
ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಕ್ಷೇತ್ರದ ಚಂಪಾ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಬುಧವಾರ ಶ್ರದ್ಧಾಭಕ್ತಿಯಿಂದ ನಡೆದವು.

ಬೆಳಗಿನ ಜಾವ 5 ಗಂಟೆಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು. ಸುಬ್ರಹ್ಮಣ್ಯಸ್ವಾಮಿಯ ಪ್ರಾಕಾರೋತ್ಸವ ನಡೆಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ನಾಗಾರಾಧನೆಗೆ ಪ್ರಸಿದ್ದವಾಗಿರುವ ಘಾಟಿ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಅಂಗವಾಗಿ ಭಕ್ತಾದಿಗಳು ಹುತ್ತಗಳು ಹಾಗೂ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ನೂರಾರು ಭಕ್ತಾದಿಗಳು ಸಾಲುಗಟ್ಟಿ ನಿಂತು ಸುಬ್ರಹ್ಮಣ್ಯಸ್ವಾಮಿ ಹಾಗೂ ಲಕ್ಷ್ಮಿನರಸಿಂಹ ಸ್ವಾಮಿಯವರ ದರ್ಶನ ಪಡೆದರು. ದೇವಾಲಯದಲ್ಲಿ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

*ಡಿಸೆಂಬರ್ 25 ಕ್ಕೆ ಬ್ರಹ್ಮರಥೋತ್ಸವ*
ಶ್ರೀ ಘಾಟಿ ಸುಬ್ರಮಣ್ಯರವರ ಬ್ರಹ್ಮರಥೋತ್ಸವ ಡಿಸೆಂಬರ್ 25 ರಂದು ನಡೆಯಲಿದೆ. ಈ ಬಾರಿ ವಿಶೇಷವಾಗಿ ಪುಷ್ಪಲಂಕಾರ ದೀಪ ಅಲಂಕಾರಗಳಿರುತ್ತದೆ. ಭಕ್ತಾದಿಗಳ ಅನುಕೂಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕ್ಯೂಲೈನ್ ವ್ಯವಸ್ಥೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಇರಲಿದೆ.

*ಸುಂಕ ರಹಿತ ಜಾತ್ರೆ*
ಈ ಬಾರಿಯ ಘಾಟಿ ಜಾತ್ರೆಯಲ್ಲಿ ಜಾನುವಾರುಗಳಿಗೆ ಹಾಗೂ ಬರುವಂತಹ ಭಕ್ತಾದಿಗಳ ವಾಹನಗಳಿಗೆ ಸುಂಕ ಇರುವುದಿಲ್ಲ. ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಗರ್ಭಿಣಿ ಬಾಣಂತಿಯರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

*ಡಿ.10 ರಿಂದ 18 ವರೆಗೆ ರಾಸುಗಳ ಜಾತ್ರೆ*
ಡಿಸೆಂಬರ್ 10 ರಿಂದ 18 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ ರಾಸುಗಳ ಜಾತ್ರೆ ಸಮಯದಲ್ಲಿ ವಿಶೇಷ ದೀಪಾಲಂಕಾರ, ರೈತರಿಗೆ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಾಸುಗಳಿಗೆ ರೋಗಗಳು ಹರಡದಂತೆ ಪಶು ವೈದ್ಯರ ವ್ಯವಸ್ಥೆ ಕಲ್ಪಿಸಲಾಗುವುದು. ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ….