ಕ್ಷೇತ್ರದಲ್ಲಿ ಸೋಲುವ ಭೀತಿಯ ಹಿನ್ನೆಲೆ ಹಾಲಿ ಶಾಸಕ ಟಿ.ವೆಂಕಟರಮಣಯ್ಯಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಪಣತೊಟ್ಟಿದ್ದ ಸ್ವಾಭಿಮಾನ ಕಾಂಗ್ರೆಸ್ ಬಳಗದ ಹಿರಿಯ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್ ಅವರನ್ನು ಶಾಸಕ ವೆಂಕಟರಮಣಯ್ಯ ದೂರಿನ್ವಯ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ತೆಗೆದುಹಾಕಿ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸ್ವಾಭಿಮಾನಿ ಕಾಂಗ್ರೆಸ್ ಬಳಗದ ನೇತೃತ್ವ ವಹಿಸಿ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸೋಲಿಸುವುದಾಗಿ ಹೈಕಮಾಂಡ್ ಗೆ ಸವಾಲು ಹಾಕಿದ್ದರು. ಈ ಹಿನ್ನೆಲೆ, ಪಕ್ಷಕ್ಕೆ ಹಾನಿ ಉಂಟಾಗುವಂತೆ ನಡೆದುಕೊಂಡಿದ್ದಾರೆ ಎಂದು ತಿಳಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶಿಸಿದ್ದಾರೆ.
ಇತ್ತೀಚೆಗೆ ಇದಕ್ಕೆ ಎರಡು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಟಿ.ವೆಂಕಟರಮಣಯ್ಯ ತಾಲೂಕಿಗೆ, ಪಕ್ಷಕ್ಕೆ ಎಂ.ಜಿ.ಶ್ರೀನಿವಾಸ್ ರವರ ಕೊಡುಗೆ ಏನು ? ಶೀಘ್ರವಾಗಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದಾಗಿ ಹೇಳಿದ್ದರು. ಅದರಂತೆ ಇಂದು ಉಚ್ಚಾಟನೆ ಮಾಡಲಾಗಿದೆ.
ಇವೆಲ್ಲಾ ಬೆಳವಣಿಗೆ ನಡುವೆ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಾಲಿ ಶಾಸಕ ಟಿ.ವೆಂಕಟರಮಣಯ್ಯನವರಿಗೆ ಘೋಷಣೆಯಾಗಿದ್ದು, ತನ್ನ ವಿರೋಧಿ ಬಣದಲ್ಲಿ ಕಾಣಿಸಿಕೊಂಡಿದ್ದ ಎಂ.ಜಿ ಶ್ರೀನಿವಾಸ್ ರನ್ನು ಪಕ್ಷದಿಂದ ಹೊರಹಾಕಿ ಶಾಸಕ ಟಿ.ವೆಂಕಟರಮಣಯ್ಯ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಮೊದಲ ಸರದಿಯಲ್ಲಿ ಎಂ.ಜಿ.ಶ್ರೀನಿವಾಸ್ ರವರಿಗೆ ಗೇಟ್ ಪಾಸ್ ನೀಡಲಾಗಿದ್ದು, ಮುಂದೆ ಕಾಂಗ್ರೆಸ್ ಸ್ವಾಭಿಮಾನ ಬಳಗದಲ್ಲಿ ಗುರುತಿಸಿಕೊಂಡಿದ್ದ ಬಿ.ಸಿ.ಆನಂದ್ ಕುಮಾರ್ ಹಾಗೂ ತಿ. ರಂಗರಾಜು ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.?