ಇಂದು ಎನ್ ಸಿಸಿ ದಿನದ ಅಂಗವಾಗಿ ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಎನ್ ಸಿಸಿ ವಿದ್ಯಾರ್ಥಿಗಳು ಹುಲುಕಡಿ ಬೆಟ್ಟದವರೆಗೆ ಸೈಕ್ಲಿಂಗ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಬೆಳಗ್ಗೆ 6:30ಕ್ಕೆ ಸರಿಯಾಗಿ ನಗರದ ಶ್ರಿ ಕೊಂಗಾಡಿಯಪ್ಪ ಕಾಲೇಜಿನಿಂದ ದೊಡ್ಡಬೆಳವಂಗಲ ಹೋಬಳಿಯ ಹುಲುಕಡಿ ಬೆಟ್ಟದವರೆಗೆ ಸೈಕ್ಲಿಂಗ್ ಹಮ್ಮಿಕೊಳ್ಳಲಾಗಿತ್ತು. ನಂತರ ಹುಲುಕಡಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಮೂಲಕ ತೆರಳಿ ಅಲ್ಲಿ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಕೇವಲ ಓದಿಗೆ ಸೀಮಿತವಾಗಿರದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ತಮ್ಮ ಬದುಕಿನ ಅನುಭವಗಳನ್ನ ಹೆಚ್ಚಿಸಿಕೊಂಡು ಉನ್ನತ ಚಿಂತನೆಯನ್ನು ಬೆಳಸಿಕೊಳ್ಳಬೇಕು. ಉತ್ತಮ ಅರೋಗ್ಯ ಉತ್ತಮ ಸಮಾಜ ನಿರ್ಮಿಸುವಲ್ಲಿ ಎನ್ ಸಿಸಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ಕ್ಯಾಪ್ಟನ್ ಎನ್. ಶ್ರೀನಿವಾಸ್ ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಎಸ್ ಎಸ್. ಶಿವಶಂಕರ್ ಮಾತನಾಡಿ, ಆಧುನಿಕತೆಯ ಬಳುವಳಿಯಲ್ಲಿ ಮೂಲ ಬದುಕಿನ ರೂಢಿಗಳು ಮರೆಯಾಗುತ್ತಿವೆ. ದುಬಾರಿ ವಾಹನದ ಹುಚ್ಚು ಮನಸ್ಸನ್ನು ಬದಲಿಸುತ್ತಿದೆ. ಅದು ಬದಲಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ವೇಳೆ ಮೇಜರ್ ಎಸ್.ಮಹಾಬಲೇಶ್ವರ್ ಲೆಫ್ಟಿನಂಟ್ ಪ್ರವೀಣ್, ಸಿಟಿಒ ಶ್ರೀಕಾಂತ್. ಸಿ.ಕೆ ಹಾಗೂ ಎನ್ ಸಿಸಿ ವಿದ್ಯಾರ್ಥಿಗಳು ಇದ್ದರು.