ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆ ಮಾಡಲು ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಐದು ಗ್ರಾಮಗಳು ಮುಳುಗಡೆಯಾಗಲಿವೆ. ಈ ಗ್ರಾಮಗಳ ರೈತರು ಈಗಾಗಲೇ ಈ ಜಲಾಶಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ಪ್ರಾರಂಭಿಸಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಲಕ್ಕೇನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯ ನಿರ್ಮಾಣ ಮಾಡಬಾರದೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಇತರರಿಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಗಮನ ಸೆಳೆಯಲಾಗಿದೆ.
ಈಗಾಗಲೇ ಮನವಿ ಪತ್ರ ಸರ್ಕಾರದ ಗಮನಕ್ಕೆ ತಲುಪಿದ್ದು, ಮುಖ್ಯಮಂತ್ರಿಗಳ ಕಚೇರಿಯಿಂದ ಜಲಸಂಪನ್ಮೂಲ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಮಂಡಿಸಲಾಗಿದೆ. ಮುಖ್ಯಮಂತ್ರಿಗಳನ್ನು ಈ ಭಾಗದ ರೈತರು ಭೇಟಿಯಾಗುವಂತೆ ಜಲಸಂಪನ್ಮೂಲ ಇಲಾಖೆ ತಿಳಿಸಿದೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಿಂದ ಶುಕ್ರವಾರ ಬರುವರೆಂದು, ಆನಂತರ ರೈತರ ಭೇಟಿಯ ಬಗ್ಗೆ ಮಾಹಿತಿ ನೀಡಲಾಗುವುದೆಂದು ಸಿಎಂ ಕಚೇರಿ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ…
ಪತ್ರದಲ್ಲೇನಿದೆ…?
ವ್ಯವಸಾಯ ಬಿಟ್ಟರೆ ನಮಗೆ ಏನು ಗತಿಯಿಲ್ಲ. ಈಗ ಎತ್ತಿನಹೊಳೆ ಯೋಜನೆಯಿಂದ ವ್ಯವಸಾಯಕ್ಕೆ ಕುತ್ತು ಬಂದೊದಗಿ ನಾವುಗಳು ಸ್ವಾವಲಂಬಿ ಕೃಷಿ ಜೀವನದಿಂದ ಪರವಾಲಂಬಿಗಳಾಗುವಂಥ ಪರಿಸ್ಥಿತಿಯನ್ನು ಕೃತಕವಾಗಿ ದುರುದ್ದೇಶದಿಂದ ಸೃಷ್ಠಿ ಮಾಡಲಾಗುತ್ತಿರುವ ದುರಂತವು ನಮ್ಮ ಮುಂದಿದೆ. ನಮ್ಮಂತಹ ಬಡಪಾಯಿಗಳ ಬದುಕುಗಳ ಕತ್ತು ಹಿಚುಕಿ ಕೊಲ್ಲುವ ಉಮೇದು ಯಾಕೋ?.
ಎತ್ತಿನಹೊಳೆ ಯೋಜನೆಯ ಹಿನ್ನೆಲೆಯಲ್ಲಿ ನಮ್ಮ ಗ್ರಾಮಗಳಲ್ಲಿ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನವನ್ನು ಮಾಡಿರುವುದಿಲ್ಲ. ಹಾಗೇನಾದರೂ, ಸಾಮಾಜಿಕ ನಿರ್ಧರಣಾ ಅಧ್ಯಯನವನ್ನು ಮಾಡಿದರೆ ವಾಸ್ತವಾಂಶವು ಹೊರಹೊಮ್ಮುವುದೆಂಬ ದುರುದ್ದೇಶದಿಂದ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನವನ್ನು ಮಾಡದಂತೆ ಮರೆಮಾಚಲಾಗಿದೆ. ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನವನ್ನು ಮಾಡದೇ ಇರುವುದು ಕಾನೂನುಬಾಹಿರ ಹಾಗೂ ಜೀವವಿರೋಧಿಯಾಗಿರುತ್ತದೆ.
ಎತ್ತಿನಹೊಳೆ ಯೋಜನೆಯ ಪೂರ್ವಾಪರದ ಬಗ್ಗೆಯಾಗಲಿ ಅದರ ಪ್ರಕ್ರಿಯೆಯ ಬಗ್ಗೆಯಾಗಲಿ ಒಟ್ಟಾರೆ ಎತ್ತಿನಹೊಳೆ ಯೋಜನೆ ಭಾಗವಾಗಿ ಈ ಹಿಂದೆ ಬೈರಗೊಂಡ್ಲು ಜಲಾಶಯ ನಿರ್ಮಾಣ ಸಂಬಂಧ, ಈಗ ಲಕ್ಕೇನಹಳ್ಳಿ ಬಳಿಯ ಜಲಾಶಯ ನಿರ್ಮಾಣ ಸಂಬಂಧ ಯಾವುದೇ ಮಾಹಿತಿಯನ್ನು ರೈತರಿಗೆ ನೀಡದೆ ರೈತರನ್ನು ಕಗ್ಗತ್ತಲಿನಲ್ಲಿಟ್ಟು ಯೋಜನೆಯನ್ನು ಮುಂದುವರೆಸಲು ಮುಂದಾಗಿರುವುದು ಜೀವವಿರೋಧಿ, ಕಾನೂನು ವಿರೋಧಿ, ನ್ಯಾಯ ವಿರೋಧಿಯಾಗಿರುತ್ತದೆ ಹಾಗೂ ಏಕಪಕ್ಷೀಯವಾಗಿರುತ್ತದೆ.
