ಈ ವೃದ್ಧೆ ಸಾಮಾನ್ಯ ಅಜ್ಜಿಯಲ್ಲ: ವಯಸ್ಸು 73 ಆದರೂ… ಪ್ರೊಫೆಷನಲ್ ಡ್ರೈವರ್‌ಗಳಂತೆ ವಿವಿಧ ಬಗೆಯ ವಾಹನಗಳ ಡ್ರೈವ್ ಮಾಡುವ ಚಾಣಾಕ್ಷೆ: ಇಷ್ಟಕ್ಕೂ‌ ಯಾರು ಆ ಅಜ್ಜಿ..? ಇಲ್ಲಿದೆ ಮಾಹಿತಿ..

ಇತ್ತೀಚೆಗೆ ಕೇರಳದ ಅಜ್ಜಿಯೊಬ್ಬರು ಸ್ಪೋರ್ಟ್ಸ್ ಕಾರನ್ನು ಲೀಲಾಜಾಲವಾಗಿ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಸ್ಪೋರ್ಟ್ಸ್ ಕಾರು ಓಡಿಸುತ್ತಾ ಕಾಣಿಸಿಕೊಂಡಿರುವ ಅಜ್ಜಿಯ ಹೆಸರು ರಾಧಾಮಣಿ. ವಯಸ್ಸು 73 ಆದರೂ ಪ್ರೊಫೆಷನಲ್ ಡ್ರೈವರ್‌ಗಳಂತೆ ಕಾರುಗಳನ್ನು ಓಡಿಸುವ ಚಾಕಚಕ್ಯತೆಯನ್ನ ಹೊಂದಿದ್ದಾರೆ.

ರಾಧಾಮಣಿ ಅವರು ಡ್ರೈವರ್ ಸೀಟಿನಲ್ಲಿ ಕುಳಿತು ಕಾರನ್ನು ಓಡಿಸುತ್ತರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಸಾಮಾನ್ಯ ದೃಶ್ಯವಾಗಿದ್ದರೂ, ರಾಧಾಮಣಿ ಅವರ ವಯಸ್ಸು ಸುಮಾರು 73 ವರ್ಷ ಮತ್ತು ಭಾರತದಲ್ಲಿ ಇಷ್ಟು ವಯಸ್ಸಿನ ಜನರು, ವಿಶೇಷವಾಗಿ ಮಹಿಳೆಯರು ಕಾರುಗಳನ್ನು ಓಡಿಸುವುದನ್ನು ನಾವು ತೀರಾ ವಿರಳವಾಗಿ ನೋಡುತ್ತೇವೆ. ಸದ್ಯ ಯಾವುದೇ ಸಮಸ್ಯೆಗಳಿಲ್ಲದೆ ಆತ್ಮವಿಶ್ವಾಸದಿಂದ Z4 ಕಾರನ್ನು ಈ ವೃದ್ದೆ ಚಾಲನೆ ಮಾಡಿ ವೈರಲ್ ಆಗಿದ್ದಾರೆ.

ರಾಧಾಮಣಿ ಕೇರಳದ ಕೊಚ್ಚಿಯಲ್ಲಿರುವ A2Z ಡ್ರೈವಿಂಗ್ ಸ್ಕೂಲ್‌ನ ಮಾಲೀಕರಾಗಿದ್ದಾರೆ. ಡ್ರೈವಿಂಗ್ ಸ್ಕೂಲ್ ನ್ನು 1970 ರಲ್ಲಿ ಅವರ ಪತಿ ಸ್ಥಾಪಿಸಿದ್ದರು. ರಾಧಾಮಣಿ ಅವರು 30 ವರ್ಷದವರಾಗಿದ್ದಾಗ ಮೊದಲು ಕಾರು ಓಡಿಸುವುದನ್ನು ಕಲಿತರು. ಆಕೆಯ ಪತಿಯೇ ಡ್ರೈವಿಂಗ್ ಕಲಿಯಲು ಒತ್ತಾಯಿಸಿದ್ದರಂತೆ. ಪ್ರಸ್ತುತ 11 ವಿವಿಧ ವರ್ಗಗಳ ವಾಹನಗಳನ್ನು ಓಡಿಸಲು ಪರವಾನಗಿಗಳನ್ನು ಹೊಂದಿದ್ದಾರೆ.

ವಿವಿಧ ಬಗೆಯ ಕಾರುಗಳು, ಅಗೆಯುವ ಯಂತ್ರ, ಫೋರ್ಕ್‌ಲಿಫ್ಟ್, ಕ್ರೇನ್, ರೋಡ್ ರೋಲರ್, ಟ್ರಾಕ್ಟರ್, ಕಂಟೈನರ್ ಟ್ರೈಲರ್ ಟ್ರಕ್, ಬಸ್, ಲಾರಿ ಮತ್ತು ಇತ್ತೀಚಿನ ವಾಹನಗಳನ್ನು ಓಡಿಸಲು ಅಜ್ಜಿ ಪರವಾನಗಿಯನ್ನು ಹೊಂದಿದ್ದಾರೆ. ಕೇರಳದಲ್ಲಿ ಭಾರೀ ವಾಹನ ಪರವಾನಗಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ರಾಧಾಮಣಿ ಪಾತ್ರರಾಗಿದ್ದಾರೆ. 2021 ರಲ್ಲಿ ಅವರು ಅಪಾಯಕಾರಿ ಸರಕುಗಳನ್ನು ಸಾಗಿಸಲು ಕೂಡ ಪರವಾನಗಿ ಪಡೆದಿದ್ದಾರೆ.

ಅವರು 1988 ರಲ್ಲಿ ಬಸ್ ಮತ್ತು ಲಾರಿ ಎರಡಕ್ಕೂ ಮೊದಲ ಪರವಾನಗಿ ಪಡೆದರು. ಈ ಪರವಾನಗಿಗಳನ್ನು ಪಡೆಯಲು ಕಾರಣ ಅವರು 2004 ರಲ್ಲಿ ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ನಂತರ ಡ್ರೈವಿಂಗ್ ಸ್ಕೂಲ್ ವ್ಯವಹಾರವನ್ನು ಸ್ವತಃ ನಡೆಸಬೇಕಾಗಿತ್ತು. ಡ್ರೈವಿಂಗ್ ಸ್ಕೂಲ್ ನಡೆಸಲು, ಮಾಲೀಕರು ಅಥವಾ ಬೋಧಕರು ಅವರು ಕಲಿಸುವ ವಾಹನಗಳಿಗೆ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ.

ಒಂದು ಕುತೂಹಲಕಾರಿ ಸಂಗತಿಯೆಂದರೆ, ರಾಧಾಮಣಿ ಅವರು ಈ ಎಲ್ಲಾ ಭಾರೀ ವಾಹನಗಳು ಮತ್ತು ಕಾರುಗಳನ್ನು ಓಡಿಸಲು ಪರವಾನಗಿ ಹೊಂದಿದ್ದರೂ, ಆಕೆಯ ಅತ್ಯಂತ ನೆಚ್ಚಿನ ವಾಹನವೆಂದರೆ ದ್ವಿಚಕ್ರ ವಾಹನ. ಅವರು 1993 ರಲ್ಲಿ ತಮ್ಮ ದ್ವಿಚಕ್ರ ವಾಹನ ಪರವಾನಗಿಯನ್ನು ಪಡೆದರು. ಅವರ ಪತಿ ತನಗಾಗಿ ಸ್ಕೂಟರ್ ಕೊಡಿಸಿದ್ದರು. ಅಂದಿನಿಂದ ತನ್ನ ಸ್ಕೂಟರ್‌ನಲ್ಲೇ ಓಡಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *