
ದಯವಿಟ್ಟು ಇಂದಿನ ರಾಜಕೀಯ, ಆಡಳಿತ ಮತ್ತು ಸಾಮಾಜಿಕ ಜೀವನದ ಅಸಹನೀಯ ಅವ್ಯವಸ್ಥೆಗೆ ಸಾಮಾನ್ಯ ಜನರನ್ನು ದೂರಬೇಡಿ……..
ಪಾಪ ಕಣ್ರೀ,
ಭಾರತೀಯ ಸಮಾಜದಲ್ಲಿ ಮಹಿಳೆಯರೇ ಇರಬಹುದು, ರೈತರು ಇರಬಹುದು, ದಲಿತರು ಇರಬಹುದು, ಕಾರ್ಮಿಕರೇ ಇರಬಹುದು ಇವರೆಲ್ಲರೂ ತುಂಬಾ ಮುಗ್ಧರು, ಎಷ್ಟು ಮುಗ್ಧರು ಎಂದರೆ, ಅವರಿಗೆ ಅರಿವೇ ಇಲ್ಲ ತಾವು ಮುಗ್ಧರು ಎಂದು. ತಾವು ಎಲ್ಲವನ್ನೂ ತಿಳಿದ ಬುದ್ದಿವಂತರು ಎಂಬ ಭ್ರಮೆಯಲ್ಲಿದ್ದಾರೆ.
ನಕಲಿ ನಾಯಕರುಗಳು ಸಹ, ನಮ್ಮ ಜನರನ್ನು ಅದರಲ್ಲೂ ಮತದಾರರನ್ನು ಮಹಾನ್ ಪ್ರಬುದ್ಧ ಮತದಾರರು ಎಂದು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಾರೆ. ಪ್ರಜೆಗಳೇ ಪ್ರಭುಗಳು ಅದೇ ಪ್ರಜಾಪ್ರಭುತ್ವ ಎಂದು ರೈಲು ಹತ್ತಿಸುತ್ತಾರೆ. ಮತದಾನ ಪವಿತ್ರ ದಾನ ಎಂದು ಜನಪ್ರಿಯರಿಂದ ಹೇಳಿಸಿ ದಾರಿ ತಪ್ಪಿಸುತ್ತಾರೆ.
1947/1950 ರಿಂದ ಇಲ್ಲಿಯವರೆಗೆ ಸುಮಾರು 79 ವರ್ಷವಾಗುತ್ತಿದೆ ಭಾರತ ಸ್ವಾತಂತ್ರ್ಯ ಪಡೆದು ಮತ್ತು ಸಂವಿಧಾನ ಬದ್ದ ಗಣರಾಜ್ಯೋತ್ಸವಗಳ ಒಕ್ಕೂಟವಾಗಿ.
1990 ರವರೆಗಿನ ಭಾರತ ಮತ್ತು ನಂತರದ 2025 ರ ವರೆಗಿನ ಭಾರತ ಎಂದು ಎರಡು ಭಾಗಗಳಾಗಿ ಇಲ್ಲಿನ ಜನಜೀವನವನ್ನು ವಿಭಾಗಿಸಿ ನೋಡಬಹುದು.
ರಾಜರ ಆಡಳಿತದಿಂದ ಬ್ರಿಟಿಷ್ ರಾಜ್ ಬಳಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಬೆಳವಣಿಗೆ ಹೊಂದಿದರೂ 1990 ರ ವರೆಗೆ ಬಹುತೇಕ ರಾಜಾಡಳಿತದ ಗುಂಗಿನಲ್ಲಿಯೇ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿತ್ತು. 1950 ನೆಯ ಇಸವಿಯ ಆಸುಪಾಸಿನಲ್ಲಿ ಹುಟ್ಟಿದವರು 40/50 ವರ್ಷದವರಾಗಿದ್ದರು. ಅವರ ಚಿಂತನಾ ಕ್ರಮದಲ್ಲಿ ಹೆಚ್ಚಿನ ಬದಲಾವಣೆ ಆಗಿರಲಿಲ್ಲ. ಶಿಕ್ಷಣ, ವಾಹನ, ಸಂಪರ್ಕ, ಮಾಧ್ಯಮ ಮುಂತಾದ ಯಾವ ಕ್ಷೇತ್ರದಲ್ಲಿಯೂ ಆಧುನಿಕತೆ ಸಾಧ್ಯವಾಗಿರಲಿಲ್ಲ. ಎಲ್ಲದರಲ್ಲೂ ಸರ್ಕಾರದ ನಿಯಂತ್ರಣವೇ ಜಾಸ್ತಿಯಾಗಿತ್ತು. ಬಡತನದಲ್ಲಿಯೇ ಹೆಚ್ಚು ಜನ ಜೀವಿಸುತ್ತಿದ್ದರು.
ಆಗ ಸ್ಪಷ್ಟವಾಗಿ ಮೂರು ರೀತಿಯ ವರ್ಗ ಅಸಮಾನತೆ ಅಸ್ತಿತ್ವದಲ್ಲಿತ್ತು.
ಶಿಕ್ಷಿತರು ಮತ್ತು ಅನಕ್ಷರಸ್ಥರು,
ಬಡವರು ಮತ್ತು ಶ್ರೀಮಂತರು,
ಜಾತಿಯ ಮೇಲ್ವರ್ಗದವರು ಮತ್ತು ಹಿಂದುಳಿದವರು ಹಾಗು ದಲಿತರು.
ಆಗಲೂ ಮತದಾರರು ವಿವೇಚನಾರಹಿತವಾಗಿಯೇ ಮತ ಚಲಾಯಿಸುತ್ತಿದ್ದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತೋಳ್ಭಲಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುವ ಮೂಡ ನಂಬಿಕೆಗೆ ಬಲಿಯಾಗಿದ್ದರು.
1990 ರ ನಂತರ ಜಾಗತೀಕರಣದ ಪರಿಣಾಮವಾಗಿ ಒಂದಷ್ಟು ಕ್ಷಿಪ್ರ ಬೆಳವಣಿಗೆಗಳು ಸಂಭವಿಸಿದವು. ಮುಖ್ಯವಾಗಿ ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣ, ದಲಿತ ಹಿಂದುಳಿದ ವರ್ಗಗಳ ಜಾಗೃತಿ, ಮಾಧ್ಯಮ ಮತ್ತು ಸಂಪರ್ಕ ಕ್ರಾಂತಿ, ಧಾರ್ಮಿಕ ನಂಬುಗೆಯ ರಾಷ್ಟ್ರೀಯತೆ.
ಇದರ ಪರಿಣಾಮವಾಗಿ ಹೊಸ ವರ್ಗಗಳು ಸೃಷ್ಟಿಯಾದವು.
ಮಾಹಿತಿ ತಂತ್ರಜ್ಞಾನ ಮತ್ತು ಡಿಜಟಲೀಕರಣದ ನುರಿತವರು ಮತ್ತು ಇದು ತಿಳಿಯದ ಸಾಮಾನ್ಯ ಜನರು,
ಎಂದಿನಂತೆ ಜಾತಿಯ ಅಸಮಾನತೆ, ಆರ್ಥಿಕ ಅಸಮಾನತೆಯ ಜೊತೆಗೆ ಧಾರ್ಮಿಕ ರಾಷ್ಟ್ರೀಯತೆ ಪ್ರತಿಪಾದಿಸುವ ಸಾಂಪ್ರದಾಯಿಕ ವರ್ಗ ಮತ್ತು ಅದಕ್ಕೆ ವಿರುದ್ಧವಾದ ಮಾನವೀಯತೆ ಮತ್ತು ಭಾರತೀಯತೆ ಪರವಾದ ವಿಚಾರವಾದಿಗಳ ವರ್ಗ.
ಈಗಲೂ ಮತದಾರರು ವಿವೇಚನಾರಹಿತವಾಗಿಯೇ ಮತ ಚಲಾಯಿಸುತ್ತಾರೆ. ಮಹಿಳೆಯರು, ದಲಿತರು, ರೈತರು, ಕಾರ್ಮಿಕರು, ಬಡವರ ಹಿತಾಸಕ್ತಿಗೆ ಪರೋಕ್ಷವಾಗಿ ವಿರೋಧವಿರುವ ಭಾರತೀಯ ಜನತಾ ಪಕ್ಷಕ್ಕೆ ಮತ ಚಲಾಯಿಸುತ್ತಾರೆ.
