ಎಂ.ಶ್ರೀನಿವಾಸನ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಜ.31ರಂದು ಫ್ರೀಡಂ ಪಾರ್ಕ್ ನಲ್ಲಿ ಧರಣಿ

ಕೋಲಾರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೌನ್ಸಿಲರ್ ಎಂ.ಶ್ರೀನಿವಾಸನ್ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ಕೊಲೆಯ ಹಿಂದಿರುವ ಸಂಚುಕೋರರನ್ನು ಪತ್ತೆ ಹಚ್ಚಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.31 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಪಿ.ಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಮುಖಂಡರು ಆಗಿದ್ದ ಎಂ.ಶ್ರೀನಿವಾಸನ್ ಕೊಲೆಯ ವಿಚಾರವಾಗಿ ಹಲವಾರು ಸಂಘಟನೆಗಳು ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸಿದ ಪ್ರತಿಭಟನೆಗೆ ಮಣಿದು ಪ್ರಕರಣವನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸಿಓಡಿ ತನಿಖೆಗೆ ಒಪ್ಪಿಸಲಾಗಿತ್ತು ಎಂದು ವಿವರಿಸಿದರು.

ಪ್ರಕರಣವನ್ನು ಸಿ.ಓ.ಡಿ.ಗೆ ಒಪ್ಪಿಸಿ ಎರಡು ತಿಂಗಳು ಆಗಿದ್ದರು ಯಾವುದೇ ಪ್ರಗತಿ ಕಾಣದೆ ಇರುವುದರಿಂದ ಹಾಗೂ ಸಿ.ಓ.ಡಿ.ಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ನೀಡದಿರುವುದರಿಂದ ಮತ್ತು ಕೊಲೆಯ ಹಿಂದಿರುವ ಸೂತ್ರದಾರರನ್ನು ಪತ್ತೆ ಮಾಡುವಲ್ಲಿ ತನಿಖೆ ನಡೆಸುತ್ತಿರುವ ಸಿ.ಓ.ಡಿ ವಿಫಲವಾಗಿದೆ. ಇದರಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲವಾಗಿದೆ ಎಂದರು.

ಶ್ರೀನಿವಾಸಪುರದ ಎಂ.ಶ್ರೀನಿವಾಸನ್ ಕೊಲೆಯ ಹಿಂದಿರುವ ನಿಜವಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮತ್ತು ಇತ್ತೀಚಿಗೆ ತನಿಖೆ ವಹಿಸಿಕೊಂಡಿರುವ ಸಿ.ಓ.ಡಿ ಯಿಂದ ಸಾಧ್ಯವಾಗಲಿಲ್ಲ. ಕೊಲೆಯ ಹಿಂದಿರುವ ನಿಜವಾದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ವಿಫಲವಾಗಿರುವುದರಿಂದ ಈ ತನಿಖೆಯನ್ನು ಸಿ.ಬಿ.ಐ.ಗೆ ವಹಿಸುವುದೊಂದೇ ಏಕೈಕ ಮಾರ್ಗವೆಂದು ಅವರ ಕುಟುಂಬಸ್ಥರ ಜೊತೆ ಕೈಜೋಡಿಸಿ ಜ.31 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 11:30 ಗಂಟೆಗೆ ದಲಿತ ಮತ್ತು ಹಿಂದುಳಿದ, ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಮಠಾಧೀಶ ಸಾರಥ್ಯದಲ್ಲಿ ಜನಪರ ಸಂಘಟನೆಗಳೊಂದಿಗೆ ಸರ್ಕಾರದ ಮೇಲೆ ಒತ್ತಡ ತರಲು ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲಾಗುವುದೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್, ಬಿಸಿಯೂಟ ಮತ್ತು ಅಕ್ಷರ ದಾಸೋಹ ಸಂಘದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ಮಂಜಲಿ ಶಿವಣ್ಣ, ಸಮತ ಸೈನಿಕ ದಳ ಅಂಬರೀಶ್, ಮುಖಂಡ ಬದರಿ ನಾರಾಯಣ್, ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್, ಮೃತ ಶ್ರೀನಿವಾಸ್ ರವರ ಅಳಿಯ ಹಾಗೂ ಪುರಸಭಾ ಸದಸ್ಯ ಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *