ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಆಲಿಕಲ್ಲು ಸಹಿತ ಭಾರೀ ಮಳೆಗೆ ತಾಲೂಕಿನ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ನಗರದ ತಾಲ್ಲೂಕು ಕಚೇರಿ ರಸ್ತೆ, ಕಾಳಮ್ಮ ರಸ್ತೆ, ತೇರಿನ ಬೀದಿ – ಭುವನೇಶ್ವರಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ರಸ್ತೆಗೆ ಚರಂಡಿ ನೀರು ಬಂದಿರುವುದರಿಂದ ಗಬ್ಬು ವಾಸನೆಯಿಂದಾಗಿ ಸಾರ್ವಜನಿಕರು ಓಡಾಡಲು ಕಷ್ಟಕರವಾಗಿದೆ.
ಹೀರೇಕಾಯಿ, ಹೂಕೋಸು, ಹೂ ತೋಟ ನಾಶ
ಹಲವೆಡೆ ಸುರಿದ ಬಿರುಗಾಳಿ, ಆಲಿಕಲ್ಲು ಸಮೇತ ಭಾರಿ ಮಳೆಯಿಂದಾಗಿ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ರೈತ ರವಿಚಂದ್ರ ಎಂಬಾತ ತನ್ನ ಐದು ಎಕರೆಯಲ್ಲಿ ಬೆಳೆದಿದ್ದ ಹೀರೆಕಾಯಿ, ಹೂಕೋಸು, ಶಾಮಂತಿಗೆ ಹೂ ತೋಟ ಸಂಪೂರ್ಣ ನಾಶವಾಗಿದೆ. ತೋಟದಲ್ಲಿನ ಹೀರೇಕಾಯಿ ಗಿಡಗಳು ಹೂ ಬಿಟ್ಟು ಇನ್ನೇನು ಕೆಲವೇ ದಿನಗಳಲ್ಲಿ ಫಸಲು ನಿರೀಕ್ಷೆಯಲ್ಲಿದ್ದ ರೈತ ರವಿಚಂದ್ರ ಜೀವನಕ್ಕೆ ರಾತ್ರಿ ಸುರಿದ ಮಳೆ ಶಾಪವಾಗಿ ಪರಿಣಮಿಸಿದೆ.
ಇದರಿಂದ ಸುಮಾರು ಐದು ಲಕ್ಷ ರೂಪಾಯಿ ಬೆಳೆ ನಷ್ಟವಾಗಿದೆ. ಸಾಲ ಮಾಡಿ ತೋಟ ಮಾಡಿದ್ದೆ. ಹೂ ಬಿಟ್ಟು ಫಲವತ್ತಾದ ಫಲ ಬರುವಷ್ಟರಲ್ಲಿ ಮಳೆ ಬಿದ್ದು ಸಂಪೂರ್ಣ ತೋಟ ನಾಶವಾಗಿದೆ ಎಂದು ರೈತ ರವಿಚಂದ್ರ ಅಳಲು ತೋಡಿಕೊಂಡಿದ್ದಾರೆ.