
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ಯುವನಿಧಿ ಹಾಗೂ ಸಂಚಾರಿ ಉದ್ಯೋಗಕ್ಕೆ ನೋಂದಣಿ ಮಾಡಿಕೊಳ್ಳಲು ವಿಶೇಷ ಶಿಬಿರ ಆಯೋಜಿಸಲಾಗಿದೆ.
ಯುವ ನಿಧಿ ಹಾಗೂ ಸಂಚಾರಿ ಉದ್ಯೋಗ ನೋಂದಣಿ ಶಿಬಿರವು ಆಗಸ್ಟ್ 14 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಶಿಬಿರ ನಡೆಯಲಿದೆ.
ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, ಬೆಂಗಳೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯುವ ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳು ಸೂಚಿತ ವಿದ್ಯಾರ್ಹತೆಗಳಲ್ಲಿ ತೇರ್ಗಡೆಯಾದ 180 ದಿನವಾದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತ್ತಿಪರ ಕೋರ್ಸ್ ಗಳು ಸೇರಿದಂತೆ) ಪ್ರತಿ ತಿಂಗಳು ರೂ. 3000 ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ರೂ. 1500 ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೂ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ.
*ಸಂಚಾರಿ ಉದ್ಯೋಗಕ್ಕೆ ನೋಂದಣಿ* ಮಾಡಿಕೊಳ್ಳುವ ಉದ್ಯೋಗಾಕಾಂಕ್ಷಿಗಳು 10ನೇ ತರಗತಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅಗತ್ಯ ದಾಖಲೆಗಳಾದ ಎಸ್.ಎಸ್.ಎಲ್.ಸಿ/ ಪಿಯುಸಿ/ ಪದವಿ ಮೂಲ ಅಂಕಪಟ್ಟಿ ಹಾಗೂ ನಕಲು ಪ್ರತಿಗಳು, ಜಾತಿ ದೃಢೀಕರಣ ಪತ್ರ (ಅನ್ವಯಿಸುವವರಿಗೆ ಮಾತ್ರ), ಆಧಾರ್ ಕಾರ್ಡ್ ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತೆಗೆದುಕೊಂಡು ಬರಬೇಕು. ಬೆಂಗಳೂರು ಗ್ರಾಮಾಂತರ, ನಗರ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, ಸಿಇಒ ಕಟ್ಟಡ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಪೀಣ್ಯ ತುಮಕೂರು ರಸ್ತೆ ಬೆಂಗಳೂರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಮಾದಗೊಂಡನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು. ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಕೊಠಡಿ ಸಂಖ್ಯೆ:132, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.