
ಉನ್ನಾವೋ……..
ಉನ್ನಾವೋ ಅತ್ಯಾಚಾರ,
ಕುಲದೀಪ್ ಸಿಂಗ್ ಸೇಂಗರ್,
ದೆಹಲಿ ಹೈಕೋರ್ಟ್ ಜಾಮೀನು ತೀರ್ಪು,
ಭಾರತ ನ್ಯಾಯಾಂಗ ವ್ಯವಸ್ಥೆಯ ಕಾರ್ಯ ವಿಧಾನದ ಬಗ್ಗೆ ಕೆಲವು ಪ್ರಶ್ನೆಗಳು……….
ಸ್ವಾತಂತ್ರ್ಯ ಭಾರತದಲ್ಲಿ ನಡೆದ, ಸಾರ್ವಜನಿಕ ಗಮನಕ್ಕೆ ಬಂದ, ಪೊಲೀಸ್ ಠಾಣೆಗಳಲ್ಲಿ ದಾಖಲಾದ, ನ್ಯಾಯಾಂಗ ವಿಚಾರಣೆ ಎದುರಿಸಿದ ಕೆಲವೇ ಕೆಲವು ಅತ್ಯಂತ ಕ್ರೌರ್ಯದ ಅತ್ಯಾಚಾರ ಪ್ರಕರಣಗಳಲ್ಲಿ ಉತ್ತರಪ್ರದೇಶದ ಅಲ್ಲಿನ ಶಾಸಕರಾಗಿದ್ದ ಕುಲ್ದೀಪ್ ಸಿಂಗ್ ಸೇಂಗರ್ ಎಂಬ ವ್ಯಕ್ತಿಯ ಪ್ರಕರಣವೂ ಒಂದು.
ಕೇವಲ ಅತ್ಯಾಚಾರವನ್ನೇ ಪರಿಗಣಿಸಿದಾಗ ಇದು ವಿಶೇಷ ಎನಿಸದಿರಬಹುದು. ಆದರೆ ಅತ್ಯಾಚಾರ ಘಟನೆ ಪೊಲೀಸ್ ಠಾಣೆಯ ಬಾಗಿಲಿಗೆ ಬಂದಾದ ನಂತರ ಈ 21ನೆಯ ಶತಮಾನದಲ್ಲೂ, ಮಾಧ್ಯಮ, ಸರ್ಕಾರ, ಪೋಲೀಸ್, ವಿರೋಧ ಪಕ್ಷಗಳು, ಕೆಲವು ಪ್ರಾಮಾಣಿಕ ಹೋರಾಟಗಾರರು, ನ್ಯಾಯಾಂಗ ಸ್ವಲ್ಪಮಟ್ಟಿಗೆ ಕ್ರಿಯಾತ್ಮಕವಾಗಿರುವಾಗಲೂ ಈ ವ್ಯಕ್ತಿ ತಾನೇ ಅತ್ಯಾಚಾರ ಮಾಡಿದ ಹೆಣ್ಣಿನ ಮೇಲೆ, ಅವರ ಕುಟುಂಬದ ಮೇಲೆ ತನ್ನೆಲ್ಲಾ ಕ್ರೌರ್ಯವನ್ನು ತೋರಿಸಿದ ರೀತಿ ಇದೆಯಲ್ಲಾ ಅದೇ ಅತ್ಯಂತ ಬರ್ಬರ ಮತ್ತು ಮೇಲೆ ಹೇಳಿದ ಎಲ್ಲಾ ವ್ಯವಸ್ಥೆಗಳ ವೈಫಲ್ಯ.
