ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಾಲ್ಗೊಂಡು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಬ್ಬರದ ಭಾಷಣ ಮಾಡಿದ್ದಾರೆ.
ಚಕ್ರವ್ಯೂಹದ ಕುರಿತು ರಾಹುಲ್ ಗಾಂಧಿ ಹೇಳಿಕೆ ನಂತರ ಲೋಕಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಯಿತು. “ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರ ಚಕ್ರವ್ಯೂಹದಲ್ಲಿ ಯುವಕ ಅಭಿಮನ್ಯುವನ್ನು ಸಿಲುಕಿಸಿ 6 ಜನರು ಕೊಂದರು”. ನಾನು ಸ್ವಲ್ಪ ಸಂಶೋಧನೆ ಮಾಡಿದ್ದೇನೆ ಮತ್ತು ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದು ಕೂಡ ಕರೆಯುತ್ತಾರೆ. ಅದು ಕಮಲದ ರೂಪದಲ್ಲಿ ಇರುತ್ತದೆ ಎಂಬುದನ್ನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರಿದು 21 ನೇ ಶತಮಾನದಲ್ಲಿ ಭಾರತದಲ್ಲಿ ಒಂದು ಹೊಸ ‘ಚಕ್ರವ್ಯೂಹ’ ರೂಪುಗೊಂಡಿದೆ. ಅದು ಕೂಡ ಕಮಲದ ರೂಪದಲ್ಲಿಯೇ ತನ್ನ ಚಿಹ್ನೆಯನ್ನು ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಎದೆಯ ಮೇಲೆ ಧರಿಸಿರುತ್ತಾರೆ. ಈ ಚಕ್ರವ್ಯೂಹದ ರೂವಾರಿಗಳಾಗಿ ಆರು ಜನರಿದ್ದಾರೆ. ಅವರು ಯಾರೆಂದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಇದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡುವ ಪ್ರಯತ್ನವನ್ನು ಮಾಡಿದರು.