ಆರ್. ನಾರಾಯಣಪ್ಪ ಸ್ಮರಣಾರ್ಥ ತೂಬಗೆರೆಯಲ್ಲಿ ಆರೋಗ್ಯ ಶಿಬಿರ–ಕಬ್ಬಡಿ ಪಂದ್ಯಾವಳಿ: ಶಾಸಕ ಧೀರಜ್ ಮುನಿರಾಜು ಚಾಲನೆ

 

ದೊಡ್ಡಬಳ್ಳಾಪುರ: ಸಮಾಜಸೇವೆಗೆ ಹೆಸರಾಗಿದ್ದ ಕೀರ್ತಿ ಶೇಷರಾದ ಆರ್. ನಾರಾಯಣಪ್ಪ ನೆನಪಿಗಾಗಿ, ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಅರ್ಥಪೂರ್ಣವಾಗಿ ನಡೆಯಿತು.

ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿ ಮಾತನಾಡಿ, “ತಮ್ಮ ಜೀವನಪೂರ್ತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆರ್. ನಾರಾಯಣಪ್ಪ ಅವರು ತೂಬಗೆರೆ ಭಾಗದಲ್ಲಿ ‘ಅನ್ನದಾನಿ ನಾರಾಯಣಪ್ಪ’ ಎಂದೇ ಖ್ಯಾತಿ ಪಡೆದಿದ್ದರು. ಅವರ ಅಗಲಿಕೆ ಸಮಾಜಕ್ಕೆ ಅಪಾರ ನಷ್ಟ. ಆದರೆ ಅವರ ಸೇವಾ ಪರಂಪರೆ ಇಂತಹ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಮುಂದುವರಿಯುತ್ತಿರುವುದು ಶ್ಲಾಘನೀಯ,” ಎಂದರು.

ಇದೇ ಸಂದರ್ಭದಲ್ಲಿ ವೈ.ಕೆ.ಸಿ ಕಬ್ಬಡಿ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಶ್ರೀ ಸಬ್ಸಿಡಿ ಆರ್. ನಾರಾಯಣಪ್ಪ ಕಪ್’ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

 

ದೇವನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಅಂಬರೀಶ್ ಗೌಡ ಮಾತನಾಡಿ, “ಯುವಕರು ದುಶ್ಚಟಗಳಿಂದ ದೂರವಿರಲು ಕ್ರೀಡಾಕೂಟಗಳು ಅಗತ್ಯ. ಇಲ್ಲಿ ಗೆಲುವು–ಸೋಲು ಮುಖ್ಯವಲ್ಲ, ಭಾಗವಹಿಸುವ ಮನೋಭಾವವೇ ಮಹತ್ವದ್ದು. ಕ್ರೀಡೆಯಲ್ಲಿ ಶಿಸ್ತು, ಪರಿಶ್ರಮ ಮತ್ತು ತಪಸ್ಸು ಅಡಗಿದೆ,” ಎಂದು ಹೇಳಿದರು.

ಆಕಾಶ್ ಆಸ್ಪತ್ರೆ, ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಹಾಗೂ ಟಿ.ಎನ್. ಕೃಷ್ಣಪ್ಪ ಅವರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನೂರಾರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಹನುಮಂತರಾಯಪ್ಪ, ಕೆಪಿಸಿಸಿ ಸದಸ್ಯ ಮುನಿರಾಜು, ಘಾಟಿ ಪ್ರಾಧಿಕಾರ ಸದಸ್ಯ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ವಕೀಲ ಪ್ರತಾಪ್, ಓಬದೇನಹಳ್ಳಿ ಮುನಿಯಪ್ಪ, ನಿವೃತ್ತ ಯೋಧ ಅನಂತರಾಜ ಗೋಪಾಲ್, ಮುಖಂಡ ಬಿ.ಕೆ. ನಾರಾಯಣಸ್ವಾಮಿ, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ರೈತ ಮುಖಂಡ ವಾಸು, ಮುಖಂಡರಾದ ಕನಕದಾಸ, ಧನುಂಜಯ, ಮುನಿಕೃಷ್ಣಪ್ಪ, ಯುವ ಮುಖಂಡ ಉದಯ ಆರಾಧ್ಯ, ಮಧು, ನಿಖಿಲ್, ವಿನಯ್, ಲಯನ್ಸ್ ಕ್ಲಬ್ ಸದಸ್ಯರು, ಆಕಾಶ್ ಆಸ್ಪತ್ರೆಯ ಪ್ರತಿನಿಧಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!