ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಂಧ್ರಪ್ರದೇಶ ಮೂಲದ ತನ್ನ ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಗುಹೆಯಲ್ಲಿ ಸುಟ್ಟುಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಯೊಬ್ಬನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪಾತಪಾಳ್ಯ ಠಾಣಾ ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. ಇನ್ನೊಬ್ಬ ಆರೋಪಿ ಪೊಲೀಸರ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದನು, ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಸತ್ಯ ಸಾಯಿ ಜಿಲ್ಲಾ ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವೆಂಕಟರಮಣನ ಸ್ನೇಹಿತರಾದ ಸ್ವಗ್ರಾಮದ ಬಾಬು ಮತ್ತು ಪ್ರಭಾಕರ್ ಮೇಲೆ ಅನುಮಾನ ಬಂದಿತ್ತು. ಮೃತನ ಸ್ನೇಹಿತ ಬಾಬುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ವೆಂಕಟರಮಣನನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ನಿರ್ಜನ ಪ್ರದೇಶದಲ್ಲಿ ಕೊಂದು ಶವ ಸುಟ್ಟು ಹಾಕಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಈ ಬಗ್ಗೆ ಪೊಲೀಸರು ಕರ್ನಾಟಕದ ಪಾತಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಬುನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸುತ್ತಿರುವ ವಿಚಾರ ತಿಳಿದ ಮತ್ತೊಬ್ಬ ಆರೋಪಿ ಪ್ರಭಾಕರ್ ಪೊಲೀಸರ ತನಿಖೆಗೆ ಹೆದರಿ ಸ್ವಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೆಂಕಟರಮಣ ನಾಯ್ಕ ಕೊಲೆಗೆ ಕಾರಣ?
ವೆಂಕಟರಮಣ ನಾಯ್ಕ, ಬಾಬು, ಪ್ರಭಾಕರ್ ಮೂವರು ಸ್ನೇಹಿರಾಗಿದ್ದರು. ಬಾಬು ಹಾಗೂ ವೆಂಕಟರಮಣ ನಾಯ್ಕ ಮಧ್ಯೆ ಜಮೀನು ವಿವಾದ ಇತ್ತು. ಈ ವಿಚಾರವಾಗಿ ವೆಂಕಟರಮಣ ನಾಯ್ಕ್ ಪದೇಪದೆ ಕ್ಯಾತೆ ತೆಗೆಯುತ್ತಿದ್ದನಂತೆ. ಇದರಿಂದ ಕುಪಿತನಾದ ಬಾಬು ವೆಂಕಟರಮಣನನ್ನು ಗಡಿನಾಡು ವಂಡಮಾನ್ ಬಳಿ ಕರೆತಂದು ಮದ್ಯಪಾನ ಮಾಡಿಸಿದ್ದಾರೆ. ನಂತರ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಆರೋಪಿ ಬಾಬು ಪೊಲೀಸರು ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ಸ್ಥಳ ಕರ್ನಾಟಕ ರಾಜ್ಯಕ್ಕೆ ಸೇರಿರುವ ಕಾರಣ, ಆಂಧ್ರ ಪೊಲೀಸರು ಕೊಲೆ ಪ್ರಕರಣವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸರಿಗೆ ವರ್ಗಾವಣೆ ಮಾಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