Categories: ಲೇಖನ

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ……

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ……

ಮತದಾರರ ಪಟ್ಟಿ ಪರಿಷ್ಕರಣೆ,
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ,
ಶೇಕಡ 33% ರಷ್ಟು ಮಹಿಳಾ ಮೀಸಲಾತಿ……

ಈ ಮೂರೂ ವಿಷಯಗಳು ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಒಕ್ಕೂಟದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ತೀರ್ಮಾನಗಳು. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಳಿವು ಉಳಿವಿನ, ಚುನಾವಣಾ ರಾಜಕೀಯ ಮತ್ತು ಅಧಿಕಾರದ ದೃಷ್ಟಿಯಿಂದ ಅತ್ಯಂತ ಮುಖ್ಯವಾದದ್ದು…..

ಏಕ್ ಭಾರತ್ ಶ್ರೇಷ್ಠ್ ಭಾರತ್,
ಬಹುತ್ವ ಭಾರತ್ ಬಲಿಷ್ಠ ಭಾರತ್,
ಒಂದೇ ದೇಶ ಒಂದೇ ಭಾಷೆ ಒಂದೇ ಚುನಾವಣೆ, ವೈವಿಧ್ಯಮಯ ಭಾರತ ವೈಶಿಷ್ಟ್ಯ ಪೂರ್ಣ ಭಾರತ…..

ಈ ಮಸೂದೆಗಳು ಭಾರತವನ್ನು ಮುಂದಿನ ದಿನಗಳಲ್ಲಿ ಅತ್ಯಂತ ಆಧುನಿಕ, ಮುಂದುವರಿದ, ಬಲಿಷ್ಠ ದೇಶವನ್ನಾಗಿ, ಐಕ್ಯತೆಯ ದೇಶವನ್ನಾಗಿ ರೂಪಿಸುತ್ತದೆಯೇ ಅಥವಾ ಭಾರತವನ್ನು ಜಾತಿ, ಧರ್ಮ, ಸರ್ವಾಧಿಕಾರ, ಉತ್ತರ ದಕ್ಷಿಣ, ಆರ್ಯ ದ್ರಾವಿಡ ಎಂಬ ಭಿನ್ನಾಭಿಪ್ರಾಯದ ನಡುವೆ ವಿಭಜನೆಯ ಬೀಜಗಳನ್ನು ಬಿತ್ತಬಹುದೇ ಎಂಬ ಪ್ರಶ್ನೆಯನ್ನು ಭಾರತೀಯರೆಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ…..

ಮೇಲೆ ಹೇಳಿದ ಮೂರೂ ಯೋಜನೆಗಳು ಅತ್ಯಂತ ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ, ದಕ್ಷತೆಯಿಂದ, ದೇಶದ ಹಿತಾಸಕ್ತಿಯಿಂದ, ಯಾರಿಗೂ ತೊಂದರೆ ಉಂಟು ಮಾಡದೆ ಜಾರಿಗೊಳಿಸಿದ್ದೇ ಆದರೆ ಖಂಡಿತವಾಗಲೂ ಇದು ದೇಶದ ಅಭಿವೃದ್ಧಿಗೆ ಪೂರಕ. ಆದರೆ ತನ್ನ ವಿರೋಧಿಗಳನ್ನು, ಪ್ರತಿಸ್ಪರ್ಧಿಗಳನ್ನು ನಿರ್ನಾಮ ಮಾಡಿ, ತಾವು ಮಾತ್ರ ಅಧಿಕಾರದಲ್ಲಿ ಉಳಿಯಬೇಕೆಂಬ ಹಿಡನ್ ಅಜೆಂಡಾ ಇಟ್ಟುಕೊಂಡು, ತನಗೆ ಅನುಕೂಲ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದೇ ಆದರೆ ದೇಶದ ಭವಿಷ್ಯಕ್ಕೆ ತುಂಬಾ ಆಘಾತಕಾರಿ ಮತ್ತು ವಿಭಜನೆಯ ಬೀಜ ಬಿತ್ತಿದಂತೆ ಆಗುತ್ತದೆ.