ಜನಸಾಮಾನ್ಯರು ಯಾವಾಗಲು ಸಮಾಜದ ಮತ್ತು ದೇಶದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ ಯೋಚಿಸಿ ಮತ ಚಲಾಯಿಸುವಷ್ಟು ಪ್ರಬುದ್ದತೆ ಇನ್ನೂ ಹೊಂದಿಲ್ಲ. ಅವರಿಗೆ ಸೀಮಿತ ಲಾಭದ ಭಾವನಾತ್ಮಕ ವಿಷಯಗಳೇ ಮುಖ್ಯವಾಗುತ್ತದೆ. ಅವರು ಬೆಳೆದಿರುವ ಮತ್ತು ಬೆಳೆಯುತ್ತಿರುವ ವಾತಾವರಣವೇ ಹಾಗಿದೆ.
ಮೇಲ್ನೋಟಕ್ಕೆ ಈಗ ಸುಮಾರು 30/35 ರ ಆಸುಪಾಸು ವಯಸ್ಸಿನ ಯುವಕರು ವಿದ್ಯಾವಂತ ಬುದ್ದಿವಂತರಂತೆ ಕಂಡರೂ ಅವರೂ ಸಹ ನಮ್ಮ ಹಿರಿಯರಂತೆ ಒಟ್ಟು ವ್ಯವಸ್ಥೆಯನ್ನು ಗಮನಿಸಿದಾಗ ಮುಗ್ಧರೇ.
ಆದ್ದರಿಂದ ಅವರನ್ನು ದೂಷಿಸಿ ಪ್ರಯೋಜನವಿಲ್ಲ. ಅವರು ಜಾಗೃತರಾಗುವುದು ತುಂಬಾ ಕಷ್ಟ. ಅಲ್ಲದೆ ಅವರ ಸಂಖ್ಯೆ ಬೃಹತ್ತಾಗಿದೆ.
ಅದಕ್ಕೆ ಬದಲಾಗಿ ಈಗಾಗಲೇ ಜಾಗೃತರಾಗಿರುವವರು, ಶ್ರೀಮಂತರು, ವಿದ್ಯಾವಂತರು, ಜನ ಪ್ರತಿನಿಧಿಗಳು ಮುಂತಾದವರನ್ನೇ ಇದಕ್ಕೆ ನೇರ ಹೊಣೆ ಮಾಡಿ ಅವರಿಂದಲೇ ಈ ವ್ಯವಸ್ಥೆಯ ಬದಲಾವಣೆಗೆ ಪ್ರಯತ್ನಿಸಬೇಕಿದೆ.
ಸಾಮಾನ್ಯರನ್ನು ಅದಕ್ಕೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕು.
ಜನ ಸಾಮಾನ್ಯರ ಜಾಗೃತಿಗೇ ಮೊದಲ ಆಧ್ಯತೆ ನೀಡಿದರೆ ವ್ಯವಸ್ಥೆಯ ಬದಲಾವಣೆಗೆ ಶತಮಾನಗಳೇ ಬೇಕಾಗಬಹುದು.
ಆದ್ದರಿಂದ ಸಾಮಾನ್ಯ ಜನರನ್ನು ದೂರಬೇಡಿ. ಬಲಿಷ್ಠರನ್ನು ನಿಮ್ಮ ಗುರಿಯಾಗಿಸಿ. ಆ ಬಲಿಷ್ಠರು ಯಾರು ಮತ್ತು ಅವರು ಹೇಗೆ ಕಾರ್ಯನಿರ್ವಹಿಸಬೇಕೆಂಬ ಆಶಯ ಹೀಗಿದೆ………
ಪತ್ರಕರ್ತರು
************
ಕೇವಲ ನಿರೂಪಕರಲ್ಲ – ಮನರಂಜನೆ ನೀಡುವವರಲ್ಲ – ಜನರನ್ನು ಆಕರ್ಷಿಸುವವರಲ್ಲ – ವ್ಯಾಪಾರಿಗಳಲ್ಲ – ಜನಪ್ರಿಯತೆಯ ಹಿಂದೆ ಹೋಗುವವರಲ್ಲ – ಜನರನ್ನು ಮೆಚ್ಚಿಸುವವರು ಮಾತ್ರವಲ್ಲ…….
ಜೊತೆಗೆ ಮುಖ್ಯವಾಗಿ ವಿಷಯಗಳನ್ನು
ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ ಕಷ್ಟವಾದರೂ ಸತ್ಯವನ್ನು ಧೈರ್ಯವಾಗಿ ಹೇಳುವವರು.
