿರಂಗವಾಗಿಯೇ ಜಾತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ನಾಯಕತ್ವ ಗುಣಗಳನ್ನು ಪ್ರದರ್ಶಿಸುವ ಇವರಿಗೆ ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ನೆನಪಾಗುತ್ತಿಲ್ಲವೇ, ಬದುಕಿನ ಮೌಲ್ಯಗಳ ಬಗ್ಗೆ ಬೋಧಿಸಿದ ಬುದ್ಧ ನೆನಪಾಗುವುದಿಲ್ಲವೇ, ದೇಶಕ್ಕಾಗಿ ಬಹುದೊಡ್ಡ ನೈತಿಕ ಮತ್ತು ಕಾನೂನಾತ್ಮಕ ನೆಲಗಟ್ಟನ್ನು ಒದಗಿಸಿದ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ನೆನಪಾಗುತ್ತಿಲ್ಲವೇ. ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣ ನೆನಪಾಗುವುದಿಲ್ಲವೇ.

ಮಾನ್ಯ ಸಿದ್ದರಾಮಯ್ಯ, ಶಿವಕುಮಾರ್ ಅವರೇ ಸಾಕು ಮಾಡಿ ನಿಮ್ಮ ಈ ಸ್ವಾರ್ಥ ನಾಟಕ. ನಿಮ್ಮ ಹಿಂಬಾಲಕರು, ಮುಂಬಾಲಕರು ಮಾರ್ಗದರ್ಶಕರ ಸೂಚನೆಗಳನ್ನು, ಹೊಗಳು ಭಟರ ಸಲಹೆಗಳನ್ನು ತಿರಸ್ಕರಿಸಿ. ಇಬ್ಬರೇ ಕುಳಿತು ಏನೋ ಒಂದು ತೀರ್ಮಾನಕ್ಕೆ ಬನ್ನಿ. ನೀವುಗಳೇನು ಯುವಕರಲ್ಲ. ಶಾಶ್ವತವೂ ಅಲ್ಲ. ಯಾವುದೇ ಕ್ಷಣದಲ್ಲಿ ನಿಮಗೂ ಕಾಲನ ಕರೆ ಬರಬಹುದು.

ಮಾನ್ಯ ಸಿದ್ದರಾಮಯ್ಯನವರೇ, ನೀವೇ ಒಂದು ವೇಳೆ ಇನ್ನೂ ಸ್ವಲ್ಪ ದಿನ ಮುಂದುವರಿಯಬೇಕಾದರೆ ಅದನ್ನಾದರೂ ಆತ್ಮೀಯತೆಯಿಂದ ಮನವೊಲಿಸಿ ಅಥವಾ ಅಧಿಕಾರ ತ್ಯಾಗ ಮಾಡಿ, ಹಾಗೆಯೇ ಮಾನ್ಯ ಉಪಮುಖ್ಯಮಂತ್ರಿಗಳೇ ನೀವು ಸಹ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಹಂತದವರೆಗೂ ಬೆಳೆದಿರುವುದೇ ಬಹುದೊಡ್ಡ ಸಾಧನೆ. ಸಿಕ್ಕರೆ ಮುಖ್ಯಮಂತ್ರಿಯಾಗಿ ಇಲ್ಲದಿದ್ದರೆ ಹೀಗಿರುವ ಸ್ಥಾನದಲ್ಲೇ ಮುಂದುವರೆಯಿರಿ. ಅಧಿಕಾರಕ್ಕಾಗಿ ಜಗಳ ಮಾಡಬೇಡಿ.

ನಿಜ, ನೀವು ಇರುವ ಸ್ಥಾನದಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಅಧಿಕಾರ ಗಳಿಸಬೇಕು ಎಂಬ ಛಲವೇನೋ ಸರಿ. ಆದರೆ ನಮ್ಮಂತಹ ಸಾಮಾನ್ಯ ಜನರನ್ನೂ ಒಮ್ಮೆ ನೋಡಿ. ನಿಮಗಿಂತ ಹೆಚ್ಚು ಶ್ರಮ ಪಟ್ಟಿದ್ದೇವೆ, ನಿಮಗಿಂತ ಹೆಚ್ಚು ಕಷ್ಟ ನಷ್ಟಗಳನ್ನು ಅನುಭವಿಸಿದ್ದೇವೆ. ನಿಮಗಿಂತ ಹೆಚ್ಚು ಓದಿದ್ದೇವೆ, ನಿಮಗಿಂತ ಹೆಚ್ಚು ಈ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದೇವೆ, ನಿಮಗಿಂತ ಹೆಚ್ಚು ಬಡವರಾಗಿದ್ದೇವೆ, ನಿಮಗಿಂತ ಹೆಚ್ಚು ಮೋಸ ವಂಚನೆಗೆ ಒಳಗಾಗಿದ್ದೇವೆ.