ಕೊನೆಗೂ ಸಂತ್ರಸ್ತೆ ಮತ್ತು ಅವರ ಬೆಂಬಲಿಗರು ಮತ್ತು ವಕೀಲರ ತೀವ್ರ ಹೋರಾಟದ ನಂತರ ನ್ಯಾಯಾಂಗವೇ ಮಧ್ಯೆ ಪ್ರವೇಶಿಸಿ, ತನಿಖೆ ನಡೆದು ಅಪರಾಧಿಗೆ ಜೀವಾವಧಿ ಶಿಕ್ಷೆ ಏನೋ ಆಯಿತು. ನಿಜಕ್ಕೂ ಹೇಳಬೇಕೆಂದರೆ ಮರಣದಂಡನೆಯೇ ವಿಧಿಸಬೇಕಾಗಿದ್ದ ಘಟನೆ ಇದು. ಏಕೆಂದರೆ ಆರೋಪಿ ಅಪರಾಧ ಎಸಗಿದ ನಂತರವೂ ಯಾವುದೇ ಭಯವಿಲ್ಲದೆ, ನ್ಯಾಯಾಂಗದ ಮೇಲೆ ಗೌರವವೂ ಇಲ್ಲದೇ, ಮತ್ತೆ ಮತ್ತೆ ಸಾಕ್ಷಿ ಬೆದರಿಸುವ ಮತ್ತು ಕೊಲ್ಲುವ ಅಪರಾಧ ಮಾಡುತ್ತಲೇ ಇದ್ದಾನೆ.
ದೆಹಲಿಯ ನಿರ್ಭಯ ಘಟನೆಯ ನಂತರ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಗರಿಷ್ಟ ಶಿಕ್ಷೆ ವಿಧಿಸಲಾಗುತ್ತದೆ. ಆದರೂ ಹೇಗೋ ಏನೋ ನ್ಯಾಯಾಲಯ ಅವನ ಬಗ್ಗೆ ಸ್ವಲ್ಪ ಕರುಣೆ ತೋರಿ ಜೀವಾವಧಿ ಶಿಕ್ಷೆ ವಿಧಿಸಿ ಆತನನ್ನು ಜೈಲಿನ ಒಳಗಡೆಯೇ ಕೊಳೆಯುವಂತೆ ಮಾಡಿತ್ತು. ಆದರೆ ದೆಹಲಿ ಹೈಕೋರ್ಟ್ ಆತನಿಗೆ ನೀಡಿದ್ದ ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಮಾತ್ರ ನ್ಯಾಯಾಂಗದ ಮೇಲೆ ಭರವಸೆಯನ್ನೇ ಕಳೆದುಕೊಳ್ಳುವಂತಾಗಿದೆ. .
ಇತ್ತೀಚಿನ ಸುದ್ದಿ ಪ್ರಕಾರ ಸುಪ್ರೀಂ ಕೋರ್ಟ್ ಆ ಬಿಡುಗಡೆಯ ಜಾಮೀನಿಗೆ ಮತ್ತೆ ತಡೆಯಾಜ್ನೆ ನೀಡಿದೆ. ಅದೇನೆ ಆಗಲಿ ಹೈಕೋರ್ಟ್ ನ್ಯಾಯಾಧೀಶರು ಆತನನ್ನು ಕಾರಣವೇ ಇಲ್ಲದೆ ಬಿಡುಗಡೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತದೆ.
