“ಉತ್ತರ ಕರ್ನಾಟಕದ ಗ್ರಾಮೀಣ ನಾಗರ ಪಂಚಮಿ: ಹೆಣ್ಮಕ್ಕಳ ಜೋಕಾಲಿ ಸಂಭ್ರಮ”

ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಂತು ನಾಗರ ಪಂಚಮಿ ಹಬ್ಬವನ್ನ ಸಡಗರ, ಸಂಭ್ರಮದಿಂದ ಹೆಣ್ಮಕ್ಕಳು ಜೋಕಾಲಿಯಲ್ಲಿ ಜಿಕಿಕೊಂಡು ಆಚರಿಸುವ ಹಬ್ಬವಷ್ಟೆ ಅಲ್ಲದೇ ಇದು ಸಹೋದರತ್ವದ ಬಾಂಧವ್ಯ ಬೆಸೆಯುವಂತಹ ಮಹತ್ವಪೂರ್ಣ ನಾಡಿನ ದೊಡ್ಡ ಹಬ್ಬವಿದಾಗಿದೆ.

ಈ ನಾಗರ ಪಂಚಮಿ ಹಬ್ಬ ಸಮಿಪಿಸುತ್ತಿದಂತೆ ಗಂಡನ ಮನೆಯಲ್ಲಿರುವ ಪ್ರತಿ ಹೆಣ್ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಸಂತಸ ಕಾಣಬಹುದು. ಏಕೆಂದರೆ ಸಹೋದರನಾದವನು ಸಹೋದರಿಯ ಗಂಡನ ಮನೆಗೆ ಹೋಗಿ ಪಂಚಮಿ ಹಬ್ಬಕ್ಕೆ ಕರೆತರುವದು ಪುರಾತನ ಕಾಲದಿಂದಲ್ಲೂ ವಾಡಿಕೆಯಾಗಿ ಬಂದಿದೆ. ಅದಕ್ಕೆ ಪ್ರತಿ ಹೆಣ್ಮಕ್ಕಳಲ್ಲಿ ಪಂಚಮಿಯ ಸಂಭ್ರಮ ಮನೆ ಮಾಡಿರುತ್ತದೆ.

ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಬೆಳಿಗ್ಗೆ ಎದ್ದೊಡನೆ ಮೈತುಂಬಾ ಎಣ್ಣೆ-ಜೋಳದ ಹಿಟ್ಟು ಹಚ್ಚಿ ಸ್ನಾನ ಮಾಡಿಸುವುದು ಹಿಂದಿನಿಂದ ಬಂದ ವಾಡಿಕೆ. ನಾಡಿನಾದ್ಯಂತ ಮಹಿಳೆಯರು ಹಾಗೂ ಪುಟ್ಟ ಹೆಣ್ಮಕ್ಕಳು ಹೊಸ ಬಟ್ಟೆ ತೊಟ್ಟು ಗ್ರಾಮದಲ್ಲಿರುವ ನಾಗರ ಕಟ್ಟೆಗಳಿಗೆ ತೆರಳಿ, ಶ್ರದ್ಧಾ-ಭಕ್ತಿಯಿಂದ ನಾಗ ದೇವತೆಯ ಪ್ರತಿಮೆ-ಹುತ್ತಕ್ಕೆ ಹಾಲೆರೆದು, ಹೋಳಿಗೆ ನೈವೇದ್ಯ ಅರ್ಪಿಸುವ ಮುಖಾಂತರ ತಮ್ಮ ಸಹೋದರನ ಆಯುಷ್ಯ-ಆರೋಗ್ಯ ನೂರೂ ಕಾಲ ವೃದ್ಧಿಸಲೆಂದು ಮೊರೆ ಇಡುತ್ತಾರೆ.

ತದನಂತರದಲ್ಲಿ ತಮ್ಮ ಮನೆಗಳಲ್ಲಿ ರವೆ-ಶೇಂಗಾ ಉಂಡೆ, ಕಾರಚಿಕಾಯಿ, ಚಕಲಿ, ಕರದಂಟು, ಚುಡಾ ಹೀಗೆ ವಿವಿಧ ಖಾದ್ಯಗಳ ತಿನಿಸು ತಿಂದು ಜೋಕಾಲಿ ಜಿಕಿಕೊಂಡ ಎಂಜಾಯ್ ಮಾಡುವ ಹಬ್ಬ. ಈ ದಿನ ಗ್ರಾಮೀಣ ಪ್ರದೇಶದಲ್ಲಿ ಸಂಜೆ ಹೊತ್ತಿಗೆ ಸಂಗ್ರಾಣಿ ಕಲ್ಲು ಎತ್ತುವುದು, ಬಂಡಿ ಎಳೆಯುವುದು, ಬಾರವಾದ ಕಲ್ಲು ಎತ್ತುವುದು, ಲಿಂಬು ಹಣ್ಣು ಚಮಚದಲ್ಲಿಟ್ಟುಕೊಂಡು ಓಡುವುದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಣ್ಣಾಮುಚ್ಚಾಲೆ ಪುರುಷರು ಆಡಿದರೆ, ಇನ್ನೂ ಮಹಿಳೆಯರು ಜೋಕಾಲಿಯಲ್ಲಿ ಜಿಕುವ, ಹಾಡು ಹಾಡುವ ಮೂಲಕ ಇಂತಹ ಗ್ರಾಮೀಣ ಆಟಗಳನ್ನು ಆಡಿ ಹಬ್ಬದ ಖುಷಿ ಸಂಭ್ರಮಿಸುವರು.

ಈ ಬಾರಿ ಮುಂಗಾರು ಮಳೆ-ಬೆಳೆಯ ಕೊರತೆ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ನಾಗರ ಪಂಚಮಿ ಹಬ್ಬಕ್ಕೆ ಜನರು ಸಿಹಿ ತಿಂಡಿ-ತಿನಿಸುಗಳನ್ನು ತಯಾರಿಸಲು ಸಾಮಾಗ್ರಿ ಖರೀದಿ ಜೋರಾಗಿಯೇ ಮಾಡುತ್ತಿದ್ದಾರೆ.

ವರದಿ: ರೇವಣಸಿದ್ದ ಬಗಲಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ)

Leave a Reply

Your email address will not be published. Required fields are marked *

error: Content is protected !!