ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸದ್ಯ “ಸಕಾಲ “ಯೋಜನೆಯಡಿ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗುತ್ತಿದೆ ಆದರೆ ಸಾಕಷ್ಟು ಹಿರಿಯರು ನಾಗರಿಕರು ಈ ಗುರುತಿನ ಚೀಟಿಯನ್ನು ಪಡೆಯಲು ಎರಡು -ಮೂರು ಬಾರಿ ಪೇಟೆಗಳಿಗೆ ಅಥವಾ ಹೋಬಳಿ ಕೇಂದ್ರಕ್ಕೆ ಬಂದು ಹೋಗಿ ಗುರುತಿನ ಚೀಟಿಯನ್ನು ಪಡೆಯಬೇಕಿದೆ.ಇದರಿಂದ ಹಿರಿಯರಿಗೆ ಆರ್ಥಿಕ ಹೊರೆ ಮತ್ತು ಸಮಯ ವ್ಯರ್ಥವಾಗುತ್ತದೆ ಎಂದು ಸಾಕಷ್ಟು ಹಿರಿಯರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಇಲಾಖೆಯ ಗಮನಕ್ಕೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕ್ಷೇಯೋಭಿವೃದ್ದಿಗೆ “ಸಂಗಮ”, “ಪ್ರತಿ ಶುಕ್ರವಾರ ಹಿರಿಯ ನಾಗರಿಕರ ಮನರಂಜನೆ ಮತ್ತು ಕ್ಷೇಮಾಭಿವೃದ್ಧಿ ದಿನ ಆಚರಣೆ ” ಸೇರಿದಂತೆ ಅನೇಕ ವಿನೂತನವಾದ ಅತ್ಯಅವಶ್ಯಕ ಕಾರ್ಯಕ್ರಮಗಳನ್ನ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ.
ಹಿರಿಯ ನಾಗರಿಕರ ಯೋಜನೆಗಳನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಹಾಗೂ ಶೀಘ್ರ ತಲುಪಿಸಲು ಹಿರಿಯ ನಾಗರಿಕರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ ದಿನವೇ ಹಿರಿಯರಿಗೆ ಗುರುತಿನ ಚೀಟಿ ಕೈ ಸೇರುವಂತೆ ಮಾಡಲು “ಇಂದೇ ಸಕಾಲ” ಘೋಷ ವಾಕ್ಯದೊಂದಿಗೆ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸುವ ಎಲ್ಲಾ ಹಿರಿಯ ನಾಗರಿಕರ ಅರ್ಜಿಗಳನ್ನು ಎಲ್ಲಾ ಕಚೇರಿ ಕೆಲಸದ ದಿನಗಳಂದು 1.00 ಗಂಟೆಗೆ ಸೇವಾ ಸಿಂಧು ಪೋರ್ಟಲ್ ನ ಸಕಾಲದಲ್ಲಿ ಪರಿಶೀಲಿಸಿ ಅನುಮೋದನೆ ಮಾಡಲಾಗುವುದು.
ಇದೇ ಸಮಯಕ್ಕೆ ಅರ್ಜಿ ಸಲ್ಲಿಸಿದ ಕೇಂದ್ರದಲ್ಲಿ ಸಹಿ ಹೊಂದಿದ ಹಿರಿಯ ನಾಗರಿಕ ಗುರುತಿನ ಚೀಟಿಯನ್ನು ಅದೇ ದಿನ(ಕಚೇರಿ ಕೆಲಸದ ದಿನ) ಸ್ಥಳದಲ್ಲಿಯೆ ಹಿರಿಯ ನಾಗರಿಕರು ಪಡೆಯಬಹುದಾಗಿದೆ.
ಜಿಲ್ಲೆಯ ಎಲ್ಲಾ ಹಿರಿಯ ನಾಗರಿಕರು “ಇಂದೇ ಸಕಾಲ” ಯೋಜನೆಯಡಿ ಶೀಘ್ರ ಹಿರಿಯ ನಾಗರಿಕರ ಗುರುತಿನ ಚೀಟಿ ಅನುಕೂಲ ಪಡೆಯಲು ಕೋರಿದೆ .
ಹಿರಿಯ ನಾಗರಿಕರ ಗುರುತಿನ ಚೀಟಿ ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗೆ, ಹಿರಿಯ ನಾಗರಿಕರ ಸಹಾಯವಾಣಿ 1090 ಸಂಪರ್ಕಿಸಿ. ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂರವಾಣಿ 08029787441 ಸಂಪರ್ಕಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಎಂ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.