ಕೆ.ಆರ್.ಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನರ ತೆರಿಗೆಯನ್ನು ಅಭಿವೃದ್ದಿ ಕೆಲಸಗಳಿಗೆ ಬಳಕೆ ಮಾಡುತ್ತೇವೆ, ಬೆಲೆ ಏರಿಕೆಯನ್ನು ಕಡಿಮೆ ಮಾಡಿ ಜನರಿಗೆ ಹೊರೆಯನ್ನು ಕಡಿಮೆ ಮಾಡುತ್ತೇವೆ ಎಂದು ಕೆ.ಆರ್.ಎಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ನಗರದಲ್ಲಿ ನಡೆದ ದೇಣಿಗೆ ಸಂಗ್ರಹ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಕೆ.ಆರ್ ಮಾರುಕಟ್ಟೆ ವೃತ್ತದ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಶಾಲಾ ಶುಲ್ಕ ಕಡಿತ , ಆರೋಗ್ಯ ಸೇವೆ ಸೇರಿದಂತೆ ಇತರ ಸೇವೆಗಳನ್ನು ನಮ್ಮ ಪಕ್ಷದ ವತಿಯಿಂದ ಉಚಿತವಾಗಿ ನೀಡುವ ಸಂಕಲ್ಪ ಮಾಡಿದ್ದೇವೆ ಹೀಗಾಗಿ ಜನತೆ ಕೆ.ಆರ್.ಎಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸಬೇಕು ಎಂದರು.
ನಮ್ಮ ಪಕ್ಷ ಕಡು ಭ್ರಷ್ಟರ ವಿರುದ್ದ ಹೋರಾಟ ನಡೆಸುತ್ತಿದೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಣ, ಹೆಂಡ ಹಂಚಲು ಬಂದಾಗ ಹಿಡುದು ಪ್ರಶ್ನೆ ಮಾಡಬೇಕು, ಹಣವನ್ನು ಸೀಜ್ ಮಾಡಬೇಕು, ಚುನಾವಣೆ ಸಂದರ್ಭದಲ್ಲಿ ಹಣ ಹಂಚಿಕೆ ಅಪರಾಧ, ಹಣ ಹಂಚಿಕೆ ಎಲ್ಲೇ ಮಾಡಿದರು ಹಿಡಿದು ಪೊಲೀಸರ ಗಮನಕ್ಕೆ ತರಬೇಕು ಎಂದು ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕರೆ ನೀಡಿದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಬಂದಿರುವವರು ರಿಯಲ್ ಎಸ್ಟೇಟ್ ಉದ್ಯಮಿಗಳು, ಜೆಸಿಬಿ ಪಕ್ಷಗಳಿಂದ ಸ್ಪರ್ಧೆ ಮಾಡುವವರು ಸಾವಿರಾರು ಕೋಟಿ ರೂಪಾಯಿಗಳ ಒಡೆಯರು, ಈ ಬಾರಿ ನಮ್ಮ ವೋಟುಗಳನ್ನು ಕೊಳ್ಳುವುದಕ್ಕೆ ನಾವು ಬಿಡಬಾರದು, ಆದ್ದರಿಂದ ನಿಮ್ಮ ಮುಂದಿನ ಪೀಳಿಗೆಗಳ ಏಳಿಗೆಗಾಗಿ ನಮ್ಮ ಕೆ.ಆರ್.ಎಸ್ ಪಕ್ಷವನ್ನು ಬೆಂಬಲಿಸಿ ಎಂದರು.
ಈ ವೇಳೆ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಕೆಆರ್ ಎಸ್ ಪಕ್ಷದ ಅಭ್ಯರ್ಥಿ ಶಿವಶಂಕರ್ ಸೇರಿದಂತೆ ಕಾರ್ಯಕರ್ತರು ಇದ್ದರು.