ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಎಲ್‌ಪಿಜಿ ಗ್ಯಾಸ್, ವಾಣಿಜ್ಯ ಗ್ಯಾಸ್ ಸಿಲಿಂಡರ್, ಸಿಎನ್‌ಜಿ, ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ಈ ವ್ಯವಸ್ಥೆ ನಡೆಯುತ್ತದೆ. ರಾಜ್ಯ ಸರ್ಕಾರಕ್ಕೆ ಈ ಪೂರೈಕೆಯನ್ನು ನೇರವಾಗಿ ನಿಯಂತ್ರಿಸುವ ಅಧಿಕಾರವಿಲ್ಲ ಎಂಬುದು ಸಾರ್ವಜನಿಕರು ಗಮನಿಸಬೇಕಾದ ವಿಷಯವಾಗಿದೆ ಎಂದರು.

ಈ ಮಧ್ಯೆ, ಪಶ್ಚಿಮ ಏಷ್ಯಾ (ಕೊಲ್ಲಿ ರಾಷ್ಟ್ರಗಳು) ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ವ್ಯತ್ಯಯಗೊಂಡಿದೆ. ಅದರ ಪರಿಣಾಮ ದೇಶದೊಳಗೂ ತೀವ್ರವಾಗಿ ಕಾಣಿಸುತ್ತಿದ್ದು, ಕರ್ನಾಟಕದಲ್ಲಿಯೂ ಎಲ್‌ಪಿಜಿ ಗ್ಯಾಸ್ ಹಾಗೂ ಇಂಧನ ಕೊರತೆ ಉಂಟಾಗಿದೆ. ಇದರಿಂದ ಜನರ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಸಿಎನ್‌ಜಿ ಕೊರತೆಯಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರುಮ ವಾಣಿಜ್ಯ ಗ್ಯಾಸ್ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವ ಹೊಟೇಲ್ ಮತ್ತು ಆಹಾರ ಉದ್ಯಮಗಳು. ಅಡುಗೆಗೆ ಗ್ಯಾಸ್ ಸಿಗದೆ ಪರದಾಡುತ್ತಿರುವ ಗೃಹಿಣಿಯರು. ಈ ಎಲ್ಲವನ್ನು ಗಮನಿಸಿದಾಗ, ಕೇಂದ್ರ ಸರ್ಕಾರವು ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ವಿದೇಶಾಂಗ ನೀತಿ ಮತ್ತು ಇಂಧನ ನಿರ್ವಹಣೆಯ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿದ್ದು, ಅದರ ಹೊರೆ ಜನರ ಮೇಲೆ ಬಿದ್ದಿದೆ ಎಂದರು.

ಇದಲ್ಲದೆ, ಇಂಧನ ಪೂರೈಕೆಯಲ್ಲಿ ರಾಜ್ಯಗಳ ನಡುವೆ ಸಮಾನತೆ ಕಾಣುತ್ತಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ. ಕೆಲವು ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿರುವಂತಿದೆ. ಕರ್ನಾಟಕ ರಾಜ್ಯದೊಂದಿಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರು ಅನಗತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ..

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ತಕ್ಷಣ ಇಂಧನ ಮತ್ತು ಅನಿಲ ಪೂರೈಕೆಯನ್ನು ಹೆಚ್ಚಿಸಲು ರಾಜ್ಯಗಳ ನಡುವೆ ಸಮಾನ ಹಂಚಿಕೆ ಖಚಿತಪಡಿಸಲು ಕರ್ನಾಟಕಕ್ಕೆ ಅಗತ್ಯ ಆದ್ಯತೆ ನೀಡಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಒತಾಯಿಸುತ್ತದೆ ಎಂದರು.

ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯದ ಕುರಿತು ಮುಖ್ಯಮಂತ್ರಿಗಳು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆದಿದ್ದಾರೆ. ಅದೇ ರೀತಿ, ನಾನು ಸಹ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆದು ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ..

Leave a Reply

Your email address will not be published. Required fields are marked *

error: Content is protected !!