
ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಇಂದು ನಡೆಯಲಿದ್ದು, ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳಲು ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಇತರೆ ರಾಜ್ಯಗಳ ನಾನಾ ಮೂಲೆಗಳಿಂದ ಭಕ್ತಾಧಿಗಳು ಸಾಗಾರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

ಇಂದು ಮುಂಜಾನೆ ಸುಮಾರು 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಬ್ರಹ್ಮರಥೋತ್ಸವ ಹಿನ್ನೆಲೆ ದೇವರಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಿ, ನಾನಾ ರೀತಿ ಹೋಮ ಹವನ, ಪೂಜಾ ವಿಧಿ ವಿಧಾನಗಳು ಅದ್ಧೂರಿಯಾಗಿ, ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದೆ.
ಭಕ್ತಾಧಿಗಳು ಸರ್ಪದೋಷ ನಿವಾರಣೆಗಾಗಿ ಕ್ಷೇತ್ರದಲ್ಲಿರುವ ನಾಗರ ಕಲ್ಲು, ಹುತ್ತಗಳಿಗೆ ಹಾಲು, ತುಪ್ಪ ಎರೆದು, ಅರಿಶಿಣ ಕುಂಕುಮ ಹಚ್ಚಿ, ವಿಶೇಷ ಪೂಜೆ ಮಾಡುವಲ್ಲಿ ನಿರತರಾಗಿದ್ದಾರೆ.
ಬ್ರಹ್ಮರಥೋತ್ಸವ ಮಧ್ಯಾಹ್ನ 12-10 ರಿಂದ 12-20 ಗಂಟೆಗೆ ಸಲ್ಲುವ ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ರಥವನ್ನು ಎಳೆಯಲಾಗುತ್ತದೆ.
ಒಟ್ಟಿನಲ್ಲಿ ಘಾಟಿ ಬ್ರಹ್ಮರಥೋತ್ಸವ ಹಿನ್ನೆಲೆ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಸಂಭ್ರಮ, ಸಡಗರ ಮನೆ ಮಾಡಿದೆ.