
ಆತ ತನ್ನ ಪಾಡಿಗೆ ತಾನು ಪೈಂಟ್ ಕೆಲಸ ಮಾಡಿಕೊಂಡು ಇದ್ದ. ಕುಟುಂಬ ನಿರ್ವಹಣೆಗೆ ಹಣ ಸಾಲಲ್ಲ ಎಂದು ರಾತ್ರಿ ವೇಳೆಯೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಇದ್ದ. ಆದರೆ ಸ್ನೇಹಿತರ ಸಹವಾಸ ಮಾಡಿ ಈಗ ಬೀದಿ ಹೆಣವಾಗಿ ಬಿಟ್ಟಿದ್ದಾನೆ.
ಒಂದು ಬಾಟೆಲ್ ಕೇಳಿದರೆ ಎರಡು ಬಾಟೆಲ್ ನೀಡುತ್ತೇನೆ ಎಂದು ಹೇಳಿ ಕೊಲೆ ಮಾಡಿ, ರಸ್ತೆ ಬದಿಯಲ್ಲಿ ಬಿಸಾಡಿ ಅಪಘಾತ ಆಗಿದೆ ಎಂದು ದಿಕ್ಕು ತಪ್ಪಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು, ಸತ್ತವ ಯಾರು ಅಂತಿರಾ , ಈ ಸ್ಟೋರಿ ಓದಿ……………
ಹೌದು, ರಸ್ತೆಯ ಮೇಲೆ ಅಪಘಾತವಾದ ರೀತಿ ಬಿದ್ದಿರುವ ಶವ, ಅಯ್ಯೋ ಈತನಿಗೆ ಹೀಗೆ ಆಗಬಾರದಿತ್ತು ಎಂದು ಗುಸು ಗುಸು ಎನ್ನುತ್ತಿರುವ ಜನ, ಸ್ಥಳ ಪರಿಶೀಲನೆ ಮಾಡುತ್ತಿರುವ ಪೋಲೀಸರು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸಿದ್ದೇನಹಳ್ಳಿಯಲ್ಲಿ. ಅಶೋಕ್ (35) ಕೊಲೆಯಾದ ದುರ್ದೈವಿ.
ಅಶೋಕ್ ವೃತ್ತಿಯಲ್ಲಿ ಪೇಂಟರ್. ಇದರಲ್ಲಿ ಕುಟುಂಬ ನಿರ್ವಹಣೆ ಮಾಡಲು ಹಣ ಸಾಲಲ್ಲ ಎಂದು ರಾತ್ರಿಯ ವೇಳೆ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದ. ಬರುವ ಹಣದಲ್ಲಿಯೇ ಮೂರು ಮಕ್ಕಳ ಜೊತೆ ಮಡದಿಯನ್ನ ಸಾಕಿಕೊಂಡು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿದ್ದ. ಆದರೆ ಈಗ ರಸ್ತೆ ಬದಿಯಲ್ಲಿ ಕೊಲೆಯಾಗಿ ಬಿದ್ದಿದ್ದಾನೆ.
ಇನ್ನೂ ಅಶೋಕ್ ಕೆಲಸಕ್ಕೆ ಹೋಗಿದ್ದ ವೇಳೆ, ಸ್ನೇಹಿತರಿಂದ ಎಣ್ಣೆ ಪಾರ್ಟಿ ಮಾಡೋಣಾ ಅಂತ ಕರೆ ಬಂದಿದೆ. ಆಗ ಅಶೋಕ್ ನನಗೆ ಒಂದು ಬಿಯರ್ ಬಾಟೆಲ್ ಸಾಕು ಎಂದಿದ್ದನಂತೆ. ಆದರೆ ಆತನ ಸ್ನೇಹಿತರು ಒಂದು ಯಾಕೆ ಮೂರು ಕೊಡಿಸುತ್ತೇನೆ ಬಾ ಎಂದು ಹೇಳಿದ್ದರಂತೆ. ಆಗ ಅಶೋಕ್ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಸ್ನೇಹಿತರ ಬಳಿ, ಹೆಂಗೆ ನನ್ನ ಸ್ನೇಹಿತರು, ಒಂದು ಕೇಳಿದರೆ ಮೂರು ಕೊಡುತ್ತಾರೆ ಎಂದು ಜಂಬ ಕೊಚ್ಚಿಕೊಂಡಿದ್ದಾನೆ. ಕೆಲಸದಿಂದ ಪಾರ್ಟಿಗೆ ಹೋದವನು ಈಗ ಹೆಣವಾಗಿದ್ದಾನೆ.
ಪಾರ್ಟಿ ಮಾಡಿಕೊಳ್ಳುವ ವೇಳೆ ಏನಾಯ್ತೋ ಏನೋ, ತಲೆಗೆ ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇನ್ನೂ ಕೊಲೆ ಬೆಳಕಿಗೆ ಬರಬಾರದು ಎಂದು ಕೆರೆಯಲ್ಲಿ ರಕ್ತದ ಕಲೆಗೆಲ್ಲಾ ಮಣ್ಣು ಹಾಕಿ, ನಂತರ ರಸ್ತೆ ಬದಿಗೆ ಶವವನ್ನ ತಂದು ಅಪಘಾತ ಆದ ರೀತಿ ಹಾಕಿ ಹೋಗಿದ್ದಾರೆ.
ಹೊಸಕೋಟೆ ಸೂಲಿಬೆಲೆ ಪೋಲೀಸರು ಸ್ಥಳಕ್ಕೆ ಬಂದಾಗಲೇ ಕೊಲೆಯ ರಸಹ್ಯ ಬಯಲಾಗಿದೆ. ಸೂಲಿಬೆಲೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಒಟ್ಟಾರೆ ಪಾರ್ಟಿಗೆ ಎಂದು ಹೋದವ ಈಗ ಬೀದ ಹೆಣವಾಗಿದ್ದಾನೆ. ಇನ್ನೂ ಕೊಲೆ ಮಾಡಿದ ಆರೋಪಿಗೆ ಅಕ್ರಮ ಸಂಬಂಧವಿತ್ತು. ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಕೊಲೆಯಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಪೋಲೀಸ್ ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.