ಇಂದಿನಿಂದ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಆಹ್ವಾನ: ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ವಿತರಿಸಿರುವ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ 2000/- ರೂಗಳನ್ನು ಸಂದಾಯ ಮಾಡುವ ಕಾರ್ಯಕ್ರಮವಾಗಿರುತ್ತದೆ. 2023ರ ಜುಲೈ 20 ರಿಂದ ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ತಿಳಿಸಿದ್ದಾರೆ.

ಯೋಜನೆಯ ಸೌಲಭ್ಯ ಪಡೆಯಲು ಪ್ರಮುಖ ಅರ್ಹತೆಗಳು:

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸಿರುವ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.

ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ರಿಟರ್ನ್ಸ್ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ (helpline number): 1902 ಕ್ಕೆ ಬೆಳಿಗ್ಗೆ 9-00 ರಿಂದ 6-00 ಗಂಟೆಯವರೆಗೆ ಕರೆ ಮಾಡಬಹುದು.

ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಲು ಬೇಕಾದ ದಾಖಲಾತಿಗಳು:

ಪಡಿತರ ಚೀಟಿಯ ಸಂಖ್ಯೆ; ಯಜಮಾನಿಯ ಹಾಗೂ ಯಜಮಾನಿಯ ಪತಿಯ ಆಧಾರ್ ಕಾರ್ಡ್ ಸಂಖ್ಯೆ;
ಯಜಮಾನಿಯ ಬ್ಯಾಂಕ್ ಖಾತೆಯ ಪಾಸ್ ಬುಕ್.

ನೋಂದಣಿ ವಿಧಾನ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಫಲಾನುಭವಿಗಳು 103 ಗ್ರಾಮ ಒನ್ ಕೇಂದ್ರಗಳಲ್ಲಿ, 3 ಕರ್ನಾಟಕ ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿರುವ 101 ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ 23 ನಗರ ಪ್ರದೇಶದ ನೋಂದಣಿ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ಫಲಾನುಭವಿಗಳು ಮೇಲ್ಕಾಣಿಸಿದ ಕೇಂದ್ರಗಳಲ್ಲದೇ ಪ್ರಜಾ ಪ್ರತಿನಿಧಿ (citizen volunteers) ಹೆಸರಿನಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇವರ ಮೂಲಕ ಸಹ ಮೊಬೈಲ್ ಆಪ್ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ಪಡಿತರ ಚೀಟಿಗಳ ಡೇಟಾ ಆಧರಿಸಿ ನೊಂದಣಿಗೆ ದಿನಾಂಕ ಹಾಗೂ ಸಮಯ ನಿಗದಿಪಡಿಸಲಾಗುತ್ತದೆ. ನೊಂದಾಯಿತಿ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮುಖಾಂತರ ಯಾವ ಕೇಂದ್ರಕ್ಕೆ ಯಾವ ದಿನಾಂಕ, ಯಾವ ಸಮಯಕ್ಕೆ ನೋಂದಣಿ ಮಾಡಿಸಲು ಹೋಗಬೇಕು ಎಂಬ ಸಂದೇಶ ಬರುತ್ತದೆ.

ಪ್ರತಿ ಫಲಾನುಭವಿಯ ನೋಂದಾವಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 8147500500 ನಂಬರ್‌ಗೆ SMS ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ.

ನಿಗದಿತ ಸಮಯಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಸಂಜೆ 5.00 ಗಂಟೆ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು.

ನಿಗದಿತ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿದಾಗ ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಕೇಂದ್ರದಲ್ಲೇ ನೀಡಲಾಗುವುದು, ಪ್ರಜಾ ಪ್ರತಿನಿಧಿಗಳ ಮೂಲಕ ನೋಂದಾಯಿಸಿದರೆ ಮಂಜೂರಾತಿ ಪತ್ರವನ್ನು ನಂತರ ಪ್ರಜಾ ಪ್ರತಿನಿಧಿಗಳ ಮೂಲಕ ತಲುಪಿಸಲಾಗುವುದು.

ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ. ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *