ಜಿಲ್ಲೆಯಲ್ಲಿರುವ ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿ ಆಹಾರ ತಯಾರಿಕೆ ಘಟಕಗಳು, ಕ್ಯಾಂಟೀನ್ ಸೇರಿದಂತೆ ಇತರೆ ಆಹಾರ ತಯಾರಿಕಾ ಘಟಕಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ಹೆಚ್ಚಿಸಿ ಕಳಪೆ ಆಹಾರ ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಡ್ಡಾಯವಾಗಿ ಎಲ್ಲಾ ಆಹಾರ ಘಟಕಗಳು ಪಾಲಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆ, ಅಂಗನವಾಡಿ ಮತ್ತು ವಸತಿ ನಿಲಯಗಳು, ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಿ, ನೋಂದಣಿ/ಪರವಾನಗಿ ಪಡೆಯದ ಸಂಸ್ಥೆಗಳು ಶೀಘ್ರ ನೋಂದಣಿ ಮಾಡಿಸಲು ಸೂಚಿಸಿದರು.
ಸಾರ್ವಜನಿಕ ಪ್ರದೇಶಗಳಲ್ಲಿನ ಖಾಸಗಿ, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಗಳು, ರೆಸ್ಟೋರೆಂಟ್, ಬೇಕರಿ, ಕಾರ್ಖಾನೆಗಳ ಕ್ಯಾಂಟೀನ್ ಗಳು ಸೇರಿದಂತೆ ಮುಂತಾದ ಆಹಾರ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ, ದಾಳಿ ನಡೆಸಿ ಕೃತಕ ಬಣ್ಣ ಬಳಸಿ ಆಹಾರ ತಯಾರಿಸುವುದು, ಕಳಪೆ ಆಹಾರ, ಪರವಾನಗಿ ಇಲ್ಲದೆ ನಡೆಸುವ ಉದ್ದಿಮೆಗಳಿಗೆ ಹಿಂಜರಿಯದೆ ಸೂಕ್ತ ಕ್ರಮ ಜರುಗಿಸಿ ಎಂದರು.
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ 2024 ರ ಎಪ್ರಿಲ್ ಮಾಹೆಯಿಂದ 2025 ರ ಜನವರಿ ಮಾಹೆಯವರೆಗೆ ಜಿಲ್ಲೆಯಲ್ಲಿ 311 ಆಹಾರ ಘಟಕಗಳ ತಪಾಸಣೆ ನಡೆಸಿ, 55 ಘಟಕಗಳಿಗೆ ನೋಟಿಸ್ ನೀಡಲಾಗಿದೆ. 27 ಘಟಕಗಳಿಗೆ ದಂಡ ವಿಧಿಸಿ 90,000 ದಂಡ ಸಂಗ್ರಹಿಸಲಾಗಿದೆ ಎಂದರು.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶಂಕರ್ ಮೂರ್ತಿ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕರಾದ ರಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರುಪಣಾಧಿಕಾರಿ ಅನಿತಾ ಲಕ್ಷ್ಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.