
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್ ಡಿ ಎಂ ಸಿ ಹಾಗೂ ಶಿಕ್ಷಕ ವೃಂದ, ಸಾರ್ವಜನಿಕರ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಸಹ ಶಿಕ್ಷಕ ಅರುಣ್, ನಾನು ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸುಮಾರು 13 ವರ್ಷ 6 ತಿಂಗಳು ಮಕ್ಕಳಿಗೆ ಕನ್ನಡ ಹಾಗೂ ಇಂಗ್ಲೀಷ್ ಪಾಠ ಮಾಡುತ್ತಿದ್ದೆ. ಇದೀಗ ಬಾಶೆಟ್ಟಿಹಳ್ಳಿ ಅಜಾಕ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ವರ್ಗಾವಣೆಗೊಂಡಿದ್ದೇನೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯೇ ತಮಗೆ ಸಿಗುವ ನಿಜವಾದ ಪ್ರಶಸ್ತಿ. ಬಹಳ ನೋವಿನಿಂದ ಈ ಶಾಲೆಯನ್ನು ಬಿಟ್ಟುಹೋಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಖಂಡಿತಾ ಯಾವುದೇ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನುಡಿಗಳನ್ನಾಡಿದರು.
ನಂತರ ಎಸ್ ಡಿಎಂಸಿ ಅಧ್ಯಕ್ಷ ಅಜಯ್ ಮಾತನಾಡಿ, ಅರುಣ್ ಅವರು ಮಕ್ಕಳ ಪ್ರೀತಿಯ ಶಿಕ್ಷಕರಾಗಿದ್ದು, ಇತ್ತೀಚಿಗಷ್ಟೇ ಅವರಿಗೆ ವರ್ಗಾವಣೆಯಾಗಿದೆ. ಈ ವಿಷಯ ಮಕ್ಕಳಿಗೆ ಹಾಗೂ ನಮಗೆ ತೀವ್ರ ಆಘಾತವನ್ನುಂಟು ಮಾಡಿದೆ. ನಮ್ಮ ಕುಟುಂಬದಿಂದ ಒಬ್ಬ ಸದಸ್ಯನನ್ನು ಬೇರೆಡೆ ಕಳುಹಿಸುಕೊಡುತ್ತಿದ್ದೇವೆ ಎಂಬ ಭಾಸವಾಗುತ್ತಿದೆ. ಮುಂದೆ ನಮ್ಮ ಶಾಲೆಗೆ ಶಿಕ್ಷಕನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಮಕ್ಕಳು ಶಾಲೆಯ ಗೇಟ್ ಬಳಿ ಅಳುತ್ತಾ ನಿಂತು ಅರುಣ್ ಸರ್ ಪ್ಲೀಸ್ ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಅತ್ತಿದ್ದಾರೆ. ಮಕ್ಕಳ ಪ್ರೀತಿಯನ್ನು ಕಂಡು ಶಿಕ್ಷಕ ಅರುಣ್ ಕೂಡ ಭಾವುಕರಾಗಿದ್ದಾರೆ.
ಈ ವೇಳೆ ಶಾಲಾ ಶಿಕ್ಷಕರು, ಎಸ್ ಡಿಎಂಸಿ ಸದಸ್ಯರು, ಸಾರ್ವಜನಿಕರು, ಪೋಷಕರು, ಮಕ್ಕಳು ಉಪಸ್ಥಿತರುದ್ದರು…