ಆಶಾಕಿರಣ… (ರೇ ಆಫ್ ಹೋಪ್)..

ಆಶಾಕಿರಣ…

( ರೇ ಆಫ್ ಹೋಪ್ )
*****************
ಕಿರು ಚಿತ್ರ……

ದೃಶ್ಯ ಒಂದು
**************

ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬೇಡ್ಕರ್, ನೆಲ್ಸನ್ ಮಂಡೇಲಾ ಚಿತ್ರಗಳು ಇರುತ್ತದೆ‌. ಆ ದೃಶ್ಯಗಳನ್ನು ಒಬ್ಬ 18 ವರ್ಷದ ಯುವಕ ತದೇಕಚಿತ್ತದಿಂದ ನೋಡುತ್ತಿರುತ್ತಾನೆ.

ಈ ದೃಶ್ಯದಲ್ಲಿ ಆತನ ಮುಖದ ಮೇಲೆ ಮಾತ್ರ ದೀಪದ ಬೆಳಕು ಇರುತ್ತದೆ. ಆಗ ಒಂದು ಮಾರ್ಗದರ್ಶಕನ ಧ್ವನಿ ಆ ಹುಡುಗನನ್ನು ಪ್ರಶ್ನಿಸುತ್ತದೆ,
” ಮಗು ಈ ಚಿತ್ರಗಳನ್ನು ನೋಡಿದೆಯಾ ”

ಹುಡುಗ ” ಎಸ್ ” ಎಂದು ತಲೆ ಆಡಿಸುತ್ತಾನೆ.
ಮಾರ್ಗದರ್ಶಕ
” ಅವರು ಯಾರು ಗೊತ್ತಾ ”
ಹುಡುಗ ” ಇಲ್ಲ ” ಎಂದು ತಲೆಯಾಡಿಸುತ್ತಾನೆ.

ಮಾರ್ಗದರ್ಶಕ ” ಅವರು ಈ ಜಗತ್ತು ಕಂಡ ಮಹಾನ್ ವ್ಯಕ್ತಿಗಳು”
ಹುಡುಗ ಸುಮ್ಮನೆ ತಲೆ ಆಡಿಸುತ್ತಾನೆ.

ಮಾರ್ಗದರ್ಶಕ ” ಇವತ್ತು ಈ ಭೂಮಿಯ ಮೇಲೆ ಸುಮಾರು 750 ಕೋಟಿಯಷ್ಟು ಜನ ವಾಸವಿದ್ದಾರೆ. ಭೂಮಿಯಲ್ಲಿ ಸುಮಾರು 10000 ವರ್ಷಗಳಿಂದ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಮನುಷ್ಯ ಜೀವಿಗಳು ಜೀವಂತವಾಗಿದ್ದಾರೆ ಎಂದು ಭಾವಿಸಿದರೆ ಆ ಸಂಖ್ಯೆ ಟ್ರಿಲಿಯನ್ಗಟ್ಟಲೆಯಾಗುತ್ತದೆ. ಎಷ್ಟೋ ಜನ ಬಂದು ಹೋಗಿದ್ದಾರೆ. ಆದರೆ ನಾವು ಈಗಲೂ ನೆನಪಿಟ್ಟು ಕೊಂಡಿರುವುದು ಕೇವಲ ಕೆಲವೇ ಜನರನ್ನು ಮಾತ್ರ.

ಈಗ ದೃಶ್ಯದಲ್ಲಿ ತೋರಿಸಿದ ಕೆಲವರು ಅದರಲ್ಲಿ ಸೇರಿದ್ದಾರೆ. ಇದು ಯಾಕೆ ಗೊತ್ತಾ,

ಹುಡುಗ ನಿರ್ಲಕ್ಷದಿಂದ ಸುಮ್ಮನೆ ನೋಡುತ್ತಿರುತ್ತಾನೆ.

ಮಾರ್ಗದರ್ಶಕ ” ಹೋಗ್ಲಿ ನಿನಗೆ ನೆಪೋಲಿಯನ್ ಬೋನೊಪಾರ್ಟೆ ಗೊತ್ತಾ”

ಹುಡುಗ ” ಇಲ್ಲ”

ಆಗ ಮಾರ್ಗದರ್ಶಕ
” ಫ್ರೆಂಚ್ ಕ್ರಾಂತಿಯ ಮಹಾ ನಾಯಕ. ಆತ ಒಮ್ಮೆ ಹೇಳುತ್ತಾನೆ, ಹುಟ್ಟಿದ ಪ್ರತಿ ಮನುಷ್ಯ ತನ್ನ ಪ್ರತಿ ಹೆಜ್ಜೆಯಲ್ಲೂ ಒಂದು ಗುರುತನ್ನು ಬಿಟ್ಟು ಹೋಗಬೇಕು. ಆಗ ಮಾತ್ರ ಬದುಕು ಸಾರ್ಥಕ ಕಾಣುತ್ತದೆ.
” ನೀನು ಸಾಧಿಸಲೇ ಹುಟ್ಟಿರುವೇ ‘ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ.

ಕಂದ ಈ ಅಪೂರ್ವ, ಅದ್ಬುತ ಜೀವನವನ್ನು ಸವಿಯುವುದು ಬಿಟ್ಟು ಅದನ್ನು ನೀನು ವ್ಯರ್ಥ ಮಾಡುತ್ತಿರುವೆ. ಸ್ವಾತಂತ್ರ್ಯಕ್ಕೆ ಬದಲಾಗಿ ಗುಲಾಮಿತನವನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ಪ್ರೀತಿಗೆ ಬದಲಾಗಿ ದ್ವೇಷವನ್ನು, ತಾಳ್ಮೆಗೆ ಬದಲಾಗಿ ಕೋಪವನ್ನು ಮೇಲುಗೈ ಸಾಧಿಸಲು ಬಿಟ್ಟಿರುವೆ. ಸ್ವಲ್ಪ ಯೋಚಿಸಿ ನೋಡು. ಈಗ ನೀನು ಎಲ್ಲಿರುವೆ ಗೊತ್ತೇ ”

ಹುಡುಗ ” ಗೊತ್ತು”

ಮಾರ್ಗದರ್ಶಕ “ಆದರೆ ನೀನು ಇಲ್ಲಿ ಇರಬಾರದಿತ್ತು.

ಹುಡುಗ “ಹೌದು”

ಮಾರ್ಗದರ್ಶಕ “ಆದರೆ ನಿನ್ನ ಜೀವನದ ಅಮೂಲ್ಯವಾದ ಆರು ತಿಂಗಳು ಈ ಕತ್ತಲ ಕೋಣೆಯಲ್ಲಿ ಕಳೆದಿರುವೆ”

ಹುಡುಗ ” ಹೌದು ”

ಮಾರ್ಗದರ್ಶಕ “ಒಮ್ಮೆ ನೀನು ಇಲ್ಲಿಗೆ ಬರಲು ಕಾರಣವಾದ ಘಟನೆಯನ್ನು ನೆನಪಿಸಿಕೋ”

ದೃಶ್ಯ ಎರಡು
**************

ಅದೇ ಹುಡುಗ ಮನೆಯ ಒಂದು ಕೋಣೆಯಲ್ಲಿ ಅತ್ಯುತ್ಸಾಹದಿಂದ ಆಕ್ರಮಣಕಾರಿಯಾಗಿ ವಿಡಿಯೋ ಗೇಮ್ ಆಡುತ್ತಿರುತ್ತಾನೆ. ಅದನ್ನು ವಿವಿಧ ಕೋನಗಳಿಂದ ಚಿತ್ರಿಕರಿಸಬೇಕು. ಅದರಲ್ಲಿ ಕಾರ್ ರೇಸ್ ಮತ್ತು ಶೂಟಿಂಗ್ ಆಟದಲ್ಲಿ ಶತ್ರುಗಳನ್ನು ಗುಂಡಿಟ್ಟು ಕೊಲ್ಲುವ ದೃಶ್ಯಗಳನ್ನು ಹೆಚ್ಚಾಗಿ ಚಿತ್ರೀಕರಿಸಬೇಕು. ಆಗ ಅವನ ಆಕ್ರಮಣಕಾರಿ ಮನೋಭಾವ ಹೆಚ್ಚಾದಂತೆ ಅವನು ಕಿರುಚುತ್ತಾ, ಕೂಗುತ್ತಾ ಹುಚ್ಚನಂತೆ ಆಡುತ್ತಿರುತ್ತಾನೆ. ತಾಯಿ ಊಟ ಮಾಡಲು ಕರೆಯುತ್ತಾಳೆ. ಆತ ನಿರಾಕರಿಸುತ್ತಾನೆ. ಆಗ ತಾಯಿ ತಟ್ಟೆಯಲ್ಲಿ ಅನ್ನ ತಂದು ಕೈ ತುತ್ತು ನೀಡಲು ಹೋಗುತ್ತಾಳೆ. ಆಗ ಅವನು ಅದನ್ನು ದೂರ ತಳ್ಳಿ ಚೆಲ್ಲುತ್ತಾನೆ. ವಿಡಿಯೋ ಗೇಮ್ ಆಡುತ್ತಾ ಅಲ್ಲಿಯೇ ಮಲಗಿಕೊಳ್ಳುತ್ತಾನೆ. ಮಧ್ಯರಾತ್ರಿ ಮತ್ತೆ ಎದ್ದು ಆಡುತ್ತಾನೆ.

ಸಂಪೂರ್ಣವಾಗಿ ವಿಡಿಯೋ ಗೇಮ್ ಗೆ ಅಡಿಕ್ಟ್ ಆಗಿರುತ್ತಾನೆ.

ದೃಶ್ಯ ಮೂರು
****************

ಆ ಹುಡುಗನ ಅಪ್ಪ-ಅಮ್ಮ ಸಣ್ಣದಾಗಿ ಜಗಳವಾಡುತ್ತಿದ್ದಾರೆ.
ತಾಯಿ “ನೀವು ಹೀಗೆ ಮಗನ ಬಿಹೇವಿಯರ್ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅವನು ನಮ್ಮನ್ನು ಕೈ ಬಿಟ್ಟು ಹೋಗುತ್ತಾನೆ. ಏಕೆಂದರೆ ಆತ ಸಂಪೂರ್ಣ ವಿಡಿಯೋ ಗೇಮ್ ಅಡಿಕ್ಟ್ ಆಗಿದ್ದಾನೆ”

ತಂದೆ ” ಇಲ್ಲ ಅವನು ನನ್ನ ಮಗ ಹಾಗೆಲ್ಲ ಮಾಡುವುದಿಲ್ಲ. ಏನೋ ಈಗಿನ ಕಾಲದಲ್ಲಿ ಎಲ್ಲಾ ಮಕ್ಕಳ ಹಾಗೆ ಸುಮ್ಮನೆ ಆಟ ಆಡಿಕೊಳ್ಳುತ್ತಾನೆ. ಅಷ್ಟೇ”

ತಾಯಿ “ಇಲ್ಲಾರಿ ಅವನು ಅದರಲ್ಲಿ ತುಂಬಾ ಆಳಕ್ಕೆ ಹೋಗಿ ಡಿಪ್ರೆಶನ್ ಮಟ್ಟ ತಲುಪಿದ್ದಾನೆ. ಕಾಲೇಜಿಗೂ ಸರಿಯಾಗಿ ಹೋಗುತ್ತಿಲ್ಲ. ಊಟ ನಿದ್ದೆ ಮಾಡುತ್ತಿಲ್ಲ.”

ತಂದೆ “ನೀನೇನು ತಲೆಕೆಡಿಸಿಕೊಳ್ಳಬೇಡ ಸುಮ್ನೆ ಇರು. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ”

ತಾಯಿ “ಆಯ್ತು ನಿಮ್ಮಿಷ್ಟ ಆದರೆ ಮುಂದೆ ಖಂಡಿತ ಪಶ್ಚಾತಾಪ ಪಡಬೇಕಾಗುತ್ತದೆ ”