ಅಧಿಕಾರಸ್ಥ ರಾಜಕಾರಣಿಗಳೇ ಆಗಲಿ, ಅಧಿಕಾರಿಗಳೇ ಆಗಲಿ, ಮಾಧ್ಯಮ, ಧಾರ್ಮಿಕ, ವೈದ್ಯ, ವಕೀಲ ಯಾವುದೇ ವೃತ್ತಿಯವರೇ ಆಗಿರಲಿ ಕಾನೂನು ಪಾಲನೆ ಮಾಡಬೇಕೆಂಬುದು ಎಷ್ಟು ಮುಖ್ಯವೋ, ಅದರೊಳಗಡೆ ಆ ವೃತ್ತಿ ಧರ್ಮದಲ್ಲಿ ವಿವೇಚನೆ ಎಂಬುದನ್ನೂ ಬಳಸಬೇಕು ಎಂಬುದು ಅಷ್ಟೇ ಮಹತ್ವದ ಅಂಶ. ಪ್ರಜಾಪ್ರಭುತ್ವದಲ್ಲಿ ಕಾನೂನೇ ಅಂತಿಮವಾದರೂ ಮಾನವೀಯತೆಯ ದೃಷ್ಟಿಯಿಂದ ವಿವೇಚನೆಯೂ ಅಷ್ಟೇ ಮುಖ್ಯ. ವಿವೇಚನೆ ಇಲ್ಲ ಎಂಬ ಕಾರಣದಿಂದಲೇ ಅಧಿಕಾರಿಗಳ ಬಗ್ಗೆ, ಮಾಧ್ಯಮದ ಬಗ್ಗೆ, ರಾಜಕಾರಣಿಗಳ ಬಗ್ಗೆ ಸಾಮಾನ್ಯ ಜನರಿಗೆ ಅತೀ ಹೆಚ್ಚು ಕೋಪ ಇರುವುದು ಮತ್ತು ಆಡಳಿತ ವ್ಯವಸ್ಥೆ ಕುಸಿದು ಬೀಳುತ್ತಿರುವುದು.
ಒಬ್ಬ ವ್ಯಕ್ತಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಆಗುತ್ತಾನೆ ಎಂದರೆ ಆತನಿಗೆ ಕಾನೂನಿನ ತಿಳುವಳಿಕೆಯ ಜೊತೆಗೆ ಇಡೀ ಸಮಾಜದ, ಇಲ್ಲಿನ ಸಂಸ್ಕೃತಿಯ, ಮಾನವೀಯ ಮೌಲ್ಯಗಳ ಬಗ್ಗೆ ಸದಾ ಪ್ರಜ್ಞಾಪೂರ್ವಕ ಅರಿವು ಇರಲೇಬೇಕು. ಕೆಲವೊಮ್ಮೆ ಕಾನೂನನ್ನು ಮೀರಿಯೂ ಮಾನವೀಯ ಮೌಲ್ಯಗಳ ಪರವಾಗಿ ತೀರ್ಪು ನೀಡಬೇಕಾಗುತ್ತದೆ. ಆ ರೀತಿಯ ಅನೇಕ ಉದಾಹರಣೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಇವೆ. ಏಕೆಂದರೆ ಪ್ರತಿಯೊಂದನ್ನೂ ಕಾನೂನಿನ ವ್ಯಾಪ್ತಿಯಲ್ಲಿ ನೋಡಬೇಕಾದರೂ ಅದನ್ನು ಮೀರಿ ವಿವೇಚನೆ ಬಳಸದಿದ್ದರೆ ಕಾನೂನಿನ ವ್ಯವಸ್ಥೆಯೇ ಕುಸಿದು ಬೀಳಬಹುದು.
” Courts will delivere the law, but no guarantee of Justice “ಎಂಬ ಮಾತಿದೆ. ನ್ಯಾಯಾಲಯಗಳು ಕಾನೂನನ್ನು ಕೊಡುತ್ತವೆ. ಆದರೆ ಅದೇ ನ್ಯಾಯ ಎನ್ನುವ ಖಚಿತತೆ ಇರುವುದಿಲ್ಲ. ನ್ಯಾಯಾಲಯದ ದೃಷ್ಟಿಯಲ್ಲಿ ಕಾನೂನೇ ನ್ಯಾಯ…..
ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲುವಾಸ ಅನುಭವಿಸುತ್ತಿದ್ದ ಕುಲ್ದೀಪ್ ಸಿಂಗ್ ಸೇಂಗರ್ ಎಂಬ ಕ್ರೂರಿಯನ್ನು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾವುದೋ ಕಾನೂನಿನ ಒಳಹುಳುಕನ್ನು ಮುಂದೆ ಮಾಡಿ ಬಿಡುಗಡೆ ಮಾಡಿದ ಅಥವಾ ಜಾಮೀನು ನೀಡಿದ ಘಟನೆ ನಿಜಕ್ಕೂ ನಂಬಲಸಾಧ್ಯ ಮತ್ತು ಕ್ಷಮೆಗೂ ಅನರ್ಹ. ನ್ಯಾಯಾಲಯಗಳು, ಕಾನೂನು ಏನೇ ಇರಬಹುದು. ಆಗಲೇ ಹೇಳಿದಂತೆ ವಿವೇಚನೆಯೂ ಸಹ ಬಹಳ ಮುಖ್ಯ.
ನಿಜ, ಆ ಘಟನೆ ನಡೆದಾಗ ನಾವು ಅಲ್ಲಿರಲಿಲ್ಲ, ನಾವು ಪ್ರತ್ಯಕ್ಷ ದರ್ಶಿಯೂ ಅಲ್ಲ, ಅಲ್ಲಿ ಏನು ಬೇಕಾದರೂ ನಡೆದಿರಬಹುದು ಹೀಗೆ ಒಂದಷ್ಟು ವಾದ ಮಂಡಿಸಿದರೂ ಸಹ, ವಿವೇಚನೆ, ಅನುಭವ, ಘಟನೆಯ ಸಂಪೂರ್ಣ ವಿವರಣೆ ಪಡೆದಾಗ ಮತ್ತು ಅಪರಾಧಿಯ ಹಿನ್ನೆಲೆಯನ್ನು ಗಮನಿಸಿದಾಗ ಘಟನೆ ನಡೆದಿರುವ ಸಾಧ್ಯತೆ ಇರುತ್ತದೆ. ಏಕೆಂದರೆ ಸೇಂಗರ್ ಸಾಮಾನ್ಯ ವ್ಯಕ್ತಿಯಲ್ಲ. ಆಡಳಿತ ಪಕ್ಷದ ಶಾಸಕ ಆಗಿದ್ದವನು. ಅಂತಹವನ ಮೇಲೆ ಈ ರೀತಿಯ ಗಂಭೀರವಾದ ಸುಳ್ಳು ಸುಳ್ಳು ಕೇಸ್ ಹಾಕುವುದು ಬಹುತೇಕ ಸಾಧ್ಯವಿಲ್ಲ.

ನಮ್ಮ ಸಂವಿಧಾನದಲ್ಲಿ ಹೇಳಿರುವಂತೆ ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಇದು ಅತ್ಯಂತ ಮಾನವೀಯ ಮೌಲ್ಯಗಳ ಅಂಶ. ಹಾಗೆಂದು ಅಪರಾಧಿಗಳಿಗೆ ಅವರ ಆರೋಪಗಳು ಖಚಿತವಾದ ಮೇಲೆಯೂ ಶಿಕ್ಷೆ ಹೊರೆತುಪಡಿಸಿ ಈ ರೀತಿಯ ಬಿಡುಗಡೆ ಒಳ್ಳೆಯದಲ್ಲ ಮತ್ತು ಸ್ವೀಕಾರಾರ್ಹವಲ್ಲ.
.
ಇಷ್ಟೆಲ್ಲಾ ಆರೋಪಗಳ ನಡುವೆಯೂ ನಮ್ಮ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿಲ್ಲ. ಆದರೆ ಕೆಲವು ನ್ಯಾಯಾಧೀಶರು ಈ ರೀತಿಯ ತಪ್ಪು, ಕೆಟ್ಟ, ಹುಚ್ಚು ತೀರ್ಮಾನಗಳನ್ನು ನೀಡುವುದು ನಿಲ್ಲಬೇಕಿದೆ. ಅದರಲ್ಲೂ ಹೈಕೋರ್ಟ್ ನಂತಹ ಉನ್ನತ ನ್ಯಾಯಾಲಯದಲ್ಲಿ ಈ ರೀತಿಯ ತೀರ್ಪುಗಳು ಬಾರದಂತೆ ನ್ಯಾಯಾಧೀಶರ ಗುಣಮಟ್ಟವನ್ನು ಕಾಪಾಡುವುದು ಸಹ ದೇಶದ ನ್ಯಾಯಾಂಗ ವ್ಯವಸ್ಥೆಯ ಜವಾಬ್ದಾರಿ.
ಸೇಂಗರ್ ಪ್ರಕರಣ ಮಾತ್ರ ಇಲ್ಲಿ ಉಲ್ಲೇಖಿಸಲಾಗಿದ್ದರೂ ಈ ರೀತಿಯ ಇನ್ನೂ ಹಲವು ಪ್ರಕರಣಗಳ ತೀರ್ಪುಗಳು ಕೆಲವೊಮ್ಮೆ ಜನರನ್ನು ದಿಗ್ಭ್ರಮೆಗೊಳಿಸಿವೆ. ಸಂವಿಧಾನವನ್ನು ಅರ್ಥೈಸಬೇಕಾದ ನ್ಯಾಯಾಲಯಗಳ ಘನತೆ, ಗೌರವ, ನಂಬಿಕೆಯ ಮೇಲೆ ಪ್ರಜಾಪ್ರಭುತ್ವದ ಯಶಸ್ಸು ಅಡಗಿದೆ. ಆ ಯಶಸ್ಸಿನ ಮೇಲೆ ಜನರ ಮತ್ತು ದೇಶದ ಪ್ರಗತಿ ನಿರ್ಧಾರವಾಗುತ್ತದೆ.
ಭಾರತದ ನ್ಯಾಯಾಂಗ ವ್ಯವಸ್ಥೆಯ ಒಂದು ನೋಟ…….
ಭಾರತೀಯ ಸಮಾಜವನ್ನು ಬಹುತೇಕ ಭಯ, ಭಕ್ತಿ, ನಂಬಿಕೆ, ಸಂಸ್ಕೃತಿ, ಸಂಪ್ರದಾಯ, ಭ್ರಮೆ ಮತ್ತು ಅಸಮಾನತೆಯ ಆಧಾರದ ಮೇಲೆ ನಿರ್ಮಿಸಲಾಗಿದೆ. ಅಂತಹ ಸಮಾಜಕ್ಕೆ 1950 ರ ನಂತರ ಸಂವಿಧಾನವೆಂಬ ಒಂದು ಕ್ರಮಬದ್ಧ ನೀತಿ ನಿಯಮಗಳನ್ನು ಅಳವಡಿಸಲಾಯಿತು.
ಬಹುಶಃ ಅದಕ್ಕೆ ಬೇಕಾದ ಮಾನಸಿಕ ಸಿದ್ದತೆ ಅನೇಕ ಭಾರತೀಯರಿಗೆ ಇರಲಿಲ್ಲ. ಒಂದು ರೀತಿಯ ವೈಯಕ್ತಿಕ ಮತ್ತು ಸಾಮಾಜಿಕ ಘರ್ಷಣೆ ಪ್ರಾರಂಭವಾಯಿತು.
ಬಡತನ, ಅಜ್ಞಾನ, ಅನಕ್ಷರತೆ, ಶೋಷಣೆ ಈ ಸಮಾಜದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಕೆಲವೇ ಕುಟುಂಬಗಳು ಹಿಡಿತದಲ್ಲಿ ಇಟ್ಟುಕೊಂಡಿದ್ದವು.
ಸುಮಾರು 1977 ರವರೆಗೆ ಈ ಸ್ಥಿತಿ ಹಾಗೆಯೇ ಮುಂದುವರೆಯಿತು. ಅಲ್ಲಿಂದ ನಿಧಾನವಾಗಿ ಒಂದಷ್ಟು ಬದಲಾವಣೆಗಳು ಆಗತೊಡಗಿದವು. ಜನಜಾಗೃತಿ ಮೂಡತೊಡಗಿತು. 1995 ರ ನಂತರ ಅದು ಮತ್ತಷ್ಟು ವೇಗ ಪಡೆಯಿತು.
