ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ: ಏ.29 ರಿಂದ ಉಪವಾಸಕ್ಕೆ ನಿರ್ಧಾರ

ಕೋಲಾರ: ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಎಕ್ಸಿಡಿ ಕ್ಲಚ್ ಕಾರ್ಖಾನೆಯ ಕಾರ್ಮಿಕರು ಮತ್ತು ಮಾಲೀಕರ ಮಧ್ಯೆ ಶನಿವಾರ ನಡೆದ ಮಾತುಕತೆ ವಿಫಲವಾಗಿದ್ದು ಏ.29 ರಿಂದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮತ್ತು ಕಾರ್ಮಿಕ ಮುಖಂಡರು ಸೇರಿದಂತೆ ಕಂಪನಿಯ ಕಾರ್ಮಿಕರೊಂದಿಗೆ ಉಪವಾಸ ಸತ್ಯಾಗ್ರಹಕ್ಕೆ ಕೈಜೋಡಿಸಲಿದ್ದಾರೆ.

ಎಕ್ಷಿಡಿ ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಸುಮಾರು 33 ದಿನಗಳಿಂದ ನಡೆಸುತ್ತಿರುವ ಧರಣಿಗೆ ಇದುವರೆಗೆ ಯಾವುದೇ ಸ್ವಂದನೆ ಸಿಕ್ಕಿಲ್ಲ, ಜಿಲ್ಲಾಡಳಿತವು ಈಗಾಗಲೇ ಮಧ್ಯೆ ಪ್ರವೇಶ ಮಾಡಬೇಕಾಗಿತ್ತು, ಆದರೆ, ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ದಿನನಿತ್ಯ ಕಂಪನಿಯ ಮುಂದೆ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹವನ್ನು ನಡೆಸಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ಕಂಪನಿಯ ಆಡಳಿತ ಮಂಡಳಿಯ ವಿರುದ್ದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಎಕ್ಸಿಡಿ ಕ್ಲಚ್ ಕಾರ್ಮಿಕರು ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿತ್ತು ಆದರೆ ಜಾರಿ ಮಾಡಲು ಕಂಪನಿಯ ಆಡಳಿತ ಮಂಡಳಿ ಮುಂದಾಗಿಲ್ಲ. ತನ್ನ ಮೊಂಡುತನವನ್ನು ಪ್ರದರ್ಶಿಸುತ್ತಾ ಬಂದಿದ್ದು, ಖಂಡನೀಯವಾಗಿದೆ ಕಾರ್ಮಿಕರ ಬೇಡಿಕೆಗಳನ್ನು ನ್ಯಾಯುಯುತವಾಗಿದ್ದು, ಸ್ಥಳೀಯ ಕಾರ್ಮಿಕರಿಗೆ ನ್ಯಾಯ ಸಿಗಬೇಕಾಗಿದೆ. ಸರಕಾರ, ಜಿಲ್ಲಾಡಳಿತ ಮತ್ತು ಕಂಪನಿಯ ಆಡಳಿತ ಮಂಡಳಿಯ ಕಾರ್ಮಿಕರನ್ನು ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಸುಮಾರು 15 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡುವುದು ಕಂಪನಿಯ ಜವಾಬ್ದಾರಿ. ಆದರೆ, ಕಾರ್ಮಿಕರ ಹಕ್ಕುಗಳನ್ನು ಪ್ರಶ್ನೆ ಮಾಡಿದರೆ ಅವರ ವಿರುದ್ದ ಕೇಸ್ ಗಳನ್ನು ಹಾಕಿ ಕಂಪನಿಯಿಂದ ಹೊರಹಾಕಿದ್ದಾರೆ. ಕಾರ್ಮಿಕರ ಪರವಾಗಿ ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳು ಬೆಂಬಲವಾಗಿ ನಿಲ್ಲಲಿದ್ದು, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹಾಗೂ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವ ತನಕ ಕಾರ್ಮಿಕರೊಂದಿಗೆ ಉಪವಾಸ ಮಾಡಲು ಸಿದ್ದನಿದ್ದೇನೆ ಎಂದರು

ಜಿಲ್ಲೆಯಲ್ಲಿ ನೂರಾರು ಕೈಗಾರಿಕೆಗಳು ಸ್ಥಾಪನೆ ಯಾಗುತ್ತಿರುವುದು ಸ್ವಾಗತಾರ್ಹವಾದರೂ, ಜಿಲ್ಲೆಯ ನಿರುದ್ಯೋಗಿ ಯುವಜನರಿಗೆ ಮೊದಲ ಆದ್ಯತೆ ಕೆಲವಾಗಬೇಕು. ಪ್ರತಿ ಕೈಗಾರಿಕೆಗಳಲ್ಲಿ ಕಾರ್ಮಿಕರ ಮೇಲೆ ನಡೆಯುವ ಶೋಷಣೆ, ದಬ್ಬಾಳಿಕೆಗಳನ್ನು ತಡೆಗಟ್ಟಲು ಕಾರ್ಮಿಕ ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡಲು ಯೂನಿಯನ್ ಸ್ಥಾಪಿಸಬೇಕು. ದುಡಿಯುವ ಕಾರ್ಮಿಕರಿಗೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಬೆಂಬಲಿಸಬೇಕು. ಈ ಹೋರಾಟ ಉಗ್ರ ಸ್ವರೂಪಕ್ಕೆ ಹೋಗುವ ಮುನ್ನ ಎಚ್ಚತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಖಜಾಂಚಿ ಎಚ್.ಬಿ ಕೃಷ್ಣಪ್ಪ, ಕೆ.ಪಿ.ಆರ್.ಆರ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್, ಎಕ್ಷಿಡಿ ಕ್ಲಚ್ ಇಂಡಿಯಾ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಪ್ರಮೋದ್, ಖಜಾಂಚಿ ಮಂಜುನಾಥ್, ಸಿಐಟಿಯು ಮುಖಂಡರಾದ ಭೀಮರಾಜ್, ಶಿವಾನಂದ್, ಭದ್ರೀನಾಥ್, ಮುಂತಾದವರು ಇದ್ದರು

Leave a Reply

Your email address will not be published. Required fields are marked *