ನಮ್ಮ ಗ್ರಾಮದ ಪರಿಸರ, ಜೀವವೈವಿಧ್ಯ ಪರಂಪರೆ ಇತಿಹಾಸಕ್ಕೆ ಧಕ್ಕೆಯುಂಟು ಮಾಡಿ ನಾಶಗೊಳಿಸುವ ಹುನ್ನಾರವು ಈ ಯೊಜನೆಯ ಹಿಂದಿರುವುದು ಸ್ಪಷ್ಟವಾಗಿರುತ್ತದೆ.
ನಮ್ಮ ಪರಂಪರೆಯಂತೆ, ಸಂಪ್ರದಾಯದಂತೆ, ಸಂಸ್ಕೃತಿಯಂತೆ ನಮ್ಮ ಪೂರ್ವಿಕರನ್ನು ಅವರ ಸಮಾಧಿಗಳನ್ನು ಪೂಜಿಸುವುದು ಕೂಡ ನಮ್ಮ ಬದುಕಿನ ಭಾಗ ಹಾಗೂ ನಮ್ಮ ಧಾರ್ಮಿಕತೆಯಾಗಿರುತ್ತದೆ. ಆ ನಮ್ಮ ಧಾರ್ಮಿಕ ಹಕ್ಕಿಗೆ ಎತ್ತಿನಹೊಳೆ ಯೋಜನೆ ಭಾಗವಾಗಿ ನಿರ್ಮಾಣವಾಗುವ ಜಲಾಶಯವು ಧಕ್ಕೆಯುಂಟು ಮಾಡುತ್ತಿದೆ.
ನಮ್ಮ ಗ್ರಾಮವನ್ನು ನಮ್ಮ ಗ್ರಾಮಗಳ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ನಮ್ಮ ಬದುಕುವ ಹಕ್ಕನ್ನು ಉಲ್ಲಂಘನೆ ಮಾಡುವುದಾಗಿರುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಜಲಾಶಯ ನಿರ್ಮಾಣ ಮಾಡಬಹುದಿತ್ತಾದರೂ ನಮ್ಮ ಭಾಗದಲ್ಲಿಯೇ ಮಾಡಬೇಕೆಂಬ ಹಠವೇಕೆ?
ನೂರಾರು ಕಿಲೋಮೀಟರ್ ದೂರದಿಂದ ನೀರು ತರುವ ಸಾಮರ್ಥ್ಯವಿರುವವರಿಗೆ ಇನ್ನೊಂದಷ್ಟು ಕಿಲೋಮೀಟರ್ ದೂರ ಸಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಜಲಾಶಯ ನಿರ್ಮಾಣ ಮಾಡಬಹುದಲ್ಲವೇ? ಇದೇನು ರಾಜಕೀಯ ಷಡ್ಯಂತ್ರವೇ…?!
ದಯಮಾಡಿ ಸಾಮಾಜಿಕ ನ್ಯಾಯವನ್ನು ಪಾಲಿಸಿ ಸಂವಿಧಾನದತ್ತ ನಮ್ಮ ಮಾನವಹಕ್ಕುಗಳಿಗೆ ಧಕ್ಕೆಯುಂಟು ಮಾಡಬೇಡಿ.
ಜಲಾಶಯ ನಿರ್ಮಾಣಕ್ಕೆ ನಾವು ಒಪ್ಪದೇ ಇದ್ದರೂ ಒಪ್ಪಿರುವ ಹಾಗೆ ಸುಳ್ಳು ಸೃಷ್ಠಿ ಮಾಡಿ ಡಿಸಿಎಂ ಡಿಕೆಶಿ ಹಾಗೂ ಇತರೆ ರಾಜಕಾರಣಿಗಳು ಮಾತಾಡುತ್ತಿರುವುದೇಕೆ? ಸ್ವಾಧೀನವಾದ ಭೂಮಿಗೆ ಪರಿಹಾರ ನೀಡಬೇಕೆಂಬ ಅಂಶವು ಕಾನೂನಿನಲ್ಲಿಯೇ ಇರುವಾಗ ಏನೋ ಧಾರಾಳತನದಿಂದ ಕೊಡಿಸಿಕೊಡುವಂತೆ ಸುಖಾಸುಮ್ಮನೆ ಜನರನ್ನು ಮರುಳು ಮಾಡುವ ಮಾತುಗಳೇಕೆ? ನಾವು ಒಪ್ಪಿಯೇ ಇಲ್ಲ ಆಗಲೇ ಪರಿಹಾರ, ಪುನರ್ವಸತಿಯ ಮಾತುಗಳು ಏಕೆ? ಇರುವ ಗ್ರಾಮಗಳನ್ನು ನಾಶಗೊಳಿಸಿ ಹೊಸದಾಗಿ ಹಳ್ಳಿಗಳನ್ನು ಕಟ್ಟೋದು ಏಕೆ? ಏನಿದರ ಮರ್ಮ? ಎಂದು ರೈತರು ಪ್ರಶ್ನೆ ಮಾಡಿದ್ದಾರೆ…..
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…