ಊರೂರು ಸುತ್ತಿ ಕನ್ನ ಹಾಕೋದು ಈತನ ‘ಹ್ಯಾಬಿಟ್’

ಯಲ್ಲಾಪುರ: ತಾಲೂಕಿನಲ್ಲಿ ನಡೆದಿದ್ದ ಮನೆ ಕಳ್ಳತನ ಹಾಗೂ ಮೆಡಿಕಲ್ ಶಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಕುಖ್ಯಾತ ಅಂತರ್ ಜಿಲ್ಲಾ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೋಯಿಡಾ ತಾಲೂಕಿನ ಅಣಶಿ ಗ್ರಾಮದ ನುಜ್ಜಿಯ ನಿವಾಸಿ ಸಮೀರ ಅಲಿಯಾಸ್ ಆರ್ಯ ತಂದೆ ಸೂರಜ ಪಾಟೀಲ (21) ಬಂಧಿತ ಆರೋಪಿ.

ದಿನಾಂಕ 01-11-2025 ರಂದು ಯಲ್ಲಾಪುರ ತಾಲೂಕಿನ ಸಾರಬೈಲ ಕಣ್ಣಿಗೇರಿ ಪಂಚಾಯತ ವ್ಯಾಪ್ತಿಯ ಮಿಲಾಗ್ರಿ ವಾಜ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಸುಮಾರು 1.13 ಲಕ್ಷ ರೂ. ಮೌಲ್ಯದ 17 ಗ್ರಾಂ ಬಂಗಾರ ಮತ್ತು 25 ಗ್ರಾಂ ತೂಕದ ಬೆಳ್ಳಿ ಕಳ್ಳತನವಾಗಿತ್ತು.

ಅಲ್ಲದೇ, ನವೆಂಬರ್ 21 ರಂದು ಪಟ್ಟಣದ ಮಲವಳ್ಳಿಯ ಸಂಕೇತ ಭಟ್ ಅವರ ಮಾಲೀಕತ್ವದ ‘ಸೀತಾಲಕ್ಷ್ಮಿ ಮೆಡಿಕಲ್’ ಶಾಪಿನಿಂದ 45,000 ರೂ. ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿಯ ಮೇರೆಗೆ ಡಿಸೆಂಬರ್ 7 ರಂದು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಸಾರೆಬೈಲ್‌ನಲ್ಲಿ ಮನೆ ಕಳ್ಳತನ ಮತ್ತು ಬೆಲ್ ರೋಡ್‌ನಲ್ಲಿ ಮೆಡಿಕಲ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತ ಆರೋಪಿಯು ರೂಢಿಗತ ಕಳ್ಳನಾಗಿದ್ದು, ಈತನು ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 12 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂಬುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ, ಜಗದೀಶ ಎಮ್.ಎನ್., ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಮೇಶ ಹನಾಪೂರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ತನಿಖಾ ತಂಡದಲ್ಲಿ ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜಿ ಚೌವ್ಹಾಣ ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಶಫೀ ಶೇಖ್, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೇಶ್ವರ ಕೆ., ನಾಗರಾಜ ನಾಯ್ಕ, ನೀಲಪ್ಪ ಸಿ.ಟಿ. ಮತ್ತು ಕಾರವಾರದ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ ಅವರು ಆರೋಪಿಯನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!