ದೃಶ್ಯ ನಾಲ್ಕು
***************

ಅಪ್ಪ ಆ ಹುಡುಗನ ಪ್ರೈವೇಟ್ ರೂಂಗೆ ಬರುತ್ತಾನೆ. ಮಗ ಕೃತಕ ಬಂದೂಕು ಹಿಡಿದುಕೊಂಡು ಮಲಗಿರುತ್ತಾನೆ. ಅಪ್ಪ ಅವನ ತಲೆ ನೇವರಿಸುತ್ತಾ ನೋಡುತ್ತಾ‌ನೆ. ಮಗ ಎಚ್ಚರವಾಗಿ ಅಪ್ಪನನ್ನು ಒಮ್ಮೆ ನೋಡಿ ಮತ್ತೆ ವಿಡಿಯೋ ಗೇಮ್ ಆಡಲು ಶುರು ಮಾಡುತ್ತಾನೆ.
ಆಗ ಅಪ್ಪ ಹೇಳುತ್ತಾನೆ “ಮಗನೇ ಮುಂದಿನ ವಾರ ನಿನ್ನ ಸೆಕೆಂಡ್ ಪಿಯುಸಿ ಎಕ್ಸಾಮ್ ಇದೆ. ನಿನ್ನ ಭವಿಷ್ಯದ ದೃಷ್ಟಿಯಿಂದ ಇದು ಟರ್ನಿಂಗ್ ಪಾಯಿಂಟ್. ಬಹಳ ಮುಖ್ಯ. ಆದ್ದರಿಂದ ಈ ಪರೀಕ್ಷೆ ಮುಗಿಯುವವರೆಗೂ ವಿಡಿಯೋ ಗೇಮ್ ಬಿಟ್ಟು ಸ್ವಲ್ಪ ಓದುವ ಕಡೆ ಗಮನ ಕೊಡು”

ಆಗ ಮಗ ” ಆಯ್ತು ಡ್ಯಾಡಿ ನೀವು ಹೋಗಿ, ನನಗೆ ಈಗ ಡಿಸ್ಟರ್ಬ್ ಮಾಡಬೇಡಿ” ಎಂದು ಮತ್ತೆ ವಿಡಿಯೋ ಗೇಮ್ಸ್ ಶುರು ಮಾಡುತ್ತಾನೆ.

ದೃಶ್ಯ ಐದು
***************

ಎರಡನೇ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಿರುತ್ತದೆ. ಇವರ ಮಗ ಫೇಲಾಗಿರುತ್ತಾನೆ. ತಂದೆ ಚಿಂತಾಕ್ರಾಂತವಾಗಿ ಕುಳಿತಿರುತ್ತಾರೆ. ತಾಯಿ ತಂದೆಯೊಂದಿಗೆ ಜಗಳವಾಡುತ್ತಿರುತ್ತಾರೆ.

ತಾಯಿ “ನೋಡಿದ್ರಾ? ನಾನು ಎಷ್ಟು ಸಾರಿ ಹೇಳಿದೆ. ನೀವು ಕೇಳಲಿಲ್ಲ. ಅವನು ತುಂಬಾ ಅಡಿಕ್ಟ್ ಆಗಿದ್ದ. ಡಿಪ್ರೆಶನ್ ಗೆ ಹೋಗಿದ್ದ. ಇದೆಲ್ಲ ಆಗಿದ್ದು ನಿಮ್ಮಿಂದಾನೆ. ಹೈಸ್ಕೂಲಿನಲ್ಲಿ ಎಂಥಾ ಬ್ರಿಲಿಯಂಟ್ ರ್ಯಾಂಕ್ ಸ್ಟೂಡೆಂಟ್ ಅವನು. ಆದರೆ ಈಗ ಹಾಳಾಗಿದ್ದಾನೆ. ಜೀವನವನ್ನು ಹೇಗೆ ಕಟ್ಟಿಕೊಳ್ಳುವುದು ಅವನು. ನನಗೆ ಸಮಾಜದಲ್ಲಿ ತಲೆಯೆತ್ತಿ ತಿರುಗೋಕೆ ಆಗುತ್ತಿಲ್ಲ” ಹೀಗೆ ಗಂಡನನ್ನು ತುಂಬಾ ಕೆಟ್ಟದಾಗಿ ಕೋಪದಿಂದ ನಿಂದಿಸುತ್ತಾಳೆ. ಅವನು ಹಾಳಾಗಲು ಪರೋಕ್ಷವಾಗಿ ನೀವೇ ಕಾರಣ ಎಂದು ದೂರುತ್ತಾಳೆ. ಜೋರಾಗಿ ಕೂಗಾಡುತ್ತಾಳೆ. ಕೊನೆಗೆ ದುಃಖದಿಂದ ಅಳುತ್ತಾಳೆ.

