ಇದು ಡಿ.ಕೆ. ಶಿವಕುಮಾರ್ ಸರ್ಕಾರವಲ್ಲ, ಜನರ ಸರ್ಕಾರ, ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಸರ್ಕಾರ- ಸಿಎಂ ಡಿಕೆಶಿ

ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕಾಗಿ ಮಾತ್ರ ಹೋರಾಟ ನಡೆಸಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದೊಂದಿಗೆ ಬದುಕಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿದ ಮಹಾನ್ ನಾಯಕರು. ಆದ್ದರಿಂದ ಅವರನ್ನು ಯಾವುದೇ ಒಂದು ವರ್ಗದ ನಾಯಕರಾಗಿ ಸೀಮಿತಗೊಳಿಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ₹1.35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 14 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅನಾವರಣಗೊಳಿಸಿದ ಬಳಿಕ ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಸಮೀಪ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರ ಚಿಂತನೆ ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಪ್ರತೀಕವಾಗಿದೆ. ಸಂವಿಧಾನ ಇರದಿದ್ದರೆ ಸಾಮಾನ್ಯ ಜನರು ಶಾಸಕರು, ಸಚಿವರು ಅಥವಾ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಪೀಠಿಕೆಯನ್ನು ಜನರಿಗೆ ಪರಿಚಯಿಸುವ ಅಭಿಯಾನ ಕೈಗೊಂಡಿದ್ದು, ಇಂತಹ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದಲ್ಲೇ ಸಾಧ್ಯವಾಗುತ್ತವೆ ಎಂದರು.

ರಾಜ್ಯದ ಜನತೆ 136 ಸ್ಥಾನಗಳನ್ನು ನೀಡಿ ಆಡಳಿತ ನಡೆಸುವ ಅವಕಾಶ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿ ಜನಪರ ಆಡಳಿತ ನೀಡಲಾಗಿದೆ. ಇದೇ ರೀತಿಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಮುಂದುವರಿಯಲಿದ್ದು, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಜನರ ಆಶೀರ್ವಾದ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಆರನೇ ಗ್ಯಾರಂಟಿಯಂತೆ ಜನರು ದುಡಿದು ಸಂಪಾದಿಸಿದ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದ ಖಾತೆ ಹಾಗೂ ಪೋಡಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಹೊಸ ಯೋಜನೆ ರೂಪಿಸಲಾಗುತ್ತಿದ್ದು, ಕರಾವಳಿ ಭಾಗದಿಂದ ನೀರು ಪೂರೈಸುವ ಯೋಜನೆಯೂ ಜಾರಿಯಲ್ಲಿದೆ ಎಂದರು.

ಕೆಂಪೇಗೌಡ ಜಯಂತಿಯ ಅಂಗವಾಗಿ ‘ತ್ಯಾಗದ ಗೋಡೆ’ ನಿರ್ಮಿಸಲಾಗಿದ್ದು, ಸಾರ್ವಜನಿಕ ಅಭಿವೃದ್ಧಿಗಾಗಿ ಜಮೀನು ನೀಡಿದವರ ಹೆಸರನ್ನು ಶಾಶ್ವತವಾಗಿ ದಾಖಲಿಸುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ದೇವನಹಳ್ಳಿ ಹಾಗೂ ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಸಂಬಂಧ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು, ದೇವನಹಳ್ಳಿ ಭಾಗದ ಬೌದ್ಧ ಪುರಾತತ್ವ ತಾಣಗಳ ಅಭಿವೃದ್ಧಿಗೆ ಸಮಿತಿ ರಚಿಸಿ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
“ಇದು ಡಿ.ಕೆ. ಶಿವಕುಮಾರ್ ಸರ್ಕಾರವಲ್ಲ, ಜನರ ಸರ್ಕಾರ. ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಸರ್ಕಾರ” ಎಂದು ಮುಖ್ಯಮಂತ್ರಿ ಹೇಳಿದರು.

ಭುವನ ಸಾವು ಪ್ರಕರಣ ಪರಿಶೀಲನೆ

ತುಮಕೂರಿನ ಭುವನ ಸಾವಿನ ಪ್ರಕರಣ ಹಾಗೂ ಜಿಲ್ಲಾಧಿಕಾರಿ ವಿರುದ್ಧದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರಕರಣ ತಮ್ಮ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕರಣದ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುವುದು. ಉಪಮುಖ್ಯಮಂತ್ರಿಗಳೂ ಪರಿಶೀಲನೆ ನಡೆಸಲಿದ್ದು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅಂಬೇಡ್ಕರ್ ಅವರ ತತ್ವ, ಆದರ್ಶ ಮತ್ತು ಸಂವಿಧಾನದ ಮೌಲ್ಯಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

