ಈ ಬಾರಿ ಬಲಗೈ ಸಮುದಾಯವು ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಅವರನ್ನು ಬೆಂಬಲಿಸಬೇಕೆಂದು ಮನವಿ

ಕೋಲಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಳ ಬಲಗೈ ಸಮುದಾಯವನ್ನು ಕಾಂಗ್ರೆಸ್ ಪಕ್ಷವು ರಾಜಕೀಯಕ್ಕೆ ಮಾತ್ರ ಬಳಸಿಕೊಂಡು ನಿರಂತರವಾಗಿ ವಂಚನೆ ಮಾಡಿಕೊಂಡು ಬಂದಿದ್ದು, ಈ ಬಾರಿ ಬಲಗೈ ಸಮುದಾಯವು ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಅವರನ್ನು ಬೆಂಬಲಿಸಬೇಕೆಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಜಿಪಂ ಸದಸ್ಯ ಬಾಲಾಜಿ ಚನ್ನಯ್ಯ ಮನವಿ ಮಾಡಿದರು

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ-ಜೆಡಿಎಸ್ ಪಕ್ಷಗಳು ಬಲಗೈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಆದರೆ ಕಾಂಗ್ರೆಸ್ ಸಮಾಜದಲ್ಲಿ ಜಾತಿ ರಾಜಕಾರಣವನ್ನು ಹುಟ್ಟಿ ಹಾಕಿ ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ಒಡಕು ಉಂಟು ಮಾಡಿದೆ ಎಂದು ದೂರಿದರು.

ಜೆಡಿಎಸ್ ಪಕ್ಷವು ಮುಳಬಾಗಿಲು ಕ್ಷೇತ್ರದಲ್ಲಿ ಸಮೃದ್ಧಿ ಮಂಜುನಾಥ್, ಬಿಜೆಪಿ ಕೆಜಿಎಫ್‌ನಿಂದ ವೈ.ಸಂಪಂಗಿ, ವೈ.ರಾಮಕ್ಕ, ಹಿಂದಿನ ಚುನಾವಣೆಯಲ್ಲಿ ದಳದಿಂದ ಬಾಲಾಜಿ ಚನ್ನಯ್ಯ, ಬಿಜೆಪಿಯಿಂದ ಡಿ.ಎಸ್.ವೀರಯ್ಯ ಹೀಗೆ ಅನೇಕ ಮಂದಿಗೆ ಟಿಕೆಟ್ ನೀಡಿತ್ತು ಎಂದು ಮಾಹಿತಿ ನೀಡಿದರು.

ಸುಮಾರು ೧೯೫೨ರಿಂದಲೂ ಕಾಂಗ್ರೆಸ್ ಎಡಗೈ ಸಮುದಾಯಕ್ಕೆ ನೀಡಿದ ಪ್ರಾತಿಧ್ಯ ಬಲಗೈ ಸಮುದಾಯಕ್ಕೆ ನೀಡಿಲ್ಲ. ೪ ಲಕ್ಷಕ್ಕೂ ಹೆಚ್ಚು ಮತದಾರರು ಇರುವ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಇದು ಕೆ.ಎಚ್.ಮುನಿಯಪ್ಪ ಅವರನ್ನು ರಾಜಕೀಯದಿಂದ ಮುಗಿಸಲು ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಆಡಿದ ನಾಟಕ ಎಂಬುದು ಸಮುದಾಯಕ್ಕೆ ಮನವರಿಕೆಯಾಗಿದ್ದು, ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಬಲಗೈ ಸಮುದಾಯಕ್ಕೆ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಹೈಕಮಾಂಡ್‌ಗೆ ಬೆದರಿಕೆ ಹಾಕಿದರು. ಆಂಧ್ರದಿಂದ ಬೆಂಗಳೂರಿಗೆ ವಲಸೆ ಬಂದಿರುವ ಗೌತಮ್ ಅವರಿಗೆ ಟಿಕೆಟ್ ನೀಡಿದ್ದು, ಈಗ್ಯಾಕೆ ರಾಜೀನಾಮೆ ನೀಡಲಿಲ್ಲ, ಇದೆಲ್ಲ ನಾಟಕವಷ್ಟೇನಾ ಎಂದು ಪ್ರಶ್ನಿಸಿದರು.

ಈ ಚುನಾವಣೆಯಲ್ಲಿ ಸಮುದಾಯದವರು ಎಚ್ಚೆತ್ತುಕೊಂಡಿದ್ದು ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಇತರರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಲ್ಲೇಶ್ ಬಾಬು ಅವರಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಮುದುವಾಡಿ ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಹೊರಗಿನವರಾಗಿದ್ದು, ಪ್ರತಿ ಬಾರಿಯೂ ಹೊರಗಿನವರಿಗೆ ಅವಕಾಶ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಅಸಾಧ್ಯವಾಗುತ್ತದೆ. ಹೀಗಾಗಿ ಸ್ಥಳೀಯ ಅಭ್ಯರ್ಥಿ ಮಲ್ಲೇಶ್‌ಬಾಬು ಅವರನ್ನು ಬೆಂಬಲಿಸಲು ಬಲಗೈ ಸಮುದಾಯ ಒಗ್ಗಟ್ಟಾಗಿದ್ದು, ಎರಡು ಬಾರಿ ಸೋತಿರುವ ಹಿನ್ನೆಲೆಯಲ್ಲಿ ಸಿಂಪತಿಯೂ ಇದೆ. ಗೆಲುವು ಸಾಧಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಲಕ್ಷ್ಮೀಸಾಗರ ಸುನಿಲ್ ಕುಮಾರ್, ಜಿಲ್ಲಾ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಜಯಚಂದ್ರ, ಯಲುವಗುಳಿ ನಾಗರಾಜ್, ಹೂಹಳ್ಳಿ ನಾರಾಯಣಸ್ವಾಮಿ ಇದ್ದರು.

Leave a Reply

Your email address will not be published. Required fields are marked *