ಏಕೆಂದರೆ ಭಾರತದ ಚುನಾವಣಾ ರಾಜಕೀಯ ತೀರ ಹದಗೆಟ್ಟಿದೆ. ಗೆಲುವೊಂದೇ ಮಾನದಂಡವಾಗಿದೆ, ಅಧಿಕಾರವೊಂದೇ ಮುಖ್ಯ ಗುರಿಯಾಗಿದೆ. ಜೊತೆಗೆ ಇಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಪ್ರಾದೇಶಿಕ ಮತ್ತು ರಾಜಕೀಯ ರಚನೆ ಅತ್ಯಂತ ವಿಭಿನ್ನವಾಗಿ ಅಸಮಾನತೆಯಿಂದ ಕೂಡಿದೆ, ವಿಭಜನೆಯಿಂದ ಕೂಡಿದೆ. ಅದನ್ನು ಬಹು ಬೇಗ ದುರುಪಯೋಗಪಡಿಸಿಕೊಂಡು, ಜನರ ಮಾನಸಿಕತೆಯನ್ನು ಭ್ರಮೆಗೆ ಒಳಪಡಿಸಿ, ಭಾವನಾತ್ಮಕ ಬ್ಲಾಕ್ಮೇಲ್ ಮಾಡಿ, ಚುನಾವಣಾ ರಾಜಕೀಯದಲ್ಲಿ ಯಶಸ್ವಿಗಳಿಸಬಹುದು ಎಂಬುದು ಹಲವಾರು ಚುನಾವಣೆಗಳಲ್ಲಿ ದೃಢಪಟ್ಟಿದೆ. ಮತದಾರರು ಇನ್ನೂ ಸಾಕಷ್ಟು ಪ್ರಬುದ್ಧರಾಗದೆ ಇರುವುದರಿಂದ ಈ ಯೋಜನೆಗಳ ಅನುಷ್ಠಾನದ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ…..

ಮೇಲ್ನೋಟಕ್ಕೆ ಮತದಾರರ ಪರಿಷ್ಕರಣೆ ಅತ್ಯಂತ ಕ್ರಮಬದ್ಧ ಸುಧಾರಣೆ ಎಂದು ಅನಿಸುತ್ತದೆ. ಆದರೆ ಅದರ ಹಿಂದಿನ ಹುನ್ನಾರ ಸಹ ಗಮನಿಸಬೇಕಾಗುತ್ತದೆ. ಅಕ್ರಮ ವಲಸಿಗರ ಮತದಾನದ ಹಕ್ಕನ್ನು ನಾಶಪಡಿಸುವುದು, ಸತ್ತಿರುವ ಮತ್ತು ಎರಡು ಮೂರು ಮತ ಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಿರುವ ಜನರನ್ನು ತೆಗೆದುಹಾಕುವುದು ನಿಜಕ್ಕೂ ಉತ್ತಮ ನಿರ್ಧಾರ. ಆದರೆ ಆ ನೆಪದಲ್ಲಿ ತಮ್ಮ ಪ್ರತಿಸ್ಪರ್ಧಿ ಮತದಾರರ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಘನಘೋರ ಅನ್ಯಾಯ ಮಾಡಿದಂತೆ. ಏಕೆಂದರೆ ಭಾರತದಲ್ಲಿ ಈಗಲೂ ಎಷ್ಟೋ ಅವಿದ್ಯಾವಂತ, ಅನಾಮಿಕ, ಕಡುಬಡವರು ಸಾಕಷ್ಟು ಜನರಿದ್ದಾರೆ. ಆಡಳಿತ ವ್ಯವಸ್ಥೆ ಅವರಿಗೆ ಇನ್ನೂ ತಲುಪಿಯೇ ಇಲ್ಲ. ಅಂತಹವರು ಈ ಒಂದು ಸರ್ಕಾರಿ ಪ್ರಾಯೋಜಿತ ಮತ ಪರಿಷ್ಕರಣೆಯ ದಾಖಲೆಗಳನ್ನು ನೀಡಲು ವಿಫಲರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಮತದಾನದ ಮೂಲಭೂತ ಹಕ್ಕುಗಳಿಂದಲೇ ವಂಚಿತರಾಗುತ್ತಾರೆ. ಇವರೆಲ್ಲಾ ಸಾಮಾನ್ಯವಾಗಿ ಒಂದು ರಾಷ್ಟ್ರೀಯ ಪಕ್ಷದ ಪರವಾಗಿ ಮತ ಹಾಕುವವರು ಎನ್ನುವ ಭಾವನೆಯಿಂದ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಆರೋಪ ಇದೆ.