ಅಂಬೇಡ್ಕರ್ ಪ್ರತಿಮೆ ಉದ್ಘಾಟಿಸುವ ಅವಕಾಶ ದೊರೆತಿರುವುದು ತಮ್ಮ ಭಾಗ್ಯ. ಡಾ. ಅಂಬೇಡ್ಕರ್ ಅವರು ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಮೂರು ವರ್ಷಗಳ ಪರಿಶ್ರಮದ ಬಳಿಕ ಭಾರತದ ಸಾಮಾನ್ಯ ಜನರು, ಬಡವರು, ಮಹಿಳೆಯರು ಹಾಗೂ ಶೋಷಿತ ವರ್ಗಗಳಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ಸಂವಿಧಾನವನ್ನು ರೂಪಿಸಿ ದೇಶಕ್ಕೆ ನೀಡಿದ್ದಾರೆ ಎಂದು ಹೇಳಿದರು.

ದೇಶದ ಭವಿಷ್ಯ ರೂಪಿಸಿದ ಮಹಾನ್ ವ್ಯಕ್ತಿಯಾಗಿರುವ ಅಂಬೇಡ್ಕರ್ ಅವರಿಗೆ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಹಕ್ಕುಗಳ ವಿಸ್ತರಣೆಯಲ್ಲಿ ಅಪಾರ ಕೊಡುಗೆ ಇದೆ ಎಂದು ಪ್ರಶಂಸಿಸಿದರು.

‘ಜೈ ಬಾಪು, ಜೈ ಹಿಂದ್, ಜೈ ಭೀಮ್, ಜೈ ಸಂವಿಧಾನ್’ ಎಂಬ ಘೋಷಣೆಯನ್ನು ಕಾಂಗ್ರೆಸ್ ಅಳವಡಿಸಿಕೊಂಡಿರುವುದನ್ನು ಉಲ್ಲೇಖಿಸಿದ ಖರ್ಗೆ, ಅಂಬೇಡ್ಕರ್ ಅವರ ಸೇವೆಯನ್ನು ಕೇವಲ ಜಯಂತಿ ಆಚರಣೆ ಅಥವಾ ಪುಷ್ಪಾರ್ಚನೆಗೆ ಸೀಮಿತಗೊಳಿಸದೆ, ಅವರ ತತ್ವಗಳನ್ನು ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.

ಸಾಮಾಜಿಕ ನ್ಯಾಯವಿಲ್ಲದೆ ರಾಜಕೀಯ ಅಧಿಕಾರಕ್ಕೆ ಅರ್ಥವಿಲ್ಲ, ಶಿಕ್ಷಣ, ಸಮಾನತೆ ಹಾಗೂ ಸಂಘಟನೆಯ ಮಾರ್ಗವನ್ನು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ ಎಂದರು.

ಈ ವೇಳೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಅಯೋಧ್ಯೆ, ಬೆಲೆ ಏರಿಕೆ, ನಿರುದ್ಯೋಗ, ಕೇಂದ್ರ ತನಿಖಾ ಸಂಸ್ಥೆಗಳ ಬಳಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಟೀಕಿಸಿದರು.

ಸಂಸತ್ತಿನಲ್ಲಿ ಸಮರ್ಪಕ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಕ್ಷೇತ್ರ ಮರುವಿಂಗಡಣೆ (ಡಿ-ಲಿಮಿಟೇಷನ್), ‘ಒನ್ ನೇಷನ್ ಒನ್ ಎಲೆಕ್ಷನ್’ ಸೇರಿದಂತೆ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಮಸೂದೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

ಬಡವರ ಕಲ್ಯಾಣ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ನ್ಯಾಯವೇ ಸರ್ಕಾರಗಳ ಪ್ರಮುಖ ಗುರಿಯಾಗಬೇಕು ಎಂದು ಖರ್ಗೆ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.

ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ವಿವಿಧ ಯೋಜನೆಗಳನ್ನು ಶೀಘ್ರ ಜಾರಿಗೊಳಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಸರ್ಕಾರಕ್ಕೆ ಮನವಿ ಮಾಡಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೌದ್ಧ ಜ್ಞಾನ ಮಂದಿರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ರಾಜಘಟ್ಟವನ್ನು ಬೌದ್ಧ ಪರಂಪರೆ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದರು.

ವಿಜಯಪುರ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ ಸಚಿವರು, ಕಾವೇರಿ ಕುಡಿಯುವ ನೀರಿನ ಯೋಜನೆಯ 6ನೇ ಹಂತದ ನೀರನ್ನು ದೇವನಹಳ್ಳಿ, ವಿಜಯಪುರ ಹಾಗೂ ಹೊಸಕೋಟೆ ಪ್ರದೇಶಗಳಿಗೆ ಪೂರೈಸುವಂತೆ ಸರ್ಕಾರವನ್ನು ಕೋರಿದರು.

ದೇವನಹಳ್ಳಿಗೆ ಮೆಟ್ರೋ ರೈಲು ಯೋಜನೆ ಈಗಾಗಲೇ ಘೋಷಣೆಯಾಗಿದ್ದು, ಅದರ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆಯಲು ದೇವನಹಳ್ಳಿಯಲ್ಲಿ 10 ಎಕರೆ ಜಮೀನು ಮಂಜೂರು ಮಾಡಿ ಕೋಚಿಂಗ್ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದರು.

ಇದೇ ವೇಳೆ, ರೈತರ ಆದಾಯ ಹೆಚ್ಚಿಸಲು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡುವ ಉದ್ದೇಶದಿಂದ ದೇವನಹಳ್ಳಿ ಭಾಗದಲ್ಲಿ ರೇಷ್ಮೆ ಹಾಗೂ ದ್ರಾಕ್ಷಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವಂತೆ ಸಚಿವ ಮುನಿಯಪ್ಪ ಸರ್ಕಾರವನ್ನು ಕೋರಿದರು.

ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಸಚಿವರು ಮನವಿ ಮಾಡಿದರು.

ಈ ವೇಳೆ ಇಂಧನ, ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್, ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ನೆಲಮಂಗಲ ಎನ್, ಶ್ರೀನಿವಾಸ್, ಎಂಎಲ್ ಸಿ ಎಸ್ ರವಿ, ಜಿಲ್ಲಾಧಿಕಾರಿ ಅನುರಾಧಾ, ಜಿ.ಪಂ ಸಿಇಒ ವಾಸಂತಿ ಅಮರ್, ಎಸ್ಪಿ ಚಂದ್ರಕಾಂತ್ ಸೇರಿದಂತೆ ಇತರರು ಇದ್ದರು.

Ramesh Babu

Journalist

Recent Posts

ಹೈನುಗಾರಿಕೆಗೆ ಅಜೋಲಾ ಆಸರೆ: ಹಸಿರು ಮೇವಿನ ಕೊರತೆಗೆ ಪರ್ಯಾಯ: ಹಾಲು ನೀಡುವ ರಾಸುಗಳಿಗೆ ಪೌಷ್ಟಿಕ ಪೂರಕ ಆಹಾರ

ಬೆಂಗಳೂರು ಗ್ರಾಮಾಂತರ: ಮಳೆಯ ಕೊರತೆ ಹಾಗೂ ಹಸಿರು ಮೇವಿನ ಅಭಾವದಿಂದ ಜಾನುವಾರು ಸಾಕಾಣಿಕೆದಾರರು ಎದುರಿಸುತ್ತಿರುವ ಸಂಕಷ್ಟಕ್ಕೆ ಪರ್ಯಾಯವಾಗಿ, ಜಾನುವಾರುಗಳಿಗೆ ಸ್ಥಳೀಯವಾಗಿಯೇ…

6 hours ago

ಸೆ. 28ಕ್ಕೆ ಅವತಿ ಬೆಟ್ಟದಲ್ಲಿ “ವಿಶ್ವ ಪ್ರವಾಸೋದ್ಯಮ ದಿನಾಚರಣೆ-2026″

ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ದೇವನಹಳ್ಳಿ ತಾಲ್ಲೂಕಿನ ಅವತಿಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ…

17 hours ago

ಮಾದಕ ವಸ್ತುಗಳ (ಡ್ರಗ್ಸ್) ಸಂಪೂರ್ಣ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕರ್ತವ್ಯ ನಿರ್ವಹಿಸಿ – ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ

ಜಿಲ್ಲೆಯಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೈಜೋಡಿಸಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ…

18 hours ago

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ: ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ…

19 hours ago

ಗೋಮಾಳ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗೆ ಮನವಿ

ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು…

22 hours ago

ವೈಯಕ್ತಿಕ ವಿಚಾರಕ್ಕೆ ಸಿಎಂ ಭೇಟಿ; ತಾಲೂಕಿನ ಹಿತರಕ್ಷಣೆಗಲ್ಲ? ವೆಂಕಟರಮಣಯ್ಯ ವಿರುದ್ಧ ಕಾಡನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮನು ಎನ್ ಆರ್ ಆರೋಪ

ದೊಡ್ಡಬಳ್ಳಾಪುರ: ಅಳಿಯನ ವರ್ಗಾವಣೆ ಸೇರಿದಂತೆ ವೈಯಕ್ತಿಕ ವಿಚಾರಗಳಿಗಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು…

24 hours ago