ದೃಶ್ಯ ಆರು
***********””

ಅದೇ ಕೋಪದ ಬರದಲ್ಲಿ ತಂದೆ ಮಗನಿದ್ದ ರೂಮಿಗೆ ಬರುತ್ತಾನೆ. ಮಗ ಎಂದಿನಂತೆ ಕಿರುಚುತ್ತಾ ಆಕ್ರಮಣಕಾರಿಯಾಗಿ ವಿಡಿಯೋ ಗೇಮ್ ಆಡುತ್ತಿರುತ್ತಾನೆ. ತಂದೆ ನಿಂತು ಅದನ್ನು ಸ್ವಲ್ಪ ಹೊತ್ತು ನೋಡಿ ಕೊನೆಗೆ ವಿಡಿಯೋ ಗೇಮ್ ಕರೆಂಟ್ ಸ್ವಿಚ್ ಆಫ್ ಮಾಡುತ್ತಾನೆ. ಮಾನಿಟರ್ ಆಫ್ ಆಗುತ್ತದೆ. ಅದನ್ನು ನೋಡಿ ಮಗ ಶಾಕ್ ಆಗುತ್ತಾನೆ. ಅಪ್ಪನನ್ನು ಕೋಪದಿಂದ ಪ್ರಶ್ನಿಸುತ್ತಾನೆ.
ಅಪ್ಪ ಅದನ್ನು ನಿರ್ಲಕ್ಷಿಸಿ
” ಮತ್ತೆ ಇನ್ನು ಮುಂದೆ ವಿಡಿಯೋ ಗೇಮ್ ಆಡಬಾರದು. ನಿನ್ನ ಭವಿಷ್ಯ ಹಾಳಾಗುತ್ತಿದೆ”
ಮಗ ಕೇರ್ ಮಾಡುವುದಿಲ್ಲ. ಮತ್ತೆ ಎದ್ದು ಹೋಗಿ ಕರೆಂಟ್ ಸ್ವಿಚ್ ಆನ್ ಮಾಡಿ ವಿಡಿಯೋ ಗೇಮ್ ಆಡತೊಡಗುತ್ತಾನೆ. ಸ್ವಲ್ಪ ಹೊತ್ತು ಇದನ್ನು ಗಮನಿಸಿದ ತಂದೆ ಕೋಪದಿಂದ ಅಲ್ಲಿದ್ದ ವಿಡಿಯೋ ಗೇಮ್ ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಒಡೆದು ಹಾಕುತ್ತಾನೆ, ಚೆಲ್ಲಾಪಿಲ್ಲಿ ಮಾಡುತ್ತಾನೆ. ಇದನ್ನು ನೋಡಿ ಮಗನಿಗೆ ತಡೆದುಕೊಳ್ಳಲು ಆಗುವುದಿಲ್ಲ. ಕೋಪದಿಂದ ಅಲ್ಲಿದ್ದ ಕೈಗೆ ಸಿಕ್ಕಿದ ಕಬ್ಬಿಣದ ರಾಡಿನಿಂದ ಅಪ್ಪನ ತಲೆಗೆ ಹೊಡೆಯುತ್ತಾನೆ.” ಅಮ್ಮ” ಎಂದು ಕೂಗುತ್ತಾ, ಅಪ್ಪ ಕುಸಿಯುತ್ತಾನೆ.

