ಮುಂಬೈನ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳು ಹೈದರಾಬಾದ್ ಸೇರಿದಂತೆ 13 ಸ್ಥಳಗಳ ಮೇಲೆ ದಾಳಿ ನಡೆಸಿ 9.04 ಕೋಟಿ ರೂ. ನಗದು, 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣಗಳು ಮತ್ತು ಬೆಳ್ಳಿ ಗಟ್ಟಿಗಳು ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ ಮೂಲದ ಅಧಿಕಾರಿ, ಮುಂಬೈನ ಪಟ್ಟಣ ಯೋಜನಾ ಉಪನಿರ್ದೇಶಕ ವೈ.ಎಸ್. ರೆಡ್ಡಿ ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 8.6 ಕೋಟಿ ರೂ. ನಗದು ಮತ್ತು 23.25 ಕೋಟಿ ರೂ. ಮೌಲ್ಯದ ವಜ್ರಖಚಿತ ಆಭರಣಗಳು ಮತ್ತು ಬೆಳ್ಳಿ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವೇನು?
ಮೀರಾ ಭಯಾಂದರ್ ಪೊಲೀಸ್ ಕಮಿಷನರೇಟ್‌ನಲ್ಲಿ ಬಿಲ್ಡರ್‌ಗಳು, ಸ್ಥಳೀಯ ಸಹಾಯಕರು ಮತ್ತು ಇತರರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ. ಈ ಪ್ರಕರಣವು 2009 ರಿಂದ ವಸಾಯಿ ವಿರಾರ್ ಮುನ್ಸಿಪಲ್ ಕಾರ್ಪೊರೇಷನ್ (ವಿವಿಎಂಸಿ) ವ್ಯಾಪ್ತಿಯಲ್ಲಿ ‘ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಅಕ್ರಮ ನಿರ್ಮಾಣ’ಕ್ಕೆ ಸಂಬಂಧಿಸಿದೆ.
ವಸಾಯಿ ವಿರಾರ್ ನಗರದ ಅನುಮೋದಿತ ಅಭಿವೃದ್ಧಿ ಯೋಜನೆಯ ಪ್ರಕಾರ, ಒಳಚರಂಡಿ ಸಂಸ್ಕರಣಾ ಘಟಕ ಮತ್ತು ಡಂಪಿಂಗ್ ಮೈದಾನಕ್ಕಾಗಿ ಕಾಯ್ದಿರಿಸಿದ ಭೂಮಿಯಲ್ಲಿ ಕಾಲಕ್ರಮೇಣ 41 ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಆರೋಪಿ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಅಂತಹ ಭೂಮಿಯಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ, ನಂತರ ಅನುಮೋದನೆ ದಾಖಲೆಗಳನ್ನು ನಕಲಿ ಮಾಡುವ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ.
ಈ ಕಟ್ಟಡಗಳು ಅನಧಿಕೃತವಾಗಿದ್ದು, ಅಂತಿಮವಾಗಿ ಅವುಗಳನ್ನು ಕೆಡವಲಾಗುತ್ತದೆ ಎಂದು ಮೊದಲೇ ತಿಳಿದಿದ್ದರೂ ಸಹ, ಡೆವಲಪರ್‌ಗಳು ಈ ಕಟ್ಟಡಗಳಲ್ಲಿನ ಕೊಠಡಿಗಳನ್ನು ಮಾರಾಟ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸಿ ವಂಚಿಸಿದ್ದಾರೆ.
ಈ ಪ್ರದೇಶದಲ್ಲಿ 2009 ರಿಂದ ದೊಡ್ಡ ಪ್ರಮಾಣದ ಅಕ್ರಮ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
“ವಸಾಯಿ ವಿರಾರ್ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ನಡೆದ ದೊಡ್ಡ ಪ್ರಮಾಣದ ಹಗರಣದ ಪ್ರಮುಖ ಅಪರಾಧಿಗಳು ಸೀತಾರಾಮ್ ಗುಪ್ತಾ, ಅರುಣ್ ಗುಪ್ತಾ ಮತ್ತು ಇತರರು ಎಂದು ಕಂಡುಬಂದಿದೆ. ಇದಲ್ಲದೆ, ತನಿಖೆಯ ಸಮಯದಲ್ಲಿ, ಈ ಅನಧಿಕೃತ/ಅಕ್ರಮ ಕಟ್ಟಡಗಳನ್ನು ವಿವಿಧ ವಿವಿಎಂಸಿ ಅಧಿಕಾರಿಗಳ ನಿಕಟ ಸಹಕಾರದೊಂದಿಗೆ ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ” ಎಂದು ಇಡಿ ಹೇಳಿಕೆ ನೀಡಿದೆ.