ಇದು ಬಸ್ಟಾಂಡೋ ಅಥವಾ ಕೊಚ್ಚೆ ಗುಂಡಿಯೋ….?: ಟಿ.ಬಿ ವೃತ್ತದ ಚಿಕ್ಕಬಳ್ಳಾಪುರ ಬಸ್ ಸ್ಟಾಂಡ್ ಅವ್ಯವಸ್ಥೆ: ಪ್ರಯಾಣಕರ ಪರದಾಟ

ಇದನ್ನ ಯಾರಾದ್ರು ಬಸ್ ಸ್ಟಾಂಡ್ ಅಂತಾರಾ…? ಈಗೋ ಆಗೋ ಬಿದ್ದೋಗುವ ಸ್ಥಿತಿಯಲ್ಲಿರುವ ಹಳೇ ಕಾಲದ ಹಂದಿ ಗೂಡಿನಂತಿರುವ ತಂಗುದಾಣ, ತಂಗುದಾಣದ ತುಂಬಾ ಮಳೆ ನೀರು ತುಂಬಿ ರಚ್ಚೋ ರಚ್ಚೋ, ಹೆಜ್ಜೆ ಇಡಲು ಜಾಗವಿಲ್ಲ. ಬಸ್ ಬಂದರೆ ವಿಧಿ ಇಲ್ಲದೇ ಇದೇ ಕೊಚ್ಚೆಯಲ್ಲಿ ಕಾಲಿಟ್ಟು ಬಸ್ ಹತ್ತಬೇಕು. ಈ ಎಲ್ಲಾ ಸಮಸ್ಯೆ ಇರೋದು ಎಲ್ಲಿ ಅಂತೀರಾ ಡಾ.ಬಿ.ಆರ್ ಅಂಬೇಡ್ಕರ್ (ಟಿ.ಬಿ ಸರ್ಕಲ್)ವೃತ್ತದಲ್ಲಿರುವ  ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ…..

ಯೆಸ್, ಬಿ.ವೃತ್ತದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ  ತಂಗುದಾಣ ಇದ್ದರೂ ಪ್ರಯಾಣಿಕರು ಬಳಸುವಂತೆ ಇಲ್ಲ. ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ, ನಂದಿ ಬೆಟ್ಟ, ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಲು ನೂರಾರು ಪ್ರಯಾಣಿಕರು ಇದೇ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಹೋಗುತ್ತಾರೆ. ಬಂದು ಇಲ್ಲಿ ಇಳಿಯುತ್ತಾರೆ. ಆದರೆ, ಈ ಬಸ್ ಸ್ಟಾಂಡ್ ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸುಸಜ್ಜಿತ ತಂಗುದಾಣವಿಲ್ಲ. ವೃದ್ಧರು, ಮಹಿಳೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಇತರೆ ಪ್ರಯಾಣಿಕರು ಮಳೆ, ಗಾಳಿ, ಬಿಸಿಲನಲ್ಲಿ ನೊಂದು, ಬೆಂದು, ತೋಯ್ದು ಬಸ್ ಹತ್ತಿ ಮನೆಗಳಿಗೆ ತೆರಳುತ್ತಾರೆ.

ಮಳೆ ಬಂದರೆ ಸಾಕು ತಂಗುದಾಣದಲ್ಲಿ ನೀರು ತುಂಬಿಕೊಂಡು ಕೊಚ್ಚೆ ಗುಂಡಿಯಂತಾಗುತ್ತದೆ. ಕುಳಿತುಕೊಳ್ಳಲು, ನಿಂತುಕೊಳ್ಳಲು ಆಗುವುದಿಲ್ಲ. ಆಸನ ವ್ಯವಸ್ಥೆ ಈ ಮೊದಲು ಇತ್ತು, ಆದರೆ, ಕಿಡಿಗೇಡಿಗಳು ಆ ಆಸನದ ಕಲ್ಲುಗಳನ್ನು ಒಡೆದು ಹಾಕಿದ್ದಾರೆ.

ದಿನೇ ದಿನೇ ತನ್ನ ಎಲ್ಲೆ ವಿಸ್ತರಿಸಿಕೊಂಡು ರಾಜ್ಯ ರಾಜಧಾನಿಗೆ ದೊಡ್ಡಬಳ್ಳಾಪುರ ನಗರ ಹತ್ತಿರವಾಗುತ್ತಿದೆ. ಏಷ್ಯಾದ ಎರಡನೇ‌ ಅತಿ‌ ದೊಡ್ಡ ಕೈಗಾರಿಕಾ ಪ್ರದೇಶ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಂದಾಗಿ ಲಕ್ಷಾಂತರ ಜನರನ್ನು ಈ‌ ನಗರವು ಆಕರ್ಷಿಸುತ್ತಿದೆ.

ದೀಪದ ಬುಡದಲ್ಲಿ ಕತ್ತಲು ಎಂಬಂತೆ ರಾಜಧಾನಿಗೆ ಕೂಗಳತೆ ದೂರದಲ್ಲೇ ಇದ್ದರೂ ಅಭಿವೃದ್ಧಿ ಹಾಗೂ ಮೂಲಭೂತ‌ ಸೌಕರ್ಯ ಕೊರತೆಯಿಂದಾಗಿ ಸೊರಗುತ್ತಿದೆ.

ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ, ದಾಬಸ್ ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ ನಗರ ಭಾಗದಲ್ಲಿ ಎಲ್ಲಿಯೂ ಪ್ರಯಾಣಿಕರಿಗೆ ತಂಗುದಾಣ ಇಲ್ಲದಂತಾಗಿದೆ. ಇದ್ದರೂ ಅದು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿವೆ.

ನಗರದಿಂದ ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಿಂದೂಪುರ ಮಾರ್ಗವಾಗಿ ನಿತ್ಯ ನೂರಾರು ರಾಜ್ಯ ಹಾಗೂ ಅಂತಾರಾಜ್ಯ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಅದೇ ರೀತಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚುತ್ತಿದೆ. ಆದರೆ, ಪ್ರಯಾಣಿಕರು ಬಿಸಿಲು-ಮಳೆಗೆ ಮೈಯೊಡ್ಡಿ ಬಸ್ಸಿಗಾಗಿ ಕಾದು ಕಾದು ನಿತ್ರಾಣರಾಗುವ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ನಿಲ್ದಾಣ, ಟಿ.ಬಿ.ವೃತ್ತದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ  ತಂಗುದಾಣ ಇದ್ದರೂ ಪ್ರಯಾಣಿಕರು ಬಳಸುವಂತೆ ಇಲ್ಲ.

ನಗರದಲದಲಿರುವ ತಾಲೂಕು ಕಚೇರಿ, ಆಸ್ಪತ್ರೆ, ಬ್ಯಾಂಕ್, ಕೋರ್ಟ್, ಶಾಲಾ- ಕಾಲೇಜು, ಉಪವಿಭಾಗಾಧಿಕಾರಿ ಕಚೇರಿ, ಕಾರ್ಖಾನೆ ಕೆಲಸಗಳಿಗೆ ಬಂದು ಹೋಗುವ ಪ್ರಯಾಣಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ನರಕಯಾತನೆ ಅನುಭವಿಸಬೇಕಾಗಿದೆ.

ಬಸ್ಸಿಗಾಗಿ ಕಾಯುವ ಪ್ರಯಾಣಿಕರಲ್ಲಿ ಅಂಗವಿಕಲರು, ಮಕ್ಕಳು, ವೃದ್ಧರು, ಮಹಿಳೆಯರು, ರೋಗಿಗಳು‌, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬಿಸಿಲಲ್ಲೇ ನಿಲ್ಲಬೇಕಾಗಿದೆ.

ನಗರದಲ್ಲಿ ತಂಗುದಾಣ ಇಲ್ಲದೇ ಇರುವ ಕಾರಣ ಕೆಲ ಬಸ್ ಗಳು ನಿಲುಗಡೆ ಮಾಡದೇ ಹೋರಟು ಹೋಗುತ್ತವೆ. ಆಗ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ಕುಳಿತ ಪ್ರಯಾಣಿಕರು ಮತ್ತೆ ರಸ್ತೆಯಲ್ಲೇ ಇನ್ನಷ್ಟು ಸಮಯ ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಯಾಣಿಕರು ರಸ್ತೆಯಲ್ಲೇ ಬಸ್ಸಿಗೆ ನಿಲ್ಲುತ್ತಿರುವುದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿವೆ.

ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ.ಖರ್ಚು ಮಾಡುವ ಜನಪ್ರತಿನಿಧಿಗಳು, ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳಿಗೆ ತಂಗುದಾಣ ನಿರ್ಮಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದಿರುವುದು ದೊಡ್ಡಬಳ್ಳಾಪುರದ ಜನರ ದೌರ್ಭಾಗ್ಯವೇ ಸರಿ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಸೂಕ್ತ ಹಾಗೂ ಪ್ರಯಾಣಿಕ ಸ್ನೇಹಿ ತಂಗುದಾಣ ನಿರ್ಮಿಸಬೇಕೆಂಬುದು ಜನರ ಒಕ್ಕೊರಲ ಆಗ್ರಹವಾಗಿದೆ.

Ramesh Babu

Journalist

Recent Posts

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

11 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

17 hours ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

21 hours ago

ಪೆನ್ ಡ್ರೈವ್…….

ಪೆನ್ ಡ್ರೈವ್....... ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ...... ಬರಗಾಲ -…

22 hours ago

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

1 day ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

2 days ago