ದೃಶ್ಯ ಏಳು
*************

ಮತ್ತೆ ದೃಶ್ಯ ಒಂದರ ಸನ್ನಿವೇಶ ಪ್ರವೇಶ. ಮಾರ್ಗದರ್ಶಕ “ಅಂದು ನಿನ್ನನ್ನು ಪೊಲೀಸರು ಬಾಲ ಅಪರಾಧಿಯಾಗಿ ಕರೆದುಕೊಂಡು ಬಂದಾಗ ನಿನ್ನೊಳಗಿನ ರಾಕ್ಷಸತ್ವ ಸಂಪೂರ್ಣ ಬಯಲಾಗಿತ್ತು. ಇಲ್ಲಿನ ಎಲ್ಲಾ ಅಧಿಕಾರಿಗಳು, ನೌಕರರು ನಿನ್ನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಲು ರೆಕಮೆಂಡ್ ಮಾಡಿದರು. ಏಕೆಂದರೆ ನಿನ್ನನ್ನು ನಿಭಾಯಿಸುವುದು ತುಂಬಾ ಕಷ್ಟ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ನಾನು ನಿನ್ನನ್ನು ಸೂಕ್ಷ್ಮವಾಗಿ ಗಮನಿಸಿದೆ. ನಿನ್ನೊಳಗಿನ ಒಂದು ರೀತಿಯ ದಿವ್ಯ ತೇಜಸ್ಸು, ರಾಕ್ಷಸತ್ವದೊಳಗಿನ ದೈವಿಕ ಗುಣ ನನಗೆ ಕಾಣಿಸಿತು. ಆದ್ದರಿಂದ ನಾನೇ ನಿನ್ನ ವಿಷಯದಲ್ಲಿ ರಿಸ್ಕ್ ತೆಗೆದುಕೊಂಡೆ. ಪ್ರಾರಂಭದಲ್ಲಿ ತುಂಬಾ ಕಷ್ಟವಾಯಿತು. ನಿನ್ನ ಆ ಯೌವ್ವನದ ಆಕ್ರೋಶ ಮಿತಿಮೀರಿತ್ತು. ಆದರೆ ಈ ಆರು ತಿಂಗಳ ನಂತರದಲ್ಲಿ ನನಗೆ ಹೆಮ್ಮೆ ಇದೆ. ನಿನ್ನ ಮೌನ ನನಗೆ ಇಷ್ಟವಾಗಿದೆ. ಈಗ ನಿನ್ನನ್ನು ನೇರವಾಗಿ ಒಂದು ಪ್ರಶ್ನೆ ಕೇಳುತ್ತೇನೆ “ನೀನು ಅಂದು ನಿನ್ನ ತಂದೆಯನ್ನು ರಾಡಿನಿಂದ ಹೊಡೆದದ್ದಕ್ಕೆ ನಿನಗೆ ಏನಾದರೂ ಪಶ್ಚಾತಾಪವಾಗುತ್ತಿದೆ
ಯೇ”

ಯುವಕ ಸ್ವಲ್ಪ ಹೊತ್ತು ಯೋಚಿಸಿ ದೀರ್ಘವಾಗಿ ಉಸಿರೆಳೆದುಕೊಂಡು *yes iam feeling guilty ” ( ಹೌದು ನನಗೆ ತಪ್ಪಿನ ಅರಿವಾಗಿದೆ ) ಎನ್ನುತ್ತಾನೆ.

ಆ ಕ್ಷಣವೇ ಮಾರ್ಗದರ್ಶಕ ತುಂಬಾ ಖುಷಿಯಾಗಿ ” ಎಸ್ ” ಎಂದು ಗಾಳಿಯಲ್ಲಿ ಕೈಗುದ್ದುತ್ತಾನೆ.

ದೃಶ್ಯ ಎಂಟು
*************

ಮಾಂಟೇಜ್ ದೃಶ್ಯಗಳು
————————– ಮಾರ್ನಿಂಗ್ ಜಾಗಿಂಗ್, ರನ್ನಿಂಗ್, ಬಾಕ್ಸಿಂಗ್, ಜಿಮ್, ಸ್ವಿಮ್ಮಿಂಗ್, ಯೋಗ, ಧ್ಯಾನ, ಪ್ರಾರ್ಥನೆ ಎಕ್ಸೆಟ್ರಾ ಈ ಎಲ್ಲಾ ಚಟುವಟಿಕೆಗಳನ್ನು ಅವನಿಂದ ನಿರಂತರವಾಗಿ ಮಾಡಿಸಲಾಗುತ್ತದೆ. ಹಾಗೆಯೇ ಸಾಕಷ್ಟು ಪುಸ್ತಕಗಳನ್ನು
ಓದಿಸಲಾಗುತ್ತದೆ. ಪರಿಣಿತರ ಕೌನ್ಸಿಲಿಂಗ್ ನೀಡಲಾಗುತ್ತದೆ.