ಇಷ್ಟೆಲ್ಲಾ ಆದರೂ ಈ ದೇಶಕ್ಕಾಗಿ, ಈ ಮೌಲ್ಯಗಳಿಗಾಗಿ ಈಗಲೂ ಒಂದಷ್ಟು ಶ್ರಮ ಪಡುತ್ತಿದ್ದೇವೆ. ಏನೋ ಕನಿಷ್ಠ ಮುಂದಿನ ಪೀಳಿಗೆಗಾದರೂ ಮೌಲ್ಯಗಳು ಉಳಿಯಲಿ ಎಂದು. ಈ ರೀತಿ ಎಷ್ಟೋ ಜನ ಬಯಸುತ್ತಿದ್ದಾರೆ. ಸಾಮಾನ್ಯ ಬದುಕಿಗಿಂತ ಕೆಳಹಂತದಲ್ಲಿ ಊಟಕ್ಕಾಗಿ, ಬಟ್ಟೆಗಾಗಿ, ಮನೆ ಬಾಡಿಗೆಗಾಗಿ, ಆಸ್ಪತ್ರೆಗಾಗಿ, ಶಾಲೆಗಾಗಿ ಕನಿಷ್ಠ ಸೌಲಭ್ಯಗಳಿಗಾಗಿ ಪ್ರತಿನಿತ್ಯ ಪರದಾಡುತ್ತಿರುವ ಕೋಟಿ ಕೋಟಿ ಜನರ ಮಧ್ಯೆ, ಅತ್ಯಂತ ಶ್ರೀಮಂತರಾಗಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಾಗಿ ಎಷ್ಟೋ ವರ್ಷಗಳಿಂದ ಅತ್ಯುತ್ತಮ ಸ್ಥಾನದಲ್ಲೇ ಮುಂದುವರಿಯುತ್ತಿರುವ ನೀವೇ ಕುರ್ಚಿಗಾಗಿ ಕಿತ್ತಾಟ ಮಾಡಿ, ಜಾತಿ ಜನಗಳನ್ನು ಎತ್ತಿ ಕಟ್ಟಿ ಹೀಗೆ ಜಗಳವಾಡುತ್ತಿದ್ದರೆ ಖಂಡಿತವಾಗಲೂ ಆ ದೇವರೇನಾದರೂ ಇದ್ದರೆ ನಿಮಗೆ ತಕ್ಕ ಶಿಕ್ಷೆ ಕೊಡಬೇಕಾಗಿತ್ತು.

ದುರಂತವೆಂದರೆ ನೀವೇ ಆ ದೇವರುಗಳನ್ನು ಕಟ್ಟಿ ಹಾಕಿದ್ದೀರಿ. ನಿಮ್ಮಂತಹವರನ್ನೇ ಆ ದೇವರು ಬೆಂಬಲಿಸುತ್ತಿರುವುದರಿಂದ ಆ ದೇವರ ಬಗ್ಗೆ ಕೂಡ ನಮಗೆ ಧಿಕ್ಕಾರವಿದೆ. ಪ್ರಧಾನಮಂತ್ರಿಯೊಬ್ಬರು ಒಂದು ಸಮುದಾಯದ ಪರವಾಗಿ, ಧರ್ಮದ ಪರವಾಗಿ, ಮುಖ್ಯಮಂತ್ರಿಯೊಬ್ಬರು ಜಾತಿಗಳ ಪರವಾಗಿ ಆಡಳಿತ ಮಾಡುವುದೇ ಪ್ರಜಾಪ್ರಭುತ್ವದ ಬಹುದೊಡ್ಡ ದುರಂತ.

ನಿಮ್ಮ ಕರ್ತವ್ಯ ಸಂವಿಧಾನವನ್ನು ರಕ್ಷಿಸುವುದು, ಸಂವಿಧಾನದ ರೀತಿ ಆಡಳಿತ ಮಾಡುವುದು, ಅವಶ್ಯವಾದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಆಧುನಿಕ ನೀತಿ ನಿಯಮಗಳನ್ನು ರೂಪಿಸುವುದು. ಅದನ್ನು ಹೊರತುಪಡಿಸಿ ಜಾತಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವುದೇ ಈ ದೇಶಕ್ಕೆ ನೀವು ಮಾಡುತ್ತಿರುವ ಮಹಾನ್ ದ್ರೋಹ. ನಿಮ್ಮನ್ನು ಬೆಂಬಲಿಸುತ್ತಿರುವ ಯಾವುದೇ ಪಕ್ಷದ, ಯಾವುದೇ ಕಾರ್ಯಕರ್ತರು, ಜನಸಾಮಾನ್ಯರು ಸಹ ಈ ದೇಶಕ್ಕೆ ಮಾಡುತ್ತಿರುವ ದ್ರೋಹ.

ನಾವು ಯೋಚಿಸಬೇಕಾಗಿರುವುದು ದೇಶದ ಬಗ್ಗೆಯೇ ಹೊರತು ಮೋದಿ ಬಗ್ಗೆ, ಸಿದ್ದರಾಮಯ್ಯ ಬಗ್ಗೆ, ಡಿಕೆ ಶಿವಕುಮಾರ್ ಬಗ್ಗೆ ಅಲ್ಲ. ಇದನ್ನು ಸಾಮಾನ್ಯ ಜನರು ಅರಿಯುವವರೆಗೂ ನಿಮ್ಮದೇ ಕಾಲ, ನಿಮ್ಮದೇ ನಡೆ, ಓಡುತ್ತಿರಲಿ ನಿಮ್ಮ ಕುದುರೆ ಕುಂಟುತ್ತಿದೆ ನಮ್ಮ ಕತ್ತೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!