ಪೋಲೀಸರು
**************
ಕೇವಲ ಭಯ ಪಡಿಸುವವರಲ್ಲ – ಹೊಡೆಯುವವರಲ್ಲ – ಕೊಲ್ಲುವವರಲ್ಲ – ಬಂಧಿಸುವವರಲ್ಲ – ನಿಯಂತ್ರಿಸಿವವರಲ್ಲ – ಎಚ್ಚರಿಸುವವರಲ್ಲ – ರಕ್ಷಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ
ನ್ಯಾಯವನ್ನು – ಸತ್ಯವನ್ನು – ಕಾನೂನನ್ನು ಅವಶ್ಯವಿರುವ ಜನರಿಗೆ ನಿಸ್ಪಕ್ಷಪಾತವಾಗಿ ತಲುಪಿಸುವವರು.
ವಕೀಲರು
***********
ಕೇವಲ ವೃತ್ತಿಪರರಲ್ಲ – ಹೊಟ್ಟೆ ಪಾಡಿನ ಕೆಲಸದವರಲ್ಲ – ಕಾನೂನು ಅರ್ಥೈಸುವವರಲ್ಲ – ಕಕ್ಷಿದಾರರ ಹಿತಾಸಕ್ತಿ ಕಾಪಾಡುವವರಲ್ಲ – ಚಾಣಾಕ್ಷತನದಿಂದ ವಾದ ಮಾಡುವವರು ಮಾತ್ರವಲ್ಲ….
ಜೊತೆಗೆ ಮುಖ್ಯವಾಗಿ
ಶೋಷಿತರಿಗೆ – ಧಮನಿತರಿಗೆ – ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವವರು.
ಬರಹಗಾರರು
*************
ಕೇವಲ ಅಕ್ಷರಗಳನ್ನು ಜೋಡಿಸುವವರಲ್ಲ – ಪದ ಲಾಲಿತ್ಯ ಹೊರಡಿಸುವವರಲ್ಲ – ವಾಕ್ಯಗಳ ಆಕರ್ಷಕ ನಿರೂಪಣೆ ಮಾಡುವವರಲ್ಲ – ಭಾವನೆಗಳನ್ನು ವ್ಯಕ್ತಪಡಿಸುವವರಲ್ಲ – ಪುಸ್ತಕ ಪ್ರಕಟಿಸುವವರಲ್ಲ – ಪ್ರಶಸ್ತಿ ಪಡೆಯುವವರಲ್ಲ – ಅಧ್ಯಕ್ಷತೆ ವಹಿಸುವವರು ಮಾತ್ರವಲ್ಲ …
ಜೊತೆಗೆ ಮುಖ್ಯವಾಗಿ
ಸತ್ಯದ ಹುಡುಕಾಟಗಾರರು ಮತ್ತು ನಿರ್ಭಯವಾಗಿ ಅದನ್ನು ದಾಖಲಿಸುವವರು.
ವೈದ್ಯರು
*************
ಕೇವಲ ರೋಗ ಗುಣಪಡಿಸುವವರಲ್ಲ – ವೃತ್ತಿಪರರಲ್ಲ – ಆರೋಗ್ಯದ ಮಾಹಿತಿ ನೀಡುವವರಲ್ಲ –
ಅತಿಮಾನುಷರಲ್ಲ – ಜೀವ ನೀಡುವವರು, ಉಳಿಸುವವರು ಮಾತ್ರವಲ್ಲ….
ಜೊತೆಗೆ ಮುಖ್ಯವಾಗಿ
ಜನರಲ್ಲಿ ಬದುಕಿನ ಆತ್ಮವಿಶ್ವಾಸ ಮೂಡಿಸುವವರು.
ಶಿಕ್ಷಕರು
***************
ಕೇವಲ ಅಕ್ಷರ ಕಲಿಸುವವರಲ್ಲ – ಪಾಠ ಮಾಡುವವರಲ್ಲ – ಬುದ್ದಿವಾದ ಹೇಳುವವರಲ್ಲ – ಪದವಿ ನೀಡುವವರಲ್ಲ – ಉದ್ಯೋಗ ಕೊಡಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ
ಬದುಕಲು ಕಲಿಸುವವರು,
ಯೋಚಿಸಲು ಪ್ರೇರೇಪಿಸುವವರು.
