ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರ ಮೃತದೇಹ ಬೆಂಗಳೂರಿಗೆ ರವಾನೆ

ಇಂದು ಮುಂಜಾನೆ ಸುಮಾರು 3:30ಕ್ಕೆ ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹವನ್ನು ಬೆಂಗಳೂರು ವಿಮಾನ‌ನಿಲ್ದಾಣಕ್ಕೆ ತರಲಾಯಿತು.

ಮೃತರ ಕುಟುಂಬಸ್ಥರ ಜೊತೆ ಕೇಂದ್ರ ಸಚವ ವಿ.ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆಯಿದ್ದು, ಧೈರ್ಯ ತುಂಬಿದರು.

ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟಿರುವ ಇಬ್ಬರು ಕನ್ನಡಿಗರ ಮೃತದೇಹವನ್ನು ಕಾಶ್ಮೀರದಿಂದ ದಿಲ್ಲಿ, ಮುಂಬಾಯಿ ಮಾರ್ಗವಾಗಿ ಬೆಂಗಳೂರಿಗೆ ವಿಮಾನದ ಮೂಲಕ ತರಲಾಗಿದೆ. ಇಲ್ಲಿಂದ ಆಂಬುಲೆನ್ಸ್ ಮೂಲಕ ಮಂಜುನಾಥ್‌ರವರ ಪಾರ್ಥೀವ ಶರೀರವನ್ನು ಶಿವಮೊಗ್ಗ, ಭರತ್ ಭೂಷಣ್ ಮೃತದೇಹವನ್ನು ಬೆಂಗಳೂರಿನ ಮತ್ತಿಕೆರೆ ಹಾಗೂ ಮಧುಸೂದನ್ ರವರ ಪಾರ್ಥೀವ ಶರೀರವನ್ನು ಚೆನ್ನೈ ಮೂಲಕ ನೆಲ್ಲೋರಿಗೆ ಕಳುಹಿಸಿ ಕೊಡಲು ವ್ಯವಸ್ಥೆ ಮಾಡಲಾಗಿದೆ.

 

ಶಿವಮೊಗ್ಗಕ್ಕೆ ಮಂಜುನಾಥ್ ಮೃತದೇಹ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುಂಜಾನೆ ಬಂದ ಮಂಜುನಾಥ್ ಮೃತದೇಹವನ್ನು ಅವರ ಕುಟುಂಬಸ್ಥರ ಜೊತೆ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಕಳಿಸಿಕೊಡಲಾಯಿತು. ಬೆಳಗ್ಗೆ 9 ಗಂಟೆಯ ಸುಮಾರಿಗೆ ತಲುಪುವ ನಿರೀಕ್ಷೆಯಿದೆ.. ಮಧ್ಯಾಹ್ನ 12.30ರವರೆಗೆ ಮನೆ ಬಳಿ ಅಂತಿಮ ವಿಧಿವಿಧಾನ ಮತ್ತು ಸಾರ್ವಜನಿಕ ದರ್ಶನ ಇರಲಿದೆ. ಆ ಬಳಿಕ ನಗರದಲ್ಲಿ ಮೆರವಣಿಗೆ ನಡೆಯಲಿದೆ. ಸಾಗರ ರಸ್ತೆ, ಐಬಿ ಸರ್ಕಲ್‌, ಕುವೆಂಪು ರಸ್ತೆ, ಜೈಲ್‌ ವೃತ್ತ, ನೆಹರು ರಸ್ತೆ, ಬಿ.ಎಚ್‌.ರಸ್ತೆ, ಶಂಕರಮಠ ಸರ್ಕಲ್‌ನಿಂದ ರೋಟರಿ ಚಿತಾಗಾರಕ್ಕೆ ತಲುಪಲಿದೆ. ಮಂಜನಾಥ್‌ ರಾವ್‌ ಅವರ ಅಂತ್ಯಸಂಸ್ಕಾರ ಮತ್ತು ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಅರ್ಧ ದಿನ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗುತ್ತದೆ.

ಅದೇರೀತಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 40ಕ್ಕೂ ಅಧಿಕ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕರ್ನಾಟಕ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ.

Leave a Reply

Your email address will not be published. Required fields are marked *