ದೃಶ್ಯ ಒಂಬತ್ತು
******************

ಇದು ಮುಗಿಯುತ್ತಿದ್ದಂತೆ ಒಂದು ದಿನ ಆ ಯುವಕ ಮಾರ್ಗದರ್ಶಕನ ಬಳಿ ನಾನು ನನ್ನ ಮನೆಗೆ ಹೋಗಬೇಕು ಎಂದು ಕೇಳುತ್ತಾನೆ.
ಆಗ ಮಾರ್ಗದರ್ಶಕ “ಅದು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನೀನು ಮೇಜರ್ ಫ್ರೌಢ ಆಗುತ್ತೀಯಾ. ಆಗ ನಿನ್ನನ್ನು ಈ ರಿಮೆಂಡ್ ಹೋಂ ನಿಂದ ಜೈಲಿಗೆ ಕಳಿಸಲಾಗುತ್ತದೆ ಎನ್ನುತ್ತಾನೆ‌. ಯುವಕನಿಗೆ ಬೇಸರವಾಗುತ್ತದೆ.” ಈಗ ನನ್ನ ತಂದೆ ಹೇಗಿದ್ದಾರೆ ” ಎಂದು ಕೇಳುತ್ತಾನೆ. ಮಾರ್ಗದರ್ಶಕ “ನನಗೆ ಆ ಬಗ್ಗೆ ಮಾಹಿತಿ ಇಲ್ಲ . ಪೊಲೀಸರು ನಿನ್ನನ್ನು ಕರೆದುಕೊಂಡು ಬಂದಿದ್ದಾಗ ಕೊಟ್ಟ ಮಾಹಿತಿ ಮಾತ್ರ ತಿಳಿದಿದೆ ಅಷ್ಟೇ” ಎನ್ನುತ್ತಾನೆ.

ಆಗ ಯುವಕ “ಪ್ಲೀಸ್ ಒಂದು ದಿನವಾದರೂ ನನಗೆ ನನ್ನ ಮನೆಯವರನ್ನು ತೋರಿಸಿ ನಾನು ಇಡೀ ಜೀವನ ನಿಮ್ಮ ಋಣದಲ್ಲಿ ಇರುತ್ತೇನೆ” ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ.
ಆಗ ಮಾರ್ಗದರ್ಶಕ “ನೋಡೋಣ ವಾರ್ಡನ್ ಗೆ ಅಧಿಕೃತವಾಗಿ ಮನವಿ ಮಾಡಿಕೊಳ್ಳುತ್ತೇನೆ.
ಆದರೆ ವಾರ್ಡನ್ ಮನವಿಯನ್ನು ರಿಜೆಕ್ಟ್ ಮಾಡುತ್ತಾರೆ.
ಕೊನೆಗೆ ಮಾರ್ಗದರ್ಶಕ “ನೋಡು ಮಗು, ನಾನು ಮತ್ತೊಮ್ಮೆ ನಿನ್ನ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ಯಾರಿಗೂ ತಿಳಿಯದಂತೆ ನಿನ್ನನ್ನು ಎರಡು ಗಂಟೆಗಳ ಅವಧಿಗೆ ಮಾತ್ರ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ನಿಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚು ಸಾಧ್ಯವಿಲ್ಲ. ನಿನಗೆ ಒಪ್ಪಿಗೆಯೇ ಎಂದು ಕೇಳುತ್ತಾನೆ.
ಯುವಕ ಒಪ್ಪಿಕೊಳ್ಳುತ್ತಾನೆ..

ದೃಶ್ಯ ಹತ್ತು
************

ತಂದೆ ತಲೆಗೆ ಪೆಟ್ಟಾದ ಕಾರಣ ನೆನಪಿನ ಶಕ್ತಿ ಕಳೆದುಕೊಂಡು ಶೂನ್ಯದತ್ತ ದೃಷ್ಟಿಯನ್ನು ನೋಡುತ್ತಿರುತ್ತಾನೆ. ತಾಯಿ ಅವರ ಆರೈಕೆಯಲ್ಲಿ ಇದ್ದಾರೆ. ತಂದೆಗೆ ಮಗನನ್ನು ಗುರುತಿಸುವ ಶಕ್ತಿಯು ಇರುವುದಿಲ್ಲ. ತಂದೆಯ ಈ ಪರಿಸ್ಥಿತಿಯನ್ನು ನೋಡಿ ಯುವಕ ಕುಸಿದು ಬೀಳುತ್ತಾನೆ. ತಾಯಿಯನ್ನು ತಬ್ಬಿಕೊಂಡು ದುಃಖಿಸುತ್ತಾನೆ‌. ಕಾಲು ಹಿಡಿಯುತ್ತಾನೆ. ತನ್ನನ್ನು ಕ್ಷಮಿಸಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ.

ವಿಡಿಯೋ ಗೇಮ್ ಎಂಬ ಚಟ ಹೇಗೆ ನಮ್ಮ ಇಡೀ ಕುಟುಂಬವನ್ನು ಹೇಗೆ ಸರ್ವನಾಶ ಮಾಡಿತು ಎಂದು ಮನಮುಟ್ಟುವಂತೆ ವಿವರಿಸುತ್ತಾನೆ.