ರಾಜಕಾರಣಿಗಳು
****************
ಕೇವಲ ರಸ್ತೆ ಮಾಡಿಸುವವರಲ್ಲ – ವಿದ್ಯುತ್ ಹರಿಸುವವರಲ್ಲ –
ಕಾನೂನು ಮಾಡುವವರಲ್ಲ – ಆಡಳಿತ ನಡೆಸುವವರಲ್ಲ –
ರಕ್ಷಣೆ ಮಾಡುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ
ಜನರ ಒಟ್ಟು ಜೀವನಮಟ್ಟ ಸುಧಾರಿಸುವವರು.
ಧರ್ಮದ ಪೀಠಾಧಿಪತಿಗಳು
**********************
ಕೇವಲ ಭೋದನೆ ಮಾಡುವವರಲ್ಲ – ಉಪನ್ಯಾಸ ನೀಡುವವರಲ್ಲ – ಆಶ್ರಯ ಅನ್ನ ಶಿಕ್ಷಣ ನೀಡುವವರಲ್ಲ – ಧರ್ಮ ಪ್ರಚಾರಕರಲ್ಲ – ಭಕ್ತಿ ಭಾವ ಮೂಡಿಸುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ
ಜ್ಞಾನದ ಬಲದಿಂದ ಜನರ ನೋವು ಸಂಕಷ್ಟ ಕಡಿಮೆ ಮಾಡುವವರು.
ಕಲಾವಿದರು
*****************
ಕೇವಲ ಮನರಂಜನೆ ನೀಡುವವರಲ್ಲ – ಭಾವಾತಿರೇಕಗಳನ್ನು ವ್ಯಕ್ತಪಡಿಸುವವರಲ್ಲ – ಜನರನ್ನು ಭ್ರಮಾಲೋಕಕ್ಕೆ ಒಯ್ಯುವವರಲ್ಲ – ಜನಪ್ರಿಯತೆ ಗಳಿಸುವವರಲ್ಲ – ದುಡ್ಡು ಮಾಡುವವರು ಮಾತ್ರವಲ್ಲ…..
ಜೊತೆಗೆ ಮುಖ್ಯವಾಗಿ,
ಜವಾಬ್ದಾರಿಯಿಂದ ಜನರನ್ನು ಒಳ್ಳೆಯ ನಡತೆ ಅಳವಡಿಸಿಕೊಳ್ಳಲು, ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಪ್ರೇರೇಪಿಸುವವರು.
ಇನ್ನೂ ಮುಂತಾದ ಸೇವಾ ವಲಯಗಳಲ್ಲಿ ಈ ರೀತಿಯ ಮೌಲ್ಯಗಳು ಪುನರ್ ಸ್ಥಾಪನೆಯಾಗಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಈಗ ತುರ್ತಾಗಿ ಆಗಬೇಕಿದೆ.
ಇದನ್ನು ಹೊರತುಪಡಿಸಿ ಬೆವರು ಸುರಿಸುವ ರಕ್ತ ಬಸಿಯುವ ಅನೇಕ ಶ್ರಮಜೀವಿಗಳು ನಮ್ಮ ನಡುವೆ ಇದ್ದಾರೆ. ಆದರೆ ಅವರಲ್ಲಿ ಬಹುತೇಕರಿಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲ. ಹೊಟ್ಟೆ ಪಾಡಿನ ಕೌಟುಂಬಿಕ ನಿರ್ವಹಣೆಯ ಮೂಲಭೂತ ಅವಶ್ಯಕತೆಗಳಿಗೇ ಕೊರತೆ ಇರುವಾಗ ಸದ್ಯದ ಪರಿಸ್ಥಿತಿಯಲ್ಲಿ ಅವರಲ್ಲಿ ಆದರ್ಶಗಳನ್ನು ಹುಡುಕುವುದು ತುಂಬಾ ಕಷ್ಟ.
ಸಾಮಾನ್ಯರಾದ ನಾವು ಮಾನವೀಯ ಮೌಲ್ಯಗಳ ಉಳಿವಿಗಾಗಿ ಸಾಧ್ಯವಾದಷ್ಟು ಈಗಿನಿಂದಲೇ ಪ್ರಯತ್ನಿಸೋಣ.
ಇದು ಸಾಧ್ಯವಿಲ್ಲ. ಈ ಸಮಾಜ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದೆ ಎಂಬ ಸಿನಿಕತನ ಬೇಡ.
ಎಲ್ಲರಿಗೂ ಒಳ್ಳೆಯದಾಗಲಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