ಇಂಜಿನ್ ಮತ್ತು ರೈಲು ಬೋಗಿ ಬೇರ್ಪಡಿಸುವಾಗ ಸಂಭವಿಸಿದ ಅಪಘಾತದಿಂದಾಗಿ ರೈಲ್ವೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಗುಸರಾಯ್‌ನ ಬರೌನಿ ಜಂಕ್ಷನ್‌ನಲ್ಲಿ ಶನಿವಾರ ನಡೆದಿದೆ.
ಮೃತ ರೈಲ್ವೇ ಕಾರ್ಮಿಕನನ್ನು ಬಿಹಾರದ ಸಮಸ್ತಿಪುರ ಜಿಲ್ಲೆಯ ದಲ್ಸಿಂಗ್ಸರಾಯ್ ಮೂಲದ ಅಮರ್ ಕುಮಾರ್ (35) ಎಂದು ಗುರುತಿಸಲಾಗಿದೆ. ಈತ ಸೊನಾಪುರ ರೈಲ್ವೆ ವಲಯ ವ್ಯಾಪ್ತಿಯ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಲಕ್ನೋ-ಬರೌನಿ ಎಕ್ಸ್‌ಪ್ರೆಸ್ (ಸಂಖ್ಯೆ: 15204) ಲಕ್ನೋ ಜಂಕ್ಷನ್‌ನಿಂದ ಆಗಮಿಸುತ್ತಿದ್ದಂತೆ ಬರೌನಿ ಜಂಕ್ಷನ್‌ನ 5 ನೇ ಪ್ಲಾಟ್‌ಫಾರ್ಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾವ್ ಸಾವನ್ನಪ್ಪಿದ್ದಾರೆ. ರೈಲಿನ ಬೋಗಿ ಜೋಡಿಸುವಾಗ ರೈಲಿನ ಇಂಜಿನ್ ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸಿದ್ದು, ಬೋಗಿಗಳ ನಡುವೆ ಅವರು ಸಿಲುಕಿ ನಜ್ಜುಗುಜ್ಜಾಗಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.
ಈ ಅಪಘಾತದ ಭಯಾನಕ ದೃಶ್ಯಗಳನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಎರಡು ಬೋಗಿಗಳ ನಡುವೆ ರಾವ್ ಸಿಲುಕಿರುವುದು ಕಂಡುಬಂದಿದೆ. ಈ ಕುರಿತು ರೈಲ್ವೆ ಇಲಾಖಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.