ಇಷ್ಟು ಸಂಭಾಷಣೆ ಮುಗಿಯುವ ಹೊತ್ತಿಗೆ ಸಮಯ ಮೀರಿರುತ್ತದೆ. ಆಗ ಮಾರ್ಗದರ್ಶಕ ಆತನನ್ನು ಹೊರಡಲು ಹೇಳುತ್ತಾನೆ. ಹುಡುಗನಿಗೆ ತುಂಬಾ ಬೇಸರವಾಗಿ “ಇಲ್ಲಾ, ಇನ್ನು ಸ್ವಲ್ಪ ಸಮಯ ಇರಬೇಕು” ಎನ್ನುತ್ತಾನೆ.

“ಇಲ್ಲ ಅದು ಸಾಧ್ಯವಿಲ್ಲ ನೀನೀಗ ಅಪರಾಧಿ. ಇನ್ನು ಜೈಲೇ ನಿನಗೆ ಗತಿ ಎಂದು ಹೇಳುತ್ತಾನೆ.

ಹುಡುಗ ಮತ್ತೆ ಕುಸಿಯುತ್ತಾನೆ. ಮತ್ತೆ ಎಲ್ಲರಿಗೂ ” ವಿಡಿಯೋ ಗೇಮ್ ಹೇಗೆ ಇಡೀ ಬದುಕನ್ನು ನಾಶ ಮಾಡುತ್ತದೆ. ಅದೇ ಶಕ್ತಿ ಸಮಯವನ್ನು ಕ್ರೀಡಾಂಗಣದ ಯಾವುದಾದರೂ ಕ್ರೀಡೆಯಲ್ಲಿ ಸಾಧಿಸಲು ಸಾಧ್ಯವಾದರೆ ನಮ್ಮ ಜೀವನ, ಆ ಮುಖಾಂತರ ಸಮಾಜ, ದೇಶ ಖಂಡಿತವಾಗಲೂ ಅಭಿವೃದ್ಧಿಯಾಗುತ್ತದೆ ” ಎಂದು ಹೇಳಿ ಹೊರಡಲು ಶುರು ಮಾಡುತ್ತಾನೆ.

ಆಗ ಮತ್ತೆ ಕೌನ್ಸಿಲರ್ “ಇಲ್ಲ ನಿನ್ನ ಮೇಲೆ ಯಾವುದೇ ಕಂಪ್ಲೇಂಟ್ ಆಗಿಲ್ಲ. ನಿನ್ನ ತಾಯಿ ನಿನ್ನನ್ನು ಕ್ಷಮಿಸಿದ್ದಾರೆ. ನಿನ್ನನು ಪರಿವರ್ತನೆ ಮಾಡಲು ಅವರು ನನ್ನ ಬಳಿ ಕರೆದುಕೊಂಡು ಬಂದರು. ನನ್ನ ಈ ಪ್ರಯತ್ನ ಯಶಸ್ವಿಯಾಗಿದೆ, ಸಾರ್ಥಕವಾಗಿದೆ. ನೀನಿನ್ನು ನಿನ್ನ ತಂದೆಯನ್ನು ಚೆನ್ನಾಗಿ ನೋಡಿಕೊಂಡು, ತಾಯಿಯನ್ನೂ ನೋಡಿಕೊಂಡು ಸುಂದರ ಪ್ರಾಮಾಣಿಕ ಬದುಕು ಕಟ್ಟಿಕೋ” ಎಂದು ಹೇಳುತ್ತಾನೆ..
ನಿಧಾನವಾಗಿ ದೃಶ್ಯ ಮುಕ್ತಾಯವಾಗುತ್ತದೆ….

ಮಕ್ಕಳಲ್ಲಿ ವಿಡಿಯೋ ಗೇಮ್ ಚಟ ಬಿಡಿಸಲು ಈ ಕಥೆಯನ್ನು ಉಪಯೋಗಿಸಿಕೊಳ್ಳಬಹುದು.

ರಚನೆ: ವಿವೇಕಾನಂದ. ಎಚ್ ಕೆ

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ.

Leave a Reply

Your email address will not be published. Required fields are marked *

error: Content is protected !!