ಸಾಮಾಜಿಕ ಬದಲಾವಣೆಯ ಜೊತೆಗೆ ಆರ್ಥಿಕ ಬದಲಾವಣೆಯು ಸಹ ಮತ್ತಷ್ಟು ವೇಗ ಪಡೆಯಿತು. ಅಲ್ಲಿಂದ ಮುಂದೆ ಮಾನವೀಯ ಮತ್ತು ನೈತಿಕ ಮೌಲ್ಯಗಳ ಕುಸಿತವೂ ವೇಗ ಪಡೆಯಿತು.
ನಾಗರಿಕ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ರೂಪಿಸಿಕೊಂಡಿದ್ದ ವಿದೇಶಿ ವ್ಯಾಪಾರಗಾರರು ದೇಶದೊಳಗೆ ಪ್ರವೇಶಿಸಿದ ನಂತರ ಭಾರತೀಯ ಮನಸ್ಸುಗಳು ಚಂಚಲವಾಗಿದ್ದು ನೇರವಾಗಿಯೇ ಗಮನಿಸಬಹುದಾಗಿದೆ. ವಿದೇಶಿ ಬಂಡವಾಳಗಾರರು ಹಣವನ್ನೇ ಕೇಂದ್ರೀಕರಿಸಿ ಭಾರತದ ಮಾರುಕಟ್ಟೆ ಪ್ರವೇಶಿಸಿ ಇಲ್ಲಿನ ನೈತಿಕ ಮೌಲ್ಯಗಳು ಕುಸಿಯಲು ಪ್ರೇರೇಪಿಸಿದರು.
ಸಮಾಜ – ಮಾನವೀಯ ಮೌಲ್ಯಗಳು – ಸರ್ಕಾರ ಎಲ್ಲದರ ಆಧಾರ ಸ್ತಂಭವಾಗಿದ್ದ ನೈತಿಕತೆಯ ಜಾಗದಲ್ಲಿ ಕಾನೂನು ಆಶ್ರಯ ಪಡೆಯತೊಡಗಿತು. ಮೊದಲು ಸಣ್ಣ ಪ್ರಮಾಣದಲ್ಲಿ ಇದ್ದ ಇವು ನಂತರ ವ್ಯಾಪಕವಾಗಿ ಬದಲಾಯಿತು.
ಹಣದಿಂದಲೇ ಕಾನೂನನ್ನು ಸಹ ಪಡೆಯಬಹುದು ಎಂಬ ಮನೋಭಾವ ಬಲವಾಯಿತು. ಕೊಲೆ, ಅತ್ಯಾಚಾರ, ಹಲ್ಲೆ, ಭ್ರಷ್ಟಾಚಾರ ಮಾಡಿಯೂ ಕಾನೂನಿನ ಮೂಲಕವೇ ತಪ್ಪಿಸಿಕೊಳ್ಳಬಹುದು ಎಂದು ಸಮಾಜದ ಬಹುತೇಕ ಜನರಿಗೆ ಮನವರಿಕೆಯಾಯಿತು.
ನ್ಯಾಯಾಲಯ ಅಥವಾ ಕಾನೂನುಗಳು ಅಪರಾಧಿಗಳ ಆಶ್ರಯ ತಾಣವಾಯಿತು. ನ್ಯಾಯವನ್ನು ಅಥವಾ ಪರೋಕ್ಷವಾಗಿ ಕಾನೂನನ್ನು ಹಣ, ಅಧಿಕಾರದಿಂದ ಪಡೆಯಬಹುದು ಎಂದು ಅಪರಾಧಿ ಮನೋಭಾವದವರಿಗೆ ಅರಿವಾಯಿತು. ಅದರ ದುಷ್ಪರಿಣಾಮಗಳೇ ಉತ್ತರ ಪ್ರದೇಶದ ಪ್ರತಿಭಟನಾ ನಿರತ ರೈತರ ಮೇಲೆ ಹಾಡು ಹಗಲೇ ವಾಹನ ಚಲಾಯಿಸುವ ಧೈರ್ಯ ಪ್ರದರ್ಶಿಸಿದ್ದು ಮತ್ತು ಆ ರೀತಿಯ ಅನೇಕ ಘಟನೆಗಳು.
ಇದನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರಗಳು ಚುನಾವಣಾ ರಾಜಕೀಯದಲ್ಲಿ ಮುಳುಗಿ ಹೋಗಿ ಮಾನವೀಯ ಮೌಲ್ಯಗಳಿಗಿಂತ ಓಟುಗಳ ಮೌಲ್ಯವನ್ನೇ ಹೆಚ್ಚು ಅಳೆಯುವುದರಿಂದ ಕಾನೂನುಗಳು ನಿಷ್ಪ್ರಯೋಜಕವಾಗುವ ಹಂತ ತಲುಪಿದೆ.
ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ದೈವತ್ವದ ಮೇಲೆಯೂ ನಂಬಿಕೆ ಶಿಥಿಲವಾಗಿದೆ. ಹಾಗಾದರೆ ಪರ್ಯಾಯ ಏನು ಎಂಬ ಪ್ರಶ್ನೆ ಕಾಡತೊಡಗಿದೆ.
ಒಂದು ದೇಶದ ಸಂವಿಧಾನದ ಯಶಸ್ಸಿಗೆ ನೈತಿಕ ಮೌಲ್ಯಗಳು ಮುಖ್ಯವೇ ಹೊರತು ಕಾನೂನಿನ ನೀತಿ ನಿಯಮಗಳಲ್ಲ. ಇದು ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಇದೇ ಅರ್ಥದ ಮಾತುಗಳನ್ನು ಹೇಳಿದ್ದರು.
ನೈತಿಕತೆಯೇ ಕಾನೂನು – ಕಾನೂನೇ ನೈತಿಕತೆ ಎಂಬುದು ಜನರಿಗೆ ಮನವರಿಕೆಯಾಗದೆ ಈ ಪರಿಸ್ಥಿತಿ ಬದಲಾಗುವುದಿಲ್ಲ. ವಿಶ್ವದ ಬಹುದೊಡ್ಡ ಮತ್ತು ಅತ್ಯುತ್ತಮ ಸಂವಿಧಾನ ಹೊಂದಿರುವ ಭಾರತದಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಭಾವನಾತ್ಮಕ ನೆಲೆಯಲ್ಲಿ ಮಾತನಾಡುತ್ತಾ, ಸಮುದಾಯಗಳ ನಡುವೆ ದ್ವೇಷ ಹರಡುತ್ತಾ ಆಡಳಿತಾತ್ಮಕ ವಿಫಲತೆಯನ್ನು ಮುಚ್ಚಿಕೊಳ್ಳುವ ರಾಜಕೀಯ ವ್ಯವಸ್ಥೆ ದೇಶವನ್ನು ಮುನ್ನಡೆಸುತ್ತಿದೆ.
ಇದನ್ನು ತುಂಬಾ ಗಂಭೀರವಾಗಿ ನಾವುಗಳು ಪರಿಗಣಿಸಬೇಕಾಗಿದೆ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಕುಸಿಯದಂತೆ ತಡೆಯುವ ಜವಾಬ್ದಾರಿ ನಾವು ಹೊರಬೇಕಾಗಿದೆ. ಇಲ್ಲದಿದ್ದರೆ ಈಗಾಗಲೇ ಪ್ರಾರಂಭವಾಗಿರುವ ಅನೈತಿಕ ಮತ್ತು ಅಮಾನವೀಯ ಮೌಲ್ಯಗಳೇ ಸಮಾಜದಲ್ಲಿ ಮಾನ್ಯತೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಎಚ್ಚರಿಸುತ್ತಾ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