ಆರ್ ಟಿಐ ಕಾರ್ಯಕರ್ತ ಮೂರ್ತಿ ಹತ್ಯೆ ಖಂಡಿಸಿ ಪ್ರತಿಭಟನೆ

 

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಅಕ್ರಮ ಪ್ರಶ್ನಿಸಿದ್ದ ಸಾಮಾಜಿಕ ಕಾರ್ಯಕರ್ತ ಮೂರ್ತಿ ಹತ್ಯೆಗೆ ಸೂಕ್ತ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರುಆರೋಪಿಗಳನ್ನು ತಕ್ಷಣ ಬಂಧಿಸುವಂತೆ‌ ಒತ್ತಾಯಿಸಿದರು.

ಸಾತನೂರು ಹೋಬಳಿಯ ಹಲಸಿನಮರದೊಡ್ಡಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮೂರ್ತಿ ಅವರನ್ನು ಡಿ.22ರಂದು ಬೆಳಿಗ್ಗೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಹತ್ಯೆ ಖಂಡಿಸಿ ಭಾನುವಾರ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಗ್ರಾಮ ಪಂಚಾಯ್ತಿಯಲ್ಲಿ ಹಲವು ತಿಂಗಳಿನಿಂದ ನಡೆಯುತ್ತಿರುವ ನರೇಗಾ ಕಳಪೆ ಕಾಮಗಾರಿಗಳ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮೂರ್ತಿ ಅವರು ದೂರು ನೀಡಿದ್ದೆ ಕೊಲೆಗೆ ಕಾರಣವಾಗಿದೆ. ಮೂರ್ತಿ ಅವರು ಆ ಭಾಗದಲ್ಲಿ ಅನೇಕ ಅಕ್ರಮಗಳನ್ನು ಆರ್‌ಟಿಐ ಮೂಲಕ ಬಯಲಿಗೆ ಎಳೆದಿದ್ದರು. ಇಂತಹ ಹೋರಾಟಗಾರನನ್ನು ಹತ್ಯೆ‌ ಮಾಡಿರುವುದು ಖಂಡನೀಯ ಎಂದು‌ ವೇದಿಕೆಯ ರಾಜ್ಯಾಧ್ಯಕ್ಷ ವಿ.ಹನುಮಂತರಾಯಪ್ಪ ಹೇಳಿದರು.

ಮೂರ್ತಿ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೆ ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಕಾನೂನುಗಳಿಲ್ಲ. ಹಾಗಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.

ಆರ್‌ಟಿಐ ಕಾರ್ಯಕರ್ತ ಮೂರ್ತಿ ಹತ್ಯೆ ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಬೇಕು. ಕೊಲೆಗಾರರನ್ನು ಗಲ್ಲಿಗೇರಿಸಬೇಕು. ಮೂರ್ತಿ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ‌ ನೌಕರಿ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯ ಕಾರ್ಯಾಧ್ಯಕ್ಷ ಆನಂದಮೂರ್ತಿ,
ಉಪಾಧ್ಯಕ್ಷ, ನರಸಿಂಹಮೂರ್ತಿ,
ರಾಜ್ಯ ಮಾಧ್ಯಮ ವಕ್ತಾರ ಜೆ.ಮುನಿರಾಜು,
ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಎಸ್.ಬಿ.ರಮೇಶ್, ದೇವನಹಳ್ಳಿ ತಾಲ್ಲೂಕು ಅದ್ಯಕ್ಷ ಆರ್.ಕೆ.ಎಂ.ಗೌಡ
ದೇವನಹಳ್ಳಿ ಮಹಿಳಾ ಘಟಕದ ಪುಷ್ಪಲತ,
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ತ್ಯಾಗರಾಜು, ಸಮಾಜ ಸೇವಕ ಮಲ್ಲೇಶ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ನಂಜಪ್ಪ, ರಾಜ್ಯ ಸಮಿತಿ ಖಜಾಂಚಿ ಗಂಗಮ್ಮ, ಪೀರ್ ಪಾಷ, ವೈರ್ ಶಿವಕುಮಾರ್ ಇತರರು ಬಾಗವಹಿಸಿದ್ದರು.

Leave a Reply

Your email address will not be published. Required fields are marked *