ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ಲೋಕಾರ್ಪಣೆ

ರಾಜ್ಯದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ನ್ನು ಎಲ್ಲರೂ ಸೇರಿ ಉದ್ಘಾಟನೆ ಮಾಡಿರುವುದು ಅತ್ಯಂತ ಸಂತೋಷವಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಬಾಗಿನ ಅರ್ಪಿಸಿದ ನಂತರ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯ ಹಂತ -1 ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎರಡನೆ ಹಂತದ ಯೋಜನೆ ಪ್ರಾರಂಭವಾಗಿದೆ 2026-27 ರಲ್ಲಿ ಪೂರ್ಣಗೊಳ್ಳಲಿದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು.

ಬಹಳ ದಿನಗಳ ಜನರ ಅಪೇಕ್ಷೆಯಂತೆ ಈ ಯೋಜನೆ ಸಾಕಾರಗೊಂಡಿದೆ 7 ಜಿಲ್ಲೆಗಳಿಗೆ ನೀರು ಕೊಡುವ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ ಎಂದ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡು ಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು,ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ 14.056 ಟಿ.ಎಂ.ಸಿ. ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರು.

ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವ ರೂ.23,251.66 ಕೋಟಿಗಳ ಮೊತ್ತದ ಉದ್ದೇಶಿತ ಯೋಜನೆಯಾಗಿದೆ ಎಂದರು.

ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮಾತನಾಡಿ, ಭಗೀರಥ ಮುನಿಯು ತಪಸ್ಸು ಮಾಡಿ ಧರೆಗೆ ಗಂಗೆ ತಂದಂತೆ ಗುಡ್ಡ ಬೆಟ್ಟಗಳಲ್ಲಿ ಹರಿಯುವ ನೀರನ್ನು ಎತ್ತಿನಹೊಳೆ ಯೋಜನೆ ಮೂಲಕ ಬಯಲು ಸೀಮೆಗೆ ಹರಿಸಲಾಗುತ್ತಿದೆ ಎಂದರು. ಸಿದ್ದರಾಮಯ್ಯ ಅವರು 2014 ರಲ್ಲಿ ಈ ಯೋಜನೆಗೆ ಭೂಮಿ ಪೂಜೆ ಮಾಡಿ ಇಂದು ಅವರೆ ಉದ್ಘಾಟನೆ ಮಾಡಿದ್ದಾರೆ ಇದೊಂದು ಐತಿಹಾಸಿಕ ದಿನ ಎಂದರು.

ಈ ಯೋಜನೆ ಮೂಲಕ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ 14.056 ಟಿ.ಎಂ.ಸಿ. ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರಲ್ಲದೆ, 527 ಕೆರೆಗಳಿಗೆ 9.953 ನೀರು ತುಂಬಿಸುವ ಕೆಸಲ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಯೋಜನೆಗೆ ತಮ್ಮ ಜಮೀನ್ನನು ಬಿಟ್ಟು ಕೊಟ್ಟು ಸಹಕರಿಸಿದ ರೈತರ ಬಗ್ಗೆ ಅಪಾರ ವಿಶ್ವಾಸವಿದೆ ಎಂದು ತಿಳಿಸಿದ ಅವರು, ಅಧಿಕಾರಿಗಳು ನಾವು ಕೊಟ್ಟಂತಹ ಆದೇಶಗಳನ್ನು ಪಾಲನೆ ಮಾಡುವ ಮೂಲಕ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಸಹಕರಿಸಿದ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದ್ರಕ್ಕೆ ಸೇರುವ ನೀರನ್ನು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಕುಡಿಯುವ ನೀರಿನ ಭವಣೆ ನೀಗಿಸಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ಇಲಾಖೆಯಿಂದ 20 ಕಡೆಗಳಲ್ಲಿ ಆಕ್ಷೇಪಗಳಿದ್ದು, ಅವುಗಳನ್ನು ನಿವಾರಣೆ ಮಾಡುತ್ತೀರಾ ಎಂಬ ವಿಶ್ವಾಸವಿದೆ ಎಂದ ಅವರು ಮುಂದಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ಕೆನಾಲ್ ನಿರ್ಮಾಣಕ್ಕೆ ಹಣ ಒದಗಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಮಾತನಾಡಿ, ಸಾಕಷ್ಟು ಎಡರುತೊಡರುಗಳನ್ನು ನಿವಾರಣೆ ಮಾಡಿ ಈ ಯೋಜನೆಯನ್ನು ಅನುಷ್ಠಾನ ಮಾಡಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಬರುವ ಭರವಸೆ ಬಂದಿದೆ ಎಂದರು.

ಶಾಸಕರಾದ ಎಸ್ ಮಂಜುನಾಥ್ (ಸಿಮೆಂಟ್ ಮಂಜು) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಯೋಜನೆಗೆ ಹಲವಾರು ರೈತರು ತಮ್ಮ ಜಮೀನು ಬಿಟ್ಟುಕೊಟ್ಟಿದ್ದಾರೆ ಈ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದರು.

ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ನಗರಾಭಿವೃದ್ಧಿ ಸಚಿವರಾದ ಬಿ.ಎಸ್ ಸುರೇಶ್, ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವರು, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು, ಸಂಸರಾದ ಶ್ರೇಯಸ್ ಎಂ ಪಟೇಲ್, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಾಲಕೃಷ್ಣ ಹೆಚ್.ಸಿ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ತಿನ ಸದಸ್ಯರಾದ ನಜೀರ್ ಅಹಮದ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ಆರ್ ಶ್ರೀನಿವಾಸ್(ವಾಸು), ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಎನ್ ಶ್ರೀನಿವಾಸ, ಶಾಸಕರಾದ ಟಿ.ಬಿ. ಜಯಚಂದ್ರ, ಕೆ,ಷಡಕ್ಷರಿ, ಕೈ.ವೈ ನಂಜೇಗೌಡ, ಕೆ.ಎ ತಿಪ್ಪೇಸ್ವಾಮಿ, ಹೆಚ್.ಕೆ ಸುರೇಶ್, ಪ್ರದೀಪ್ ಈಶ್ವರ್, ಆನಂದ್ ಕೆ.ಎಸ್, ಕೊತ್ತೂರು ಜಿ.ಮಂಜುನಾಥ್, ಡಿ.ಟಿ ಶ್ರೀನಿವಾಸ, ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಬಿ.ಆರ್ ಪೂರ್ಣಿಮ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *