ಇಬ್ಬರು ಯುವಕರ ಹತ್ಯೆ ಪ್ರಕರಣ; ಚಾಕು ಇರಿತ ಆರೋಪಿಗಳ ಬಂಧನ

ದೊಡ್ಡಬೆಳವಂಗಲ ಚಾಕು ಇರಿತ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವಿನಯ್ ಹಾಗೂ ತ್ರಿಮೂರ್ತಿ ಎಂಬುವವರ ಮೇಲೆ ಗುಂಡುಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಡಿ.ಕ್ರಾಸ್ ಸಮೀಪದ ಪ್ಲೈ ಓವರ್ ನ ರೈಲ್ವೆ ಗೇಟ್ ಬಳಿ ಆರೋಪಿಗಳು ಇರುವ ಖಚಿತ ಮಾಹಿತಿ ಮೇರೆಗೆ ಬಂಧಿಸುವ ಸಲುವಾಗಿ ಸಿಬ್ಬಂದಿಗಳೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಹರೀಶ್ ಕುಮಾರ್ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಇನ್ ಸ್ಪೆಕ್ಟರ್ ಹರೀಶ್ ತೆರಳಿದ್ದರು.

ಆರೋಪಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಪೊಲೀಸ್ ಸಿಬ್ಬಂದಿ ಕರಾ‌ರ್ ಹುಸೇನ್, ಸುನೀಲ್ ಬಾಸಗಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಗಳ ಕಾಲಿಗೆ ಗುಂಡು ಹಾರಿಸುವ ಮೂಲಕ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ.

ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಬಸ್ ನಿಲ್ದಾಣದ ಬಳಿ ಶುಕ್ರವಾರ ಭರತ್ ಕುಮಾರ್ (23), ಪ್ರತೀಕ್ (17) ಎಂಬ ಯುವಕರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳಾಗಿರುವ ಐದು ಜನರ ಪೈಕಿ ಅನಿಲ್ , ಕೋರಿ, ದೀಪು ಸೇರಿದಂತೆ ಇತರರು ಇನ್ನು ತಲೆಮರೆಸಿಕೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಅಮಾಯಕ ಯುವಕರ ಹತ್ಯೆ ನಡೆದ ಸ್ಥಳಕ್ಕೆ ಫೆ.18ರಂದು ಸಚಿವ ಎಂಟಿಬಿ ನಾಗರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮೃತ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಿ, ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಬಂಧಿಸಲಾಯಿತು.

Leave a Reply

Your email address will not be published. Required fields are marked *