ಅದು ಸತ್ಯವಾಗಿದ್ದಲ್ಲಿ ನಿಜಕ್ಕೂ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ ಎಂದು ಹೇಳಬೇಕಾಗುತ್ತದೆ. ಚರ್ಚೆಯನ್ನು ಯಾವ ನಿಟ್ಟಿನಲ್ಲಿ ಬೇಕಾದರೂ ಮಾಡಬಹುದು. ಸಮರ್ಥನೆ ಅಥವಾ ವಿರೋಧಕ್ಕೆ ಸಾಕಷ್ಟು ಅಂಶಗಳಿರುತ್ತವೆ. ಆದರೆ ದೇಶ ಮತ್ತು ಸಂವಿಧಾನದ ಹಿತಾಸಕ್ತಿಯನ್ನು ಹೃದಯಪೂರ್ವಕವಾಗಿ ರಕ್ಷಿಸುವ ನಿಟ್ಟಿನಲ್ಲಿ ಯೋಚಿಸಿದರೆ ಆಗ ಸತ್ಯ ಮತ್ತು ವಾಸ್ತವ ಅರ್ಥವಾಗುತ್ತದೆ….

ಹಾಗೆಯೇ ಕ್ಷೇತ್ರಗಳ ಪುನರ್ವಿಂಗಡಣೆ ಖಂಡಿತ ಒಳ್ಳೆಯ ಕ್ರಮ. ಅದು ಕಾಲಕ್ಕನುಗುಣವಾಗಿ ಆಗಲೇ ಬೇಕಾದ ಪ್ರಕ್ರಿಯೆ. ಆದರೆ ದಕ್ಷಿಣ ಮತ್ತು ಉತ್ತರದ ಜನಸಂಖ್ಯೆಯನ್ನು ಆಧರಿಸಿ ಇದನ್ನು ಪುನರ್ ವಿಂಗಡಣೆ ಮಾಡಿದರೆ ಹಿಂದೆ ಆಗಿರುವ ಅನ್ಯಾಯವೇ ಮುಂದುವರಿಯುತ್ತದೆ. ಜೊತೆಗೆ ಈಗಾಗಲೇ ದಕ್ಷಿಣದ ರಾಜ್ಯಗಳ ತೆರಿಗೆ ಹಕ್ಕು, ಹಿಂದಿ ಹೇರಿಕೆ, ಆರ್ಯ ದ್ರಾವಿಡ ಸಾಂಸ್ಕೃತಿಕ ಸಂಘರ್ಷ ಮತ್ತಷ್ಟು ದೊಡ್ಡದಾಗಿ ಉತ್ತರ ದಕ್ಷಿಣದ ವಿಭಜನಾತ್ಮಕ ಮನಸ್ಥಿತಿ ಇನ್ನೂ ಹೆಚ್ಚಾಗಬಹುದು. ದೇಶದ ಪ್ರಧಾನಿಯನ್ನು ಉತ್ತರದ ಹಿಂದಿ ಭಾಷಿಕರೆ ನಿರ್ಧರಿಸುವುದಾದರೆ ಮುಂದೊಂದು ದಿನ ದಕ್ಷಿಣದವರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು.

ಆದ್ದರಿಂದ ಹೊಸ ಜನಗಣತಿಯನ್ನು ಆಧರಿಸಿ ಉತ್ತರ ದಕ್ಷಿಣ ಜನಸಂಖ್ಯೆಯನ್ನು ಮೀರಿ ಮತ್ಯಾವುದೋ ಒಂದು ವೈಜ್ಞಾನಿಕ ಕ್ರಮದ ಮೂಲಕ ಲೋಕಸಭಾ ಕ್ಷೇತ್ರಗಳ ಪರಿಷ್ಕರಣೆ ಮಾಡಿ ಇಬ್ಬರಿಗೂ ಹೆಚ್ಚು ಕಡಿಮೆ ಸಮಾನ ಹಕ್ಕು, ಸ್ವಾತಂತ್ರ್ಯ, ಅವಕಾಶ ನೀಡುವಂತಾದರೆ ಅದು ಉತ್ತಮ ಬೆಳವಣಿಗೆ. ಸಂವಿಧಾನ ತಜ್ಞರು ಆ ಬಗ್ಗೆ ಯೋಚಿಸಬೇಕು. ಇಲ್ಲದಿದ್ದರೆ ಖಂಡಿತ ಭವಿಷ್ಯದಲ್ಲಿ ದೇಶಕ್ಕೆ ಅಪಾಯವಾಗುತ್ತದೆ.

ಜೊತೆಗೆ ಮಹಿಳಾ ಮೀಸಲಾತಿಯ ಬಗ್ಗೆ ಯಾರೂ ನೇರವಾಗಿ ವಿರೋಧ ವ್ಯಕ್ತಪಡಿಸುವುದಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಅದು ತುಂಬಾ ಅವಶ್ಯಕ. ಆದರೆ ಭಾರತದ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯನ್ನು ಗುರುತಿಸಿ ಆ ಮಹಿಳಾ ಮೀಸಲಾತಿಯಲ್ಲೂ ಖಂಡಿತವಾಗಿ ಒಳ ಮೀಸಲಾತಿಯನ್ನು ಕೊಡಲೇಬೇಕಾಗುತ್ತದೆ. ಇಲ್ಲದಿದ್ದರೆ ಪ್ರಬಲ ಸಮುದಾಯಗಳ ಬೇರೆ ಬೇರೆ ರಾಜ್ಯದ ಮಹಿಳೆಯರೇ ಅಥವಾ ಶ್ರೀಮಂತ ಕುಟುಂಬದವರೇ ಅಥವಾ ಅನುವಂಶಿಕ ಆಡಳಿತದಂತೆ ಬೇರೆ ರೀತಿ ವಂಶಾಡಳಿತಗಳ ರಾಜಕೀಯ ವ್ಯವಸ್ಥೆ ಮುಂದುವರೆಯಬಹುದು. ಹೇಗೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಮೀಸಲಾತಿ ಬಂದ ನಂತರ ದುರ್ಬಲ ವರ್ಗದವರು ಸದಸ್ಯರಾದರೋ ಹಾಗೆ ಸಂಸತ್ತಿನಲ್ಲೂ ಎಲ್ಲ ವರ್ಗಗಳು ಪ್ರತಿನಿಧಿಸುವಂತೆ ಒಳ ಮೀಸಲಾತಿ ಅವಶ್ಯಕತೆ ಇದೆ.

ಹೌದು, ಮೀಸಲಾತಿ ಎಂಬುದು ಅಷ್ಟೇನೂ ಉತ್ತಮ ವಿಧಾನ ಅಲ್ಲದಿದ್ದರೂ ಭಾರತದಲ್ಲಿ ಜಾತಿ ವ್ಯವಸ್ಥೆ ಒಂದು ಶಾಪವಾಗಿರುವುದರಿಂದ ಅದನ್ನು ಹೊರತುಪಡಿಸಿದ ಯಾವುದೇ ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿಯ ಅವಶ್ಯಕತೆ ಖಂಡಿತ ಇರುತ್ತದೆ.

ಆದ್ದರಿಂದ ಈ ವಿಷಯಗಳನ್ನು ಎಲ್ಲಾ ಪಕ್ಷಗಳು ಏಕಪ್ರಕಾರವಾಗಿ, ಸರ್ವಾನುಮತದಿಂದ, ದೇಶದ ಹಿತಾಸಕ್ತಿಯಿಂದ ಒಟ್ಟಾಗಿ ಅನುಮೋದಿಸಿದರೆ ಮಾತ್ರ ದೇಶದ ಭವಿಷ್ಯ, ಭಾರತದ ನೂರು ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ವಿಶ್ವದ ಬಲಿಷ್ಠ ದೇಶವಾಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ದೇಶ ಖಂಡಿತ ನಿಧಾನವಾಗಿ ಕುಸಿಯುತ್ತಾ ಹೋಗಬಹುದು. ಏಕೆಂದರೆ ದೇಶದ ಅಭಿವೃದ್ಧಿಗಿಂತ ತಮ್ಮ ಪಕ್ಷದ ಅಧಿಕಾರವೇ ಮುಖ್ಯವಾದರೆ ಆಂತರಿಕ ಶಕ್ತಿ ನಿರ್ನಾಮವಾಗುವುದು ಗ್ಯಾರಂಟಿ.

