
ಉತ್ತಮ ಮಳೆ, ಬೆಳೆ, ಊರಿನ ಅಭಿವೃದ್ಧಿ, ರಕ್ಷಣೆಗಾಗಿ ಉದ್ಭವ ಬಸವಣ್ಣನಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಹರಕೆ ಕಟ್ಟಿಕೊಂಡ ಕೊಟ್ಟಿಗೆಮಾಚೇನಹಳ್ಳಿ ಗ್ರಾಮಸ್ಥರು.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಸಾಸಲು ಚಿನ್ನಮ್ಮನ ಪಾದಾಲು ಬಂಡೆ ಬಳಿ ಉದ್ಭವ ಬಸವಣ್ಣ ಮೂರ್ತಿ ಇದ್ದು, ಅಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಊರಿಗೆ ಊರೇ ಹೋಗಿ ಉದ್ಭವ ಬಸವಣ್ಣ ಮೂರ್ತಿಗೆ 101 ತೆಂಗಿನಕಾಯಿ ಹೊಡೆಯುವ ಮೂಲಕ ಉತ್ತಮ ಮಳೆ, ಬೆಳೆ, ಊರಿನ ಅಭಿವೃದ್ಧಿ, ರಕ್ಷಣೆ ಮಾಡುವಂತೆ ದೇವರ ಮೊರೆ ಹೋದರು.

ಊರಿನ ಪ್ರತಿ ಮನೆ ಮನೆಗೆ ಹೋಗಿ ಅಕ್ಕಿ, ಬೇಳೆ ಸೇರಿದಂತೆ ಪ್ರಸಾದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಕಲೆ ಹಾಕಲಾಗಿತ್ತು. ಪೂಜೆ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.

ತಲೆ ತಲಾಂತರ ಬಂದಂತಹ ಆಚಾರ ವಿಚಾರವಿದು. ಸುಮಾರು ವರ್ಷಗಳಿಂದೆ ನಮ್ಮ ಊರಿನ ಗ್ರಾಮಸ್ಥರೊಬ್ಬರು ಕುರಿ, ಮೇಕೆ, ಹಸು ಮೇಯಿಸಲು ಸಾಸಲು ಚಿನ್ನಮ್ಮನ ಪಾದಾಲು ಬಂಡೆ ಬಳಿ ಹೋದಾಗ ಉದ್ಭವ ಬಸವಣ್ಣ ಮೂರ್ತಿ ಕಂಡುಬಂದಿದೆ. ಅಂದಿನ ರಾತ್ರಿಯೇ ಆತನಿಗೆ ದೇವರು ಕನಸಿಗೆ ಬಂದು ಪ್ರತಿ ವರ್ಷ 101 ತೆಂಗಿನಕಾಯಿ ಹೊಡೆದು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಿದರೆ ನಿಮ್ಮ ಇಷ್ಟಾರ್ಥಸಿದ್ಧಗಳು ನೆರವೇರುತ್ತವೆ ಎಂದು ಹೇಳಲಾಗಿತ್ತಂತೆ. ಆದ್ದರಿಂದ ಅಂದಿನಿಂದ ಇಂದಿನವರೆಗೂ ಆ ಸಂಪ್ರದಾಯವನ್ನು ಊರಿನ ಉದ್ಧಾರಕ್ಕಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಯುವಕ ರವಿಕುಮಾರ್ ಹೇಳಿದರು.