ಸಂಸತ್ತಿನ ವಿಶೇಷ ಅಧಿವೇಶನ, ಕಾವೇರಿದ ಚರ್ಚೆಗಳು, ಮಸೂದೆಯ ಸೋಲು ಗೆಲುವುಗಳು ಎಲ್ಲವೂ ಸಹ ಆಯಾಯ ಪಕ್ಷಗಳ ಹಿತಾಸಕ್ತಿಯನ್ನು ಹೊಂದಿದೆಯೇ ಹೊರೆತು ನಿಜಕ್ಕೂ ದೇಶದ ಅಭಿವೃದ್ಧಿಯ ಕಡೆ ಯಾರಿಗೂ ಗಮನವಿಲ್ಲ. ಇದೇ ಎಲ್ಲರನ್ನೂ ಚಿಂತೆಗೀಡು ಮಾಡುವ ವಿಷಯ. ಪ್ರಾಮಾಣಿಕತೆ, ಇಚ್ಚಾ ಶಕ್ತಿ ಇದ್ದರೆ ಎಲ್ಲವೂ ಸಾಧ್ಯ. ಇಲ್ಲದಿದ್ದರೆ ಎಲ್ಲವೂ ಕಪಟ ನಾಟಕಗಳು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ: ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ…

1 hour ago

ಗೋಮಾಳ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗೆ ಮನವಿ

ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು…

4 hours ago

ವೈಯಕ್ತಿಕ ವಿಚಾರಕ್ಕೆ ಸಿಎಂ ಭೇಟಿ; ತಾಲೂಕಿನ ಹಿತರಕ್ಷಣೆಗಲ್ಲ? ವೆಂಕಟರಮಣಯ್ಯ ವಿರುದ್ಧ ಕಾಡನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮನು ಎನ್ ಆರ್ ಆರೋಪ

ದೊಡ್ಡಬಳ್ಳಾಪುರ: ಅಳಿಯನ ವರ್ಗಾವಣೆ ಸೇರಿದಂತೆ ವೈಯಕ್ತಿಕ ವಿಚಾರಗಳಿಗಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು…

6 hours ago

ಬರ ಘೋಷಣೆ ಬಳಿಕ ಸಿಎಂಗೆ ಮನವಿ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನಡೆಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತರಾಟೆ

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

9 hours ago

ದೊಡ್ಡಬಳ್ಳಾಪುರ ಬರ ಘೋಷಣೆಗೆ ಕ್ರೆಡಿಟ್ ಫೈಟ್: ಸರ್ಕಾರ ಈಗಾಗಲೇ ಬರ ಘೋಷಿಸಿದೆ; ಮತ್ತೆ ಮನವಿ ಏಕೆ?: ವೆಂಕಟರಮಣಯ್ಯಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತಿರುಗೇಟು

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

9 hours ago

ದೇವನಹಳ್ಳಿ–ದೊಡ್ಡಬಳ್ಳಾಪುರದ ಹಲವು ಗ್ರಾಮಗಳ ಮೇಲೆ KIADB ಕಣ್ಣು: ಕೃಷಿ ಭೂಮಿ ಉಳಿಸಿಕೊಳ್ಳಲು ಮತ್ತೆ ಹೋರಾಟದ ಸದ್ದು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಕೃಷಿ ಭೂಮಿಯ ಮೇಲೆ ಮತ್ತೊಮ್ಮೆ ಭೂಸ್ವಾಧೀನದ ಆತಂಕ ಆವರಿಸಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ವ್ಯಾಪ್ತಿಯಲ್ಲಿ